ADVERTISEMENT

ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್ ಹಾಸಿಗೆ ಕೊರತೆ

ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ನಿಗಾ ಇಡುವುದೇ ಸವಾಲು

ಗುರು ಪಿ.ಎಸ್‌
Published 25 ಏಪ್ರಿಲ್ 2021, 21:14 IST
Last Updated 25 ಏಪ್ರಿಲ್ 2021, 21:14 IST
ಬ್ರ್ಯಾಂಡ್‌ ಬೆಂಗಳೂರು ಸರಣಿಗೆ – ವಿಲ್ಸನ್‌ ಗಾರ್ಡನ್‌ನಲ್ಲಿರುವ ಕೋವಿಡ್ ಆರೈಕೆ ಕೇಂದ್ರ. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.
ಬ್ರ್ಯಾಂಡ್‌ ಬೆಂಗಳೂರು ಸರಣಿಗೆ – ವಿಲ್ಸನ್‌ ಗಾರ್ಡನ್‌ನಲ್ಲಿರುವ ಕೋವಿಡ್ ಆರೈಕೆ ಕೇಂದ್ರ. ಪ್ರಜಾವಾಣಿ ಚಿತ್ರ : ಅನೂಪ್ ರಾಘ.ಟಿ.   

ಬೆಂಗಳೂರು: ನಗರದಲ್ಲಿನ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿಯೂ (ಸಿಸಿಸಿ) ಹೆಚ್ಚಿನ ಸಂಖ್ಯೆಯಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು ಇಲ್ಲದಿರುವುದು ರೋಗಿಗಳನ್ನು ಸಂಕಷ್ಟಕ್ಕೆ ಈಡು ಮಾಡಿದೆ.

ಸದ್ಯ 12 ಕೋವಿಡ್‌ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಹುತೇಕರು ಹೋಂ ಐಸೊಲೇಷನ್‌ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕೇಂದ್ರಗಳಲ್ಲಿನ ಹಾಸಿಗೆಗಳು ಖಾಲಿ ಇವೆ. ಆಕ್ಸಿಜನ್‌ ಅಗತ್ಯವಿದ್ದವರು ಈ ಕೇಂದ್ರಗಳತ್ತ ಬರುತ್ತಿದ್ದಾರೆ. ಆದರೆ, ಎಲ್ಲರಿಗೂ ಈ ಸೌಲಭ್ಯವಿರುವ ಹಾಸಿಗೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

‘ಆರ್ಥಿಕವಾಗಿ ಸಬಲರಾಗಿರುವವರು ಖಾಸಗಿ ಆಸ್ಪತ್ರೆಗಳಲ್ಲಾದರೂ ದಾಖಲಾಗುತ್ತಾರೆ. ಮನೆಯಲ್ಲಿ ಪ್ರತ್ಯೇಕ ಕೋಣೆ ಇಲ್ಲದ ನಮ್ಮಂಥವರು ಆರೈಕೆ ಕೇಂದ್ರಗಳಿಗೆ ಬರಬೇಕಾಗುತ್ತದೆ’ ಎಂದು ರೋಗಿಯ ಸಂಬಂಧಿಕರೊಬ್ಬರು ಹೇಳಿದರು.

ADVERTISEMENT

‘ಈ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್‌ಸಹಿತ ಹಾಸಿಗೆಗಳನ್ನು ಅಳವಡಿಸಿದರೆ ಅನುಕೂಲ. ಉಸಿರಾಟದ ಸಮಸ್ಯೆ ಸಹಜ ಸ್ಥಿತಿಗೆ ಬಂದ ನಂತರ ಆಸ್ಪತ್ರೆಗೆ ದಾಖಲಾಗಬಹುದು. ಮೊದಲೇ ಆಕ್ಸಿಜನ್ ಸಿಗದಿದ್ದರೆ ಸಮಸ್ಯೆ ಬಿಗಡಾಯಿಸುವ ಅಪಾಯ ಇರುತ್ತದೆ’ ಎಂದು ಅವರು ಹೇಳಿದರು.

ಸಣ್ಣ ಕೇಂದ್ರಗಳ ಸ್ಥಾಪನೆ:‘ನಗರದಲ್ಲಿ ಕೋವಿಡ್‌ ರೋಗಿಗಳ ಪೈಕಿ ಶೇ 90ರಿಂದ ಶೇ 92ರಷ್ಟು ಜನ ಹೋಂ ಐಸೊಲೇಶನ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ನಿಗಾ ಇಡುವುದು ದೊಡ್ಡ ಸವಾಲು. ಹೀಗಾಗಿ, ನಗರದ ಅಲ್ಲಲ್ಲಿ ಇಂತಹ ಸಣ್ಣ ಸಿಸಿಸಿ ಅಥವಾ ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಪಿ. ರಾಜೇಂದ್ರ ಚೋಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ಕೇಂದ್ರಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ಪ್ರತಿ ಸಿಸಿಸಿಯಲ್ಲಿ ಶೇ 10ರಷ್ಟು ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಉಸಿರಾಟ ಸಮಸ್ಯೆ ಇರುವವರು ತಕ್ಷಣಕ್ಕೆ ಈ ಕೇಂದ್ರಕ್ಕೆ ದಾಖಲಾಗಬಹುದು. ನಂತರ ಕೋವಿಡ್‌ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿಯಾದ ನಂತರ ಅಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದರು.

ಕೇಂದ್ರದಲ್ಲಿ ಏನೇನಿರುತ್ತದೆ?
ಆಕ್ಸಿಮೀಟರ್, ಥರ್ಮಾಮೀಟರ್‌ ಸೇರಿದಂತೆ ರೋಗಿಗಳ ಆರೋಗ್ಯ ತಪಾಸಣೆಗೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿರುತ್ತವೆ. ವೈದ್ಯರು ಮತ್ತು ಶುಶ್ರೂಷಕರನ್ನು ನಿಯೋಜಿಸಲಾಗಿರುತ್ತದೆ. ಆಕ್ಸಿಜನ್‌ಸಹಿತ ಹಾಸಿಗೆಗಳ ಸಂಖ್ಯೆಯನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ.

‘ಸರ್ಕಾರಿ ಕಟ್ಟಡಗಳಲ್ಲಿ ಸಿಸಿಸಿ ತೆರೆದರೆ ಹೆಚ್ಚು ಖರ್ಚು ಬರುವುದಿಲ್ಲ. ಒಬ್ಬರಿಗೆ ಮೂರು ಹೊತ್ತು ಊಟಕ್ಕೆ ₹ 220, ವೈದ್ಯರು, ಶುಶ್ರೂಷಕರ ವೇತನ, ಸ್ವಚ್ಛತಾ ಕೆಲಸಗಾರರು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿ ವೆಚ್ಚ ಬರುತ್ತದೆ. ಖಾಸಗಿ ಮಾಲೀಕತ್ವದ ಸ್ಥಳಗಳಲ್ಲಿ ತೆರೆದರೆ ಈ ವೆಚ್ಚದಲ್ಲಿ ಹೆಚ್ಚಳವಾಗುತ್ತದೆ’ ಎಂದು ಚೋಳನ್ ಮಾಹಿತಿ ನೀಡಿದರು.

‘ಹಜ್‌ಭವನದಲ್ಲಿ ಸಂಪೂರ್ಣ ಆಮ್ಲಜನಕ ವ್ಯವಸ್ಥೆ’
‘ನಗರದ ಸಿಸಿಸಿಗಳ ಪೈಕಿ ಹಜ್‌ಭವನದಲ್ಲಿರುವ ಆರೈಕೆ ಕೇಂದ್ರವನ್ನು ಸಂಪೂರ್ಣ ಆಮ್ಲಜನಕಸಹಿತ ಹಾಸಿಗೆಗಳ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಸೋಮವಾರದಿಂದಲೇ ಈ ಕಾರ್ಯ ಪ್ರಾರಂಭವಾಗುತ್ತಿದ್ದು, ಒಂದು ವಾರದಲ್ಲಿ ಸಿದ್ಧವಾಗಲಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು 400 ಹಾಸಿಗೆ ಸಾಮರ್ಥ್ಯ ಇರುವ ಕೇಂದ್ರ. ಪ್ರಾರಂಭದಲ್ಲಿ 120 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಅಳವಡಿಸಲಾಗುವುದು. ಕ್ರಮೇಣ ಇವುಗಳ ಸಂಖ್ಯೆ ಹೆಚ್ಚಿಸಿ, ಸಂಪೂರ್ಣ ಆಮ್ಲಜನಕಸಹಿತ ವ್ಯವಸ್ಥೆಯ ಕೇಂದ್ರವನ್ನಾಗಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಬಿಐಇಸಿ ಕೇಂದ್ರ ಮುಚ್ಚಿದ್ದು ಮೂರ್ಖತನ’
‘ಕಳೆದ ಬಾರಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣದಲ್ಲಿ ನಿರ್ಮಿಸಲಾಗಿದ್ದ 10 ಸಾವಿರ ಹಾಸಿಗೆ ಸಾಮರ್ಥ್ಯದ ಆರೈಕೆ ಕೇಂದ್ರವನ್ನು ಮುಚ್ಚಿಸಿದ್ದು ಮೂರ್ಖತನದ ನಿರ್ಧಾರ’ ಎಂದು ಸಿಪಿಐ (ಎಂ) ಪಕ್ಷದ ಮುಖಂಡ ಕೆ.ಎನ್. ಉಮೇಶ್‌ ದೂರಿದರು.

₹ 11.09 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಕೇಂದ್ರವನ್ನು ಐವತ್ತೇ ದಿನಗಳಲ್ಲಿ ಮುಚ್ಚಲಾಯಿತು. ಇದು ದೇಶದ ಅತಿದೊಡ್ಡ ಆರೈಕೆ ಕೇಂದ್ರ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಇಲ್ಲಿ ಅಳವಡಿಸಿದ್ದು 6,500 ಹಾಸಿಗೆಗಳನ್ನು ಮಾತ್ರ.

‘ಈ ಕೇಂದ್ರಕ್ಕೆ ತಿಂಗಳಿಗೆ ₹ 3 ಕೋಟಿ ವೆಚ್ಚವಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು. ಆದರೆ, ಅಷ್ಟು ಖರ್ಚಾಗುತ್ತಿರಲಿಲ್ಲ. ಒಂದು ವೇಳೆ ತಿಂಗಳಿಗೆ ₹ 3 ಕೋಟಿಯೇ ವೆಚ್ಚವಾಗುತ್ತಿದ್ದರೂ ಮುಚ್ಚುವ ಅಗತ್ಯವಿರಲಿಲ್ಲ. ಮೂರು ತಿಂಗಳಿಗೆ ₹ 9 ಕೋಟಿ ಸರ್ಕಾರಕ್ಕೆ ಹೊರೆ ಏನು ಆಗುತ್ತಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಆ ಕೇಂದ್ರ ಇದ್ದಿದ್ದರೆ ಈಗ 2000 ದಿಂದ 3000 ಜನರಿಗೆ ಆಮ್ಲಜನಿಕ ಸಹಿತ ಹಾಸಿಗೆ ಒದಗಿಸಬಹುದಾಗಿತ್ತು. ಏಕಕಾಲಕ್ಕೆ 6 ಸಾವಿರ ಜನರಿಗೆ ಚಿಕಿತ್ಸೆ ನೀಡಬಹುದಿತ್ತು. ಬೇರೆ ಬೇರೆ ಕಡೆಗೆ ಕೇಂದ್ರಗಳನ್ನು ತೆರೆಯುವ ಬದಲು ಈ ಒಂದು ಕೇಂದ್ರದಲ್ಲಿಯೇ ಎಲ್ಲ ವ್ಯವಸ್ಥೆ ಮಾಡುವ ಅವಕಾಶವಿತ್ತು’ ಎಂದು ಅವರು ಹೇಳಿದರು.

ಕೇಂದ್ರದ ಉಕ್ಕಿನ ಮಂಚಗಳು, ಹಾಸಿಗೆಗಳು, ಫ್ಯಾನ್‌ಗಳು ಕಸದ ಬುಟ್ಟಿಗಳು, ಬಕೆಟ್‌ಗಳು, ಮಗ್‌ಗಳು, ನೀರು ಪೂರೈಸುವ ಪರಿಕರಗಳು ಹಾಗೂ ಇತರ ಪೀಠೋಪಕರಣಗಳನ್ನು ಸರ್ಕಾರಿ ಹಾಸ್ಟೆಲ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ನೀಡಲಾಯಿತು ಎಂದು ಸರ್ಕಾರ ಹೇಳಿದೆ. ಆದರೆ, ಇದರಲ್ಲಿ ಬಹುತೇಕ ಹಾಸಿಗೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ತೆಗೆದುಕೊಂಡು ಹೋಗಲಾಯಿತು ಎಂದು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಯೊಬ್ಬರು ಹೇಳಿದರು.

‘ಬಿಐಇಸಿಯಲ್ಲಿ ಮತ್ತೆ ಸಿಸಿಸಿ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲ. ಈಗ ಆರೈಕೆ ಕೇಂದ್ರಗಳ ಅಗತ್ಯವೂ ಹೆಚ್ಚಾಗಿಲ್ಲ’ ಎಂದು ರಾಜೇಂದ್ರ ಚೋಳನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.