ADVERTISEMENT

ಪಾಲಿಕೆಯಲ್ಲೂ ಮೈತ್ರಿಗೆ ಕಂಟಕ: ಮುಂದಿನ ಮೇಯರ್ ಕುರಿತು ಚರ್ಚೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 19:43 IST
Last Updated 6 ಜುಲೈ 2019, 19:43 IST
   

ಬೆಂಗಳೂರು: 13 ಶಾಸಕರ ರಾಜೀನಾಮೆ ಅಂಗೀಕಾರಗೊಂಡರೆ ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರವೇ ಅಲ್ಪಮತಕ್ಕೆ ಕುಸಿಯುವ ಆತಂಕ ಎದುರಾಗಿರುವ ಬೆನ್ನಲ್ಲೇ ಇದರ ಕರಿನೆರಳು ಬಿಬಿಎಂಪಿಯ ಮೈತ್ರಿಕೂಟದ ಮೇಲೂ ಬೀಳುವ ಸಾಧ್ಯತೆ ಇದೆ.

ಮೇಯರ್‌ ಗಂಗಾಂಬಿಕೆ ಅವರ ಅಧಿಕಾರದ ಅವಧಿ ಮುಂಬರುವ ಸೆ.28ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಮೇಯರ್‌ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದವರೇ ಆಗಿರುತ್ತಾರಾ ಎಂಬ ಬಗ್ಗೆ ಈಗಲೇ ಜಿಜ್ಞಾಸೆ ಆರಂಭವಾಗಿದೆ.

ಪಾಲಿಕೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟವು ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಕಾಂಗ್ರೆಸ್‌ನ ಶಾಸಕರಾದ ರಾಮಲಿಂಗಾ ರೆಡ್ಡಿ, ಎಸ್‌.ಟಿ.ಸೊಮಶೇಖರ್‌, ಮುನಿರತ್ನ ಹಾಗೂ ಬೈರತಿ ಬಸವರಾಜು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಇದ್ದಾಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪಾಲಿಕೆ ಸದಸ್ಯರು ಬಿಜೆಪಿ ನಾಯಕರ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಂಡವರೇ ಈ ಶಾಸಕರು. ಪಾಲಿಕೆ ಸದಸ್ಯರ ರೆಸಾರ್ಟ್‌ ವಾಸ್ತವ್ಯ ಹಾಗೂ ಅವರನ್ನು ಮೇಯರ್‌ ಚುನಾವಣೆ ಸಲುವಾಗಿ ಬಸ್‌ಗಳಲ್ಲಿ ಪಾಲಿಕೆ ಕೇಂದ್ರ ಕಚೇರಿಗೆ ಸುರಕ್ಷಿತವಾಗಿ ಕರೆ ತರುವ ಹೊಣೆಯನ್ನೂ ಈ ನಾಲ್ವರು ನಾಯಕರೇ ಸೇರಿ ನಿಭಾಯಿಸಿದ್ದರು.

ADVERTISEMENT

ಮೇಯರ್‌ ಆಯ್ಕೆ ವೇಳೆ ಪ್ರತಿ ಬಾರಿ ಕಗ್ಗಂಟು ಎದುರಾದಾಗಲೂ, ಪಕ್ಷೇತರ ಸದಸ್ಯರ ಬೆಂಬಲ ಪಡೆದು ತಮ್ಮ ಪಕ್ಷದವರೇ ನಗರದ ಪ್ರಥಮ ಪ್ರಜೆಯಾಗಿ ಆರಿಸಿ ಬರುವಂತೆ ಕಾರ್ಯತಂತ್ರ ರೂಪಿಸುವಲ್ಲಿಯೂ ಈ ನಾಲ್ವರು ಶಾಸಕರೇ ನಿರ್ಣಾಯಕ ಪಾತ್ರ ವಹಿಸಿದ್ದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ, ಪಾಲಿಕೆಯಲ್ಲೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಮುಂದುವರಿಯಲು ಸಾಧ್ಯವೇ ಇಲ್ಲ. ಶಾಸಕ ರಾಮಲಿಂಗಾ ರೆಡ್ಡಿ ಅವರು ಕಾಂಗ್ರೆಸ್‌ ಪಕ್ಷದ ಜೊತೆಗೆ ನಿಲ್ಲದೇ ಹೋದರೆ ಇಲ್ಲೂ ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುವುದು ಖಚಿತ’ ಎಂದು ಕಾಂಗ್ರೆಸ್‌ನ ಹಿರಿಯ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆ ಸದಸ್ಯರಲ್ಲಿ 30ಕ್ಕೂ ಅಧಿಕ ಮಂದಿ ರೆಡ್ಡಿ ಅವರ ಜೊತೆ ಉತ್ತಮ ನಂಟು ಹೊಂದಿದ್ದಾರೆ. ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜು ಅವರ ಜೊತೆಗೂ ಕೆಲವು ಸದಸ್ಯರು ಗುರುತಿಸಿಕೊಂಡಿದ್ದಾರೆ. ಅವರನ್ನೆಲ್ಲ ಪಕ್ಷದ ಜೊತೆಗೆ ಉಳಿಸಿಕೊಳ್ಳದಿದ್ದರೆ ಪಾಲಿಕೆಯಲ್ಲಿ ಮೈತ್ರಿ ಕನಸಿನ ಮಾತು’ ಎಂದು ಅವರು ತಿಳಿಸಿದರು.

2019–20ನೇ ಸಾಲಿನಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲು. ಶಂಕರ ಮಠ ವಾರ್ಡ್‌ನ ಸದಸ್ಯ ಎಂ.ಶಿವರಾಜು, ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಸದಸ್ಯ ಆರ್‌.ಎಸ್‌.ಸತ್ಯನಾರಾಯಣ ಹಾಗೂ ಜಯಮಹಲ್‌ ವಾರ್ಡ್‌ನ ಸದಸ್ಯ ಎಂ.ಕೆ.ಗುಣಶೇಖರ್ ಅವರು ಮೇಯರ್‌ ಸ್ಥಾನದ ಆಕಾಂಕ್ಷಿಗಳು. ಉಪ ಮೇಯರ್‌ ಸ್ಥಾನಕ್ಕೆ ಕಾವಲ್‌ಭೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್‌ ಹಾಗೂ ಪಾದರಾಯನಪುರ ವಾರ್ಡ್‌ನ ಇಮ್ರಾನ್‌ ಪಾಷಾ ಆಕಾಂಕ್ಷಿಗಳು. ಜೆಡಿಎಸ್‌ ಚಿಹ್ನೆಯಿಂದ ಆಯ್ಕೆಯಾಗಿರುವ 14 ಪಾಲಿಕೆ ಸದಸ್ಯರ ಪೈಕಿ ಇಬ್ಬರು ಹಾಗೂ ಆರು ಮಂದಿ ಪಕ್ಷೇತರ ಸದಸ್ಯರ ಪೈಕಿ ಇಬ್ಬರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು.

2018ರಲ್ಲಿ ಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಬೆಂಬಲಿಸಿದ್ದ ಕೆಲವು ಪಕ್ಷೇತರ ಸದಸ್ಯರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದಾರೆ. ಈಗಿನ ಬಲಾಬಲದ ಪ್ರಕಾರ ಮೇಯರ್‌ ಚುನಾವಣೆಯಲ್ಲಿ ಒಟ್ಟು 261 ಮಂದಿಗೆ ಮತದಾನದ ಹಕ್ಕು ಇದೆ. ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ 125 ಹಾಗೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟಕ್ಕೆ 129 ಮತಗಳಿವೆ. ಮೈತ್ರಿ ಪತನವಾದರೆ ಈ ಲೆಕ್ಕಾಚಾರಗಳೆಲ್ಲ ತಿರುವು ಮುರುವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.