ADVERTISEMENT

ಕೆಂಪೇಗೌಡ ಪ್ರಶಸ್ತಿ: ಶಿಸ್ತು ತರಲು ಪಾಲಿಕೆ ಕ್ರಮ

*ಈ ಬಾರಿ 52 ಮಂದಿಗಷ್ಟೇ ಪ್ರಶಸ್ತಿ? *ಆಯ್ಕೆಗೆ ತಜ್ಞರ ಸಮಿತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:19 IST
Last Updated 6 ಜೂನ್ 2019, 20:19 IST
   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡುವ ವಿಚಾರದಲ್ಲಿ ಪ್ರತಿವರ್ಷವೂ ಟೀಕೆಗಳ ಸುರಿಮಳೆ ಎದುರಿಸುತ್ತಿರುವ ಬಿಬಿಎಂಪಿ ಈ ಬಾರಿ ಶಿಸ್ತು ರೂಪಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ. ಪ್ರಶಸ್ತಿಗೆ ಅರ್ಹರನ್ನು ಮಾತ್ರ ಆಯ್ಕೆ ಮಾಡುವ ಸಲುವಾಗಿ ಮಾನದಂಡ ರೂಪಿಸಲಿದೆ. ಆಯ್ಕೆ ಪ್ರಕ್ರಿಯೆ ಇನ್ನು ಎರಡು ಹಂತದಲ್ಲಿ ನಡೆಯಲಿದೆ.

ಕೆಂಪೇಗೌಡ ದಿನಾಚರಣೆ ಹಾಗೂ ಪ್ರಶಸ್ತಿಗೆ ಆಯ್ಕೆ ಮಾನದಂಡಗಳನ್ನು ರೂಪಿಸುವ ಕುರಿತು ಮೇಯರ್‌ ಗಂಗಾಂಬಿಕೆ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು.

‘ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಬೇಕು ಎಂಬುದನ್ನು ನಿರ್ಧರಿಸಲು ತಜ್ಞರ ಸಮಿತಿ ರಚಿಸಬೇಕು. ಆ ಸಮಿತಿ ಅರ್ಜಿ ಆಹ್ವಾನಿಸಿ ಸಾಧಕರ ಪಟ್ಟಿ ತಯಾರಿಸಬೇಕು. ಆ ಪಟ್ಟಿಯಲ್ಲಿರುವ ಎಲ್ಲರಿಗೂ ಪ್ರಶಸ್ತಿ ನೀಡುವ ಬದಲು ಅರ್ಹರಿಗಷ್ಟೇ ಈ ಗೌರವ ಸಿಗುವಂತೆ ನೋಡಿಕೊಳ್ಳಬೇಕು. ಪ್ರಶಸ್ತಿಗೆ ಅರ್ಹರನ್ನು ಆರಿಸಲು ಆಯ್ಕೆ ಸಮಿತಿ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

ತಜ್ಞರ ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಇಷ್ಟು ವರ್ಷ ಸ್ವತಃ ಮೇಯರ್‌ ಅವರೇ ಈ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತಿದ್ದರು. ವರ್ಷದಲ್ಲಿ ಇಂತಿಷ್ಟೇ ಮಂದಿಗೆ ಈ ಪ್ರಶಸ್ತಿ ನೀಡಬೇಕು ಎಂಬ ಮಿತಿ ಇಲ್ಲ. ಪ್ರಶಸ್ತಿ ಪಡೆಯುವುದಕ್ಕೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು ಎಂಬ ಬಗ್ಗೆ ನಿರ್ದಿಷ್ಟ ಮಾನದಂಡವನ್ನು ಪಾಲಿಕೆ ಹೊಂದಿರಲಿಲ್ಲ. ಹಾಗಾಗಿ ಈ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ವರ್ಷವರ್ಷವೂ ಬೆಳೆಯುತ್ತಲೇ ಇತ್ತು.

ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿ ಪ್ರಕಟವಾದ ಬಳಿವೂ ಪಾಲಿಕೆ ಸದಸ್ಯರು ಹಾಗೂ ರಾಜಕೀಯ ಮುಖಂಡರು ಮೇಯರ್‌ ಮೇಲೆ ಒತ್ತಡ ಹೇರಿ ತಮಗೆ ಬೇಕಾದವರ ಹೆಸರುಗಳನ್ನು ಕೊನೆಕ್ಷಣದಲ್ಲಿ ಸೇರಿಸುತ್ತಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದಂತೆಯೇ ವೇದಿಕೆಯಲ್ಲೇ ಹೊಸ ಹೆಸರುಗಳನ್ನು ಸೇರ್ಪಡೆ ಮಾಡಲಾಗುತ್ತಿತ್ತು. 2018ರಲ್ಲಿ ಪ್ರಶಸ್ತಿ ಘೋಷಣೆಯಾಗುವಾಗ 380 ಇದ್ದ ಪುರಸ್ಕೃತರ ಸಂಖ್ಯೆ ಸಮಾರಂಭ ಮುಕ್ತಾಯವಾಗುವಷ್ಟರಲ್ಲಿ 532ಕ್ಕೆ ಏರಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭಗಳೂ ಅವ್ಯವಸ್ಥೆಯ ಆಗರವಾಗಿರುತ್ತಿದ್ದವು. ಪ್ರಶಸ್ತಿ ಪುರಸ್ಕೃತರನ್ನು ಗೌರವಯುತವಾಗಿ ನಡೆಸಿಕೊಳ್ಳುವ ವ್ಯವಸ್ಥೆಯನ್ನೂ ಪಾಲಿಕೆ ಮಾಡುತ್ತಿರಲಿಲ್ಲ. ನಿಜವಾದ ಅರ್ಹತೆಯಿಂದ ಈ ಪ್ರಶಸ್ತಿಗೆ ಆಯ್ಕೆ ಆದವರಿಗೆ ಈ ಎಲ್ಲ ಗೊಂದಲಗಳು ಮುಜುಗರವನ್ನುಂಟು ಮಾಡುತ್ತಿದ್ದವು.2018ರಲ್ಲಿ ಕೆಲವು ಸಾಹಿತಿಗಳು ಹಾಗೂ ರಂಗಕರ್ಮಿಗಳು ಈ ಅವ್ಯವಸ್ಥೆ ಬಗ್ಗೆ ಬಹಿರಂಗವಾಗಿಯೇ ದನಿ ಎತ್ತಿದ್ದರು.

ಈ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರೂ ಪಾಲಿಕೆ ಆಡಳಿತ ಪಕ್ಷದ ಕಿವಿ ಹಿಂಡಿದ್ದರು. ಪ್ರಶಸ್ತಿ ನೀಡಲು ಸೂಕ್ತ ಮಾನದಂಡ ರೂಪಿಸುವಂತೆ ಸೂಚಿಸಿದ್ದರು.

ಅರ್ಜಿ ಆಹ್ವಾನ– ಜೂ. 20 ಕೊನೆ ದಿನ

ಕನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಅರ್ಹರಿಂದ ಪಾಲಿಕೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಇದೇ 20ರ ಒಳಗೆ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಅರ್ಹತೆಯ ಮಾನದಂಡ ಯಾವುದು, ಅರ್ಜಿ ಜೊತೆ ಯಾವ ವಿವರಗಳನ್ನು ಸಲ್ಲಿಸಬೇಕು ಎಂಬುದನ್ನು ಪಾಲಿಕೆ ಸ್ಪಷ್ಟಪಡಿಸಿಲ್ಲ.

ಪ್ರಶಸ್ತಿ ಮೊತ್ತ ಹೆಚ್ಚಳ?

ಈ ಬಾರಿ ಪ್ರಶಸ್ತಿಯ ಸಂಖ್ಯೆಯನ್ನು ಕಡಿಮೆಗೊಳಿಸುವುದರಿಂದ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪವೂ ಪಾಲಿಕೆ ಮುಂದಿದೆ.

2016ರಲ್ಲಿ ಪುರಸ್ಕೃತರಿಗೆ ₹ 25 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಲಾಗಿತ್ತು. ನಂತರದ ಎರಡು ವರ್ಷಗಳಲ್ಲಿ ಪುರಸ್ಕೃತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಮೊತ್ತವನ್ನು ₹ 15 ಸಾವಿರಕ್ಕೆ ಇಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.