ADVERTISEMENT

ಬೆಂಗಳೂರು | ವೃಷಭಾವತಿ: ಪುನಶ್ಚೇತನಕ್ಕೆ ಆರಂಭದ ಹೆಜ್ಜೆ

ಕಣಿವೆ ವ್ಯಾಪ್ತಿಯಲ್ಲಿ ಕೊಳಚೆ ನೀರು ನಿಯಂತ್ರಣಕ್ಕೆ ಪ್ರಥಮ ಹಂತದಲ್ಲಿ ಸಮಗ್ರ ಯೋಜನೆ

ಆರ್. ಮಂಜುನಾಥ್
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
ವೃಷಭಾವತಿ ನದಿ/ ಕಣಿವೆ ನಕ್ಷೆ
ವೃಷಭಾವತಿ ನದಿ/ ಕಣಿವೆ ನಕ್ಷೆ   

ಬೆಂಗಳೂರು: ನಗರದ ಹೊರವಲಯಕ್ಕೆ ಹೊಂದಿಕೊಂಡಂತೆ ಹರಿಯುವ ಸುವರ್ಣಮುಖಿ ನದಿ ಪುನಶ್ಚೇತನಕ್ಕೆ ಕ್ರಮ ಕೈಗೊಂಡಿರುವಂತೆ ವೃಷಭಾವತಿ ನದಿ ಪುನಶ್ಚೇತನಕ್ಕೂ ಯೋಜನೆ ರೂಪಿಸಬೇಕು ಎಂಬ ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಆರಂಭದ ಹೆಜ್ಜೆ ಇರಿಸಿದೆ.

ಶಾಲಿನಿ ರಜನೀಶ್‌ ಅವರು ಅಭಿವೃದ್ಧಿ ಆಯುಕ್ತರಾಗಿದ್ದಾಗ 2024ರ ಮೇ ತಿಂಗಳಲ್ಲಿ ಸುವರ್ಣಮುಖಿ ನದಿಯನ್ನು ಪುನಶ್ಚೇತನಗೊಳಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸೇರಿದ ಸಮಿತಿಯನ್ನು ರಚಿಸಿದ್ದರು. ‘ಸುವರ್ಣಮುಖಿ ನದಿ ಜಲಾನಯನ ಪುನಶ್ಚೇತನ ಯೋಜನೆ’ ಜಾರಿಗೆ ಅರಣ್ಯ, ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಸಿ. ರೇ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದ್ದರು. ಆ ಯೋಜನೆ ಕಾರ್ಯಗತವಾಗುತ್ತಿರುವ ಸಂದರ್ಭದಲ್ಲಿ, ಬಹುದಶಕಗಳಿಂದ ನಿರೀಕ್ಷಿಸಲಾಗಿದ್ದ ಬೆಂಗಳೂರಿನ ವೃಷಭಾವತಿ ನದಿ ಪುನಶ್ಚೇತನಕ್ಕೆ ಯೋಜನೆ ಸಿದ್ಧಪಡಿಸಲು ಸರ್ಕಾರ, ಬಿಬಿಎಂಪಿಗೆ ಸೂಚಿಸಿದೆ.

ಈ ಸೂಚನೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದಲ್ಲಿ ಬಿಬಿಎಂಪಿ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು, ಜಲಮಂಡಳಿ, ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಸಭೆ ಶನಿವಾರ ನಡೆದಿದೆ. 

ADVERTISEMENT

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಆಗಿರುವ ಅಥವಾ ಆಗಿರದ ಕೆರೆಗಳಲ್ಲಿರುವ ನೀರು ಕುಡಿಯಲು ಅಥವಾ ಸ್ನಾನ ಮಾಡಲು ಯೋಗ್ಯವಾಗಿಲ್ಲ. ಸಂಸ್ಕರಣೆ ಮಾಡಿದ ನಂತರವೂ ಕುಡಿಯುವ ಗುಣಮಟ್ಟವನ್ನು ಹೊಂದಿಲ್ಲ. ಎಲ್ಲ ಕೆರೆಗಳು ಮಾಲಿನ್ಯ ‘ಇ ದರ್ಜೆ’ಯಲ್ಲಿದ್ದು, ಯಾವುದಕ್ಕೂ ಬಳಸಲು ಯೋಗ್ಯವಲ್ಲ’ ಎಂದು ಸಭೆಯಲ್ಲಿ ಪ್ರಸ್ತುತಪಡಿಸಿದ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.

ವೃಷಭಾವತಿ ನದಿ ಅಥವಾ ಕಣಿವೆಯಲ್ಲಿ ಕುಡಿಯಲು ಯೋಗ್ಯವಾದ ನೀರು ಹರಿಸುವಂತೆ ಮಾಡಲಾಗಿದ್ದರೂ, ಮಾಲಿನ್ಯರಹಿತ ನೀರನ್ನು ಹರಿಸಿ ಅಂತರ್ಜಲ ಕಲುಷಿತವಾಗದಂತೆ ನಿರ್ವಹಣೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಸಾಧ್ಯವಾಗುವ ಸಮಗ್ರ ವರದಿಯನ್ನು ಇನ್ನೊಂದು ತಿಂಗಳಲ್ಲಿ ತಯಾರಿಸುವ ಜವಾಬ್ದಾರಿಯನ್ನು  ಅಧಿಕಾರಿಗಳಿಗೆ ವಹಿಸಲಾಗಿದೆ.

ವೃಷಭಾವತಿ ಕಣಿವೆ ಮಾಲಿನ್ಯದಿಂದ ಮುಕ್ತವಾಗಬೇಕಾದರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಾಚರಣೆ ಅತಿ ಪ್ರಮುಖವಾಗಿದೆ. ಆದ್ದರಿಂದ ವೃಷಭಾವತಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಸಮಗ್ರವಾದ ವರದಿ ಸಲ್ಲಿಸುವಂತೆ ಜಲಮಂಡಳಿಗೆ ಸೂಚಿಸಲಾಗಿದೆ.

56 ಕೆರೆಗಳಲ್ಲಿ 14 ಕೆರೆ ನಾಶ!

ವೃಷಭಾವತಿ ಕೋರಮಂಗಲ– ಚಲ್ಲಘಟ್ಟ ಹೆಬ್ಬಾಳ ಹಾಗೂ ಅರ್ಕಾವತಿ ಕಣಿವೆ ನಗರದಲ್ಲಿವೆ. ನಾಲ್ಕು ಕಣಿವೆಗಳಲ್ಲಿ ವೃಷಭಾವತಿ ಕಣಿವೆ ಶೇ 32ರಷ್ಟು ವ್ಯಾಪ್ತಿ ಹೊಂದಿದೆ. ಈ ಕಣಿವೆ ವ್ಯಾಪ್ತಿಯಲ್ಲಿ 56 ಕೆರೆಗಳಿವೆ ಎಂಬುದು ಹಳೆಯ ಭೂದಾಖಲೆಗಳಲ್ಲಿವೆ ಎಂಬುದನ್ನು ‘ವೃಷಭಾವತಿ ನದಿ ಪುನಶ್ಚೇತನ ಯೋಜನೆ’ಯ ಪ್ರಾಥಮಿಕ ವರದಿಯಲ್ಲಿ ದಾಖಲಿಸಲಾಗಿದೆ. ಸಾಣೆಗುರುವನಹಳ್ಳಿ ಶಿವನಹಳ್ಳಿ ಸೇರಿದಂತೆ 14 ಕೆರೆಗಳು ವೃಷಭಾವತಿ ಕಣಿವೆ ವ್ಯಾಪ್ತಿಯಲ್ಲಿ ಪ್ರಸ್ತುತ ಮುಚ್ಚಿಹೋಗಿವೆ. ನೀರಿರುವ 42 ಕೆರೆಗಳನ್ನು ಗುರುತಿಸಲಾಗಿದ್ದರೂ ಅರಮನೆ ಮೈದಾನ ಕೆರೆ ಕೆಂಪಾಂಬುದಿ ಕೆರೆ ಬಸವಪ್ಪನಕಟ್ಟೆ ಶ್ರೀಗಂಧದ ಕಾವಲು ವರಾಹಸಂದ್ರ ಕೆರೆಗಳ ಸರ್ವೆ ಕಾರ್ಯದ ಮಾಹಿತಿಗಳೇ ವರದಿಯಲ್ಲಿಲ್ಲ.  ಪಿಳ್ಳಪ್ಪನಹಳ್ಳಿ ನಾಗರಬಾವಿ ಕೆಂಚೇನಹಳ್ಳಿ ಹೊಸಕೆರೆಹಳ್ಳಿ ಯಡಿಯೂರು ಗೌಡನಪಾಳ್ಯ ಬಿಕಾಸಿಪುರ ಗುಬ್ಬಲಾಳು ಮೈಲಸಂದ್ರ ಬ್ಯಾಪನಪಾಳ್ಯ ಕುಂಟೆ ಕೆರೆಗಳಲ್ಲಿ ನೀರಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಕೆರೆಗಳಲ್ಲಿ ಹಲವು ಕೆರೆಗಳನ್ನು ಬಿಬಿಎಂಪಿ ಅಭಿವೃದ್ಧಿ ಮಾಡಿದೆ. ಆದರೆ ಕಂದಾಯ ಇಲಾಖೆಯ ಯಡವಟ್ಟಿನಿಂದ ಸರ್ವೆಗಳು ದಾಖಲೆಗಳು ಲಭ್ಯವಾಗುತ್ತಿಲ್ಲ. 

ಸಮಗ್ರ ಯೋಜನೆ ರೂಪಿಸಲು ಸೂಚನೆ

‘ವೃಷಭಾವತಿ ಕಣಿವೆಗೆ ಕೊಳಚೆ ನೀರು ಸೇರಿ ಕಲುಷಿತ ಆಗುವುದನ್ನು ತಪ್ಪಿಸುವ ಸಲುವಾಗಿ ಸಮಗ್ರ ಯೋಜನೆ ರೂಪಿಸಲು ಪಾಲಿಕೆ ಮಾಲಿನ್ಯ ನಿಯಂತ್ರಣ ಮಂಡಳಿ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.

‘ವೃಷಭಾವತಿ ಕಣಿವೆಗೆ ಎಲ್ಲೆಲ್ಲಿ ಕೊಳಚೆ ನೀರು ಬರುತ್ತಿದೆ ಎಂಬುದನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು. ಅಲ್ಲದೆ ನದಿ ಪಕ್ಕದಲ್ಲಿ ಎಷ್ಟು ಅಪಾರ್ಟ್‌ಮೆಂಟ್‌ಗಳಿವೆ ಅವುಗಳಲ್ಲಿ ಎಷ್ಟು ಕೊಳಚೆ ನೀರು ನದಿಗೆ ನೇರವಾಗಿ ಬರುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ತ್ಯಾಜ್ಯನೀರು ಸಂಸ್ಕರಣೆ ಘಟಕಗಳು (ಎಸ್‌ಟಿಪಿ) ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲೂ ಸೂಚಿಸಲಾಗಿದೆ’ ಎಂದರು.

‘ಜಲಮಂಡಳಿ ವತಿಯಿಂದ ಎಷ್ಟು ಎಸ್‌ಟಿಪಿ ಕಾರ್ಯನಿರ್ವಹಿಸುತ್ತಿವೆ. ಎಷ್ಟು ಹೊಸ ಎಸ್‌ಟಿಪಿಗಳ ಅಗತ್ಯವಿದೆ ಎಂಬುದರ ಮಾಹಿತಿ ಜೊತೆಗೆ ಕೊಳಚೆ ನೀರು ಪೈಪ್‌ ಮೂಲಕವೇ ಎಸ್‌ಟಿಪಿಗೆ ಹೋಗುವಂತೆ ಎಲ್ಲೆಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಲು ಹೇಳಲಾಗಿದೆ’ ಎಂದರು.

‘ವೃಷಭಾವತಿ ಕಣಿವೆಗೆ ಹೊಂದಿಕೊಂಡಂತೆ 42 ಕೆರೆಗಳಿದ್ದು ಅವುಗಳಲ್ಲಿರುವ ಒತ್ತುವರಿಯನ್ನು ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಯಿಂದ ಆದೇಶ ಪಡೆದು ಒತ್ತುವರಿ ತೆರವುಗೊಳಿಸಲು ಹೇಳಲಾಗಿದೆ’ ಎಂದರು.

ವೃಷಭಾವತಿ ಕಣಿವೆಗೆ ಕಸ ಹಾಕದಂತೆ ಅಗತ್ಯವಿರುವ ಕಡೆ ಫೆನ್ಸಿಂಗ್‌ ಅಳವಡಿಸಬೇಕು. ಜೆಸಿಬಿಗಳ ಮೂಲಕ ಹೂಳೆತ್ತಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.