ADVERTISEMENT

ರಾಜಧಾನಿ ಒಡಲದನಿ | ಕೆಆರ್‌ಐಡಿಎಲ್ ಮೇಲೇಕೆ ಪ್ರೀತಿ?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 20:19 IST
Last Updated 15 ಫೆಬ್ರುವರಿ 2022, 20:19 IST
ರಾಜಧಾನಿ ಒಡಲದನಿ
ರಾಜಧಾನಿ ಒಡಲದನಿ   

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಮೂಲಕ ಅಭಿವೃದ್ಧಿಪಡಿಸುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹಲವು ವಿಭಾಗಗಳಲ್ಲಿ ಎಂಜಿನಿಯರ್‌ಗಳ ಹಿಂಡನ್ನೇ ಹೊಂದಿರುವ ಪಾಲಿಕೆ ತನ್ನ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಿ ಶೇ 12ರಷ್ಟು ಸೇವಾ ಶುಲ್ಕ ಪಾವತಿಸುವುದು ಏಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿವೆ. ₹2 ಕೋಟಿ ತನಕದ ಕಾಮಗಾರಿಗಳನ್ನು ಟೆಂಡರ್ ಕರೆಯದೇ ನಿರ್ವಹಿಸುವ ಅಧಿಕಾರವನ್ನುಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಇದೇ ಕಾರಣಕ್ಕೆ ಕೆಆರ್‌ಐಡಿಎಲ್‌ ಮೇಲೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪ್ರೀತಿ ಎಂಬ ಅಭಿಪ್ರಾಯಗಳು ಗುತ್ತಿಗೆದಾರ ವಲಯದಲ್ಲಿವೆ.

ಹೆಸರೇ ಸೂಚಿಸುವಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಕಾಮಗಾರಿ ನಿರ್ವಹಿಸಬೇಕಾದ ನಿಗಮವು ನಗರ ಪ್ರದೇಶದ ಅದರಲ್ಲೂ ಬೆಂಗಳೂರು ಮಹಾನಗರದ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಅದಕ್ಕೆ ಬೇಕಿರುವ ತಿದ್ದುಪಡಿಯನ್ನೂ ಸರ್ಕಾರ ಮಾಡಿಕೊಂಡಿದೆ. ಕೆಆರ್‌ಐಡಿಎಲ್ ಮೇಲೆ ಸರ್ಕಾರಕ್ಕೆ ಪ್ರೀತಿ ಏಕೆ ಎಂಬುದರ ಕುರಿತು ‘ಪ್ರಜಾವಾಣಿ’ ಜತೆ ಹೋರಾಟಗಾರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

‘ಜನಪ್ರತಿನಿಧಿಗಳ ಸ್ವಹಿತಾಸಕ್ತಿಯೇ ಕಾರಣ’

ಕೆಆರ್‌ಐಡಿಎಲ್‌ ಸ್ಥಾಪನೆಯ ಮೂಲ ಉದ್ದೇಶವೇ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಿತ್ತು. ನಗರ ಪ್ರದೇಶಕ್ಕೂ ಅನ್ವಯವಾಗುವಂತೆ ಈಗ ತಿದ್ದುಪಡಿ ಮಾಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಗೆ (ಕೆಟಿಪಿಪಿ) ತಿದ್ದುಪಡಿ ಮಾಡುವ ಮೂಲಕ ಕಾಯ್ದೆಗೆ ಅರ್ಥವಿಲ್ಲದಂತೆ ಮಾಡಲಾಗಿದೆ. ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವುದರಿಂದ ಸರ್ಕಾರಕ್ಕೆ ಆಗಲಿರುವ ನಷ್ಟದ ಬಗ್ಗೆ 2018ರಲ್ಲಿ ನಗರಾಭಿವೃದ್ಧಿ ಇಲಾಖೆಯೇ ಗುರುತಿಸಿ ಸುತ್ತೋಲೆಯೊಂದನ್ನು ಹೊರಡಿಸಿದೆ. ಟೆಂಡರ್ ಪ್ರಕ್ರಿಯೆ ನಡೆಸಿದರೆ ಬಿಡ್ಡುದಾರರ ನಡುವೆ ಸ್ಪರ್ಧೆ ಏರ್ಪಟ್ಟು ಸರಾಸರಿ ಶೇ 15ರ ತನಕ ಕಾಮಗಾರಿಯ ಮೊತ್ತ ಕಡಿಮೆಯಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಆದರೂ ಕಾಯ್ದೆಗೆ ತಿದ್ದುಪಡಿ ತಂದು ಕೆಆರ್‌ಐಡಿಎಲ್‌ಗೆ ಹೆಚ್ಚು ಕೆಲಸಗಳನ್ನು ವಹಿಸುತ್ತಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಸ್ವಹಿತಾಸಕ್ತಿ ಒಂದೇ ಇದಕ್ಕೆ ಕಾರಣ.

-ಎನ್‌.ಮಹದೇವಸ್ವಾಮಿ,ಎಸ್‌ಸಿಎಸ್‌ಟಿಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ

‘ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕೆಆರ್‌ಐಡಿಎಲ್’

ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಕೆಆರ್‌ಐಡಿಎಲ್ ಜತೆ ವಿಶೇಷ ಸಂಬಂಧವಿದೆ. ಅದು ಭ್ರಷ್ಟಾಚಾರದ ಸಂಬಂಧ. ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲು ಮತ್ತು ಕಾನೂನು ಚೌಕಟ್ಟಿನಿಂದ ನುಸುಳಿ ಟೆಂಡರ್ ಕರೆಯದೆ ತಮಗೆ ಬೇಕಾದವರಿಗೆ ಕಾಮಗಾರಿ ನೀಡಲು ಸೃಷ್ಟಿಸಿಕೊಂಡಿರುವ ವ್ಯವಸ್ಥೆ ಇದಾಗಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕೆಆರ್‌ಐಡಿಎಲ್. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸಿ ಕೆಟಿಪಿಪಿ ಕಾಯ್ದೆಯಿಂದ ಈ ಸಂಸ್ಥೆಗೆ ವಿನಾಯಿತಿ ನೀಡಿದೆ. ಬೆಂಗಳೂರಿನ ಶಾಸಕರ ಒತ್ತಡಕ್ಕೆ ಮಣಿಯುವ ಸರ್ಕಾರ, ವಿಶೇಷ ಅನುದಾನ ಎಂದು ಸಾವಿರಾರು ಕೋಟಿ ಬಿಡುಗಡೆ ಮಾಡಿ ಇಂತಹ ವ್ಯವಸ್ಥೆಯನ್ನು ಪೋಷಿಸುತ್ತಿದೆ. ಬಿಬಿಎಂಪಿಯನ್ನು ಸಬಲಗೊಳಿಸುವ ಬದಲು ತನ್ನ ಅಡಿಯಾಳಾಗಿ ಮಾಡಿಕೊಂಡು ಇಂತಹ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ನಿರ್ಮಿಸಿಕೊಂಡಿದೆ.

-ಸಿ.ಎನ್. ದೀಪಕ್,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಪ್ರಧಾನ ಕಾರ್ಯದರ್ಶಿ

ನಿಗಮ ಮುಚ್ಚದಿದ್ದರೆ ಕಾನೂನು ಹೋರಾಟ

ಕಳೆದ ಮೂರು ವರ್ಷಗಳ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಬಿ.ಎಸ್.ಯಡಿಯೂರಪ್ಪ ಅವರ ಕಾಲದಿಂದ ಆರಂಭವಾಗಿ ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಾಗಿದೆ. ಲೋಕಾಯುಕ್ತರ ವರದಿಗಳಿಗೂ ಬೆಲೆ ಇಲ್ಲವಾಗಿದೆ. ಟೆಂಡರ್ ಇಲ್ಲದೆ ಕಾಮಗಾರಿಗಳನ್ನು ನಿರ್ವಹಿಸುವ ವ್ಯವಸ್ಥೆ ಎಂದರೆ ಅದರಲ್ಲಿ ಭ್ರಷ್ಟಾಚಾರ ಅಡಗಿದೆ ಎಂಬುದು ಅರ್ಥವಾಗುತ್ತದೆ.ಶೇ 40ರಷ್ಟು ಲಂಚದ ಆಡಳಿತ ಎಂಬುದರಲ್ಲಿ ಅನುಮಾನ ಇಲ್ಲ. ಬಿಬಿಎಂಪಿಯಲ್ಲಿ ಈಗ ಜನಪ್ರತಿನಿಧಿಗಳು ಇಲ್ಲವಾಗಿದ್ದು, ಪ್ರಶ್ನೆ ಮಾಡುವವರೇ ಇಲ್ಲವಾಗಿದೆ. ಕೆಆರ್‌ಐಡಿಎಲ್‌ ಮುಚ್ಚುವ ನಿರ್ಧಾರವನ್ನು ಮುಖ್ಯಮಂತ್ರಿ ಮಾಡಬೇಕು. ಕೆಆರ್‌ಐಡಿಎಲ್‌ ಮೂಲಕ ಆಗಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು. ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ಆಸ್ತಿ ಜಪ್ತಿ ಮಾಡಬೇಕು. ಕೆಆರ್‌ಐಡಿಎಲ್ ಮುಚ್ಚದಿದ್ದರೆ ಕಾನೂನು ಹೋರಾಟ ನಡೆಸಲು ನಾವು ಸಜ್ಜಾಗುತ್ತಿದ್ದೇವೆ.

-ಶಾಂತಲಾ ದಾಮ್ಲೆ,ಆಮ್‌ ಆದ್ಮಿ ಪಕ್ಷದರಾಜ್ಯ ಘಟಕದ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.