ADVERTISEMENT

ಒಎಫ್‌ಸಿ ಕೇಬಲ್‌ ಅಳವಡಿಕೆ: ಎಂಎಆರ್‌ಸಿಸಿಎಸ್‌ ತಂತ್ರಾಂಶ ಬಳಕೆ ಕಡ್ಡಾಯ

ಒಎಫ್‌ಸಿ ಕೇಬಲ್‌ ಅಳವಡಿಕೆ – ರಸ್ತೆ ಬೇಕಾಬಿಟ್ಟಿ ಕತ್ತರಿಸುವುದಕ್ಕೆ ಕಡಿವಾಣ: ಬಿಬಿಎಂಪಿ ಕ್ರಮ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:41 IST
Last Updated 4 ನವೆಂಬರ್ 2020, 19:41 IST
ಬೆಂಗಳೂರಿನ ವೀರಭದ್ರನಗರ ವೃತ್ತದಲ್ಲಿ ಓಎಫ್‌ಸಿ ಕೇಬಲ್‌ಗಾಗಿ ರಸ್ತೆ ಅಗೆದು, ಮುಚ್ಚದೇ ಹಾಗೇ ಬಿಟ್ಟಿರುವ ದೃಶ್ಯ ಸೋಮವಾರ ಕಂಡು ಬಂತು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ವೀರಭದ್ರನಗರ ವೃತ್ತದಲ್ಲಿ ಓಎಫ್‌ಸಿ ಕೇಬಲ್‌ಗಾಗಿ ರಸ್ತೆ ಅಗೆದು, ಮುಚ್ಚದೇ ಹಾಗೇ ಬಿಟ್ಟಿರುವ ದೃಶ್ಯ ಸೋಮವಾರ ಕಂಡು ಬಂತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ಅಳವಡಿಸುವ ಸಂಸ್ಥೆಗಳಿಗೆ ಬಿಬಿಎಂಪಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿತ್ತು. ಆದರೆ, ಇನ್ನು ಮುಂದೆ ಒಎಫ್‌ಸಿ ಅಳವಡಿಕೆಗೂ ಎಂಎಆರ್‌ಸಿಸಿಎಸ್‌ ತಂತ್ರಾಂಶ ಬಳಕೆ ಕಡ್ಡಾಯವಾಗಲಿದೆ.

ರಸ್ತೆಯನ್ನು ಎಲ್ಲೆಂದರಲ್ಲಿ ಕತ್ತರಿಸುವುದಕ್ಕೆ ಕಡಿವಾಣ ಹಾಕಲು ಹಾಗೂ ಇದರ ಮೇಲುಸ್ತುವಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಎಲ್ಲೆಂದರಲ್ಲಿ ಬೇಕಾಬಿಟ್ಟಿ ರಸ್ತೆ ಕತ್ತರಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲೂ ಚರ್ಚೆ ನಡೆದಿತ್ತು. ಈ ವ್ಯವಸ್ಥೆಯನ್ನೂ ಸರಿದಾರಿಗೆ ತರುವಂತೆ ಮುಖ್ಯ ಕಾರ್ಯದರ್ಶಿ ಅವರು ಬಿಬಿಎಂಪಿಗೆ ಸೂಚನೆ ನೀಡಿದ್ದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇಬಲ್‌ಗಳನ್ನು ಹಾಗೂ ಕೊಳವೆಗಳನ್ನು ಅಳವಡಿಸಲು ರಸ್ತೆ ಕತ್ತರಿಸುವುದಕ್ಕೆ ಎಂಎಆರ್‌ಸಿಸಿಎಸ್‌ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಇದನ್ನು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗವು ನಿರ್ವಹಣೆ ಮಾಡುತ್ತಿದೆ. ಆದರೆ, ಒಎಫ್‌ಸಿ ಸೇವಾ ಸಂಸ್ಥೆ
ಗಳಿಗೆ ಅಳವಡಿಕೆಗೆ ಬಿಬಿಎಂಪಿಯ ಒಎಫ್‌ಸಿ ಕೋಶವು ಬಿಬಿಎಂಪಿ ವೆಬ್‌ಸೈಟ್‌ ಮೂಲಕ ನಿರ್ವಹಿಸುವ ಪ್ರತ್ಯೇಕ ತಂತ್ರಾಂಶದ ಮೂಲಕ ಅನುಮತಿ ನೀಡುತ್ತಿದೆ. ಒಎಫ್‌ಸಿ ಸೇವಾ ಸಂಸ್ಥೆಗಳು ಆಲ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಒಎಫ್‌ಸಿ ಕೋಶದ ಅಧಿಕಾರಿಗಳು ತಮ್ಮ ವಿಭಾಗದ ಸ್ಥಳೀಯ ಎಂಜಿನಿಯರ್‌ಗಳಿಂದ ಅಭಿಪ್ರಾಯ ಪಡೆಯುತ್ತಿದ್ದರು. ಅವರು ಸಕಾರಾತ್ಮಕ ಅಭಿಪ್ರಾಯ ನೀಡಿದರೆ ರಸ್ತೆ ಕತ್ತರಿಸಲು ಅನುಮತಿ ನೀಡುತ್ತಿದ್ದರು.

‘ರಸ್ತೆ ಅಗೆಯುವುದಕ್ಕೆ ಅನುಮತಿ ಕೋರಿ ಬಂದ ಅರ್ಜಿ ವಿಲೇವಾರಿ ಬಿಬಿಎಂಪಿ ಒಎಫ್‌ಸಿ ಕೋಶವು ಎಂಎಆರ್‌ಸಿಸಿಎಸ್‌ ತಂತ್ರಾಂಶದ ಬದಲು ಬೇರೆ ತಂತ್ರಾಂಶ ಬಳಸುತ್ತಿತ್ತು. ಹಾಗಾಗಿ ಎಲ್ಲೆಲ್ಲಿ ಅನುಮತಿ ನೀಡಲಾಗಿದೆ, ಎಲ್ಲೆಲ್ಲಿ ಕೆಲಸ ನಡೆಯುತ್ತಿದೆ, ನಿಜಕ್ಕೂ ಅನುಮತಿ ಪಡೆದೇ ಕೆಲಸ ನಿರ್ವಹಿಸುತ್ತಿದ್ದಾರೆಯೇ, ರಸ್ತೆ ಅಗೆಯುವ ವೇಳೆ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ನಿಗಾ ವಹಿಸುವುದು ಕಷ್ಟವಾಗುತ್ತಿತ್ತು. ಈ ಲೋಪ ಸರಿಪಡಿಸಲು ಒಎಫ್‌ಸಿ ಸೇವಾ ಸಂಸ್ಥೆಗಳೂ ಎಂಎಆರ್‌ಸಿಸಿಎಸ್‌ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ಅನುಕೂಲವೇನು?
‘ರಸ್ತೆ ಕತ್ತರಿಸುವುದಕ್ಕೆ ಎಂಎಆರ್‌ಸಿಸಿಎಸ್‌ ತಂತ್ರಾಂಶದ ಮೂಲಕ ಯಾವುದೇ ಸಂಸ್ಥೆ ಅರ್ಜಿ ಸಲ್ಲಿಸಿದರೂ ಅದರ ಮಾಹಿತಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ, ಬಿಎಸ್‌ಎನ್‌ಎಲ್‌, ಕೆಪಿಟಿಸಿಎಲ್‌, ಪೊಲೀಸ್‌ ಇಲಾಖೆಗಳಿಗೆ ತಲುಪುತ್ತದೆ. ಒಂದು ವೇಳೆ ರಸ್ತೆ ಕತ್ತರಿಸುವುದಕ್ಕೆ ಅನುಮತಿ ನೀಡಿದರೆ ಏನಾದರೂ ಸಮಸ್ಯೆಯಾಗುತ್ತದೆ ಎಂದಾದರೆ, ಅದಕ್ಕೆ ಈ ಇಲಾಖೆಗಳ ಅಧಿಕಾರಿಗಳು ಆಕ್ಷೇಪ ಸಲ್ಲಿಸುವುದಕ್ಕೆ ಅವಕಾಶ ಸಿಗುತ್ತದೆ. ಬಿಬಿಎಂಪಿ ಎಂಜಿನಿಯರ್‌ಗಳು ನಿರ್ದಿಷ್ಟ ರಸ್ತೆ ಯಾವಾಗ ನಿರ್ಮಿಸಲಾಗಿದೆ, ಗುತ್ತಿಗೆದಾರರೇ ಅದರ ದೋಷ ಸರಿಪಡಿಸುವ ಅವಧಿ ಚಾಲ್ತಿಯಲ್ಲಿದೆಯೇ ಎಂಬ ಬಗ್ಗೆ ಆನ್‌ಲೈನ್‌ನಲ್ಲೇ ಅಭಿಪ್ರಾಯ ನೀಡುವುದಕ್ಕೆ ಅವಕಾಶ ಇದೆ. ಹಾಗಾಗಿ ಈ ತಂತ್ರಾಂಶದ ಮೂಲಕ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದೂ ಸುಲಭ’ ಎಂದು ಮಂಜುನಾಥ ಪ್ರಸಾದ್‌ ವಿವರಿಸಿದರು.


l ರಸ್ತೆ ಕತ್ತರಿಸುವಾಗ ಸಮನ್ವಯ ಸಾಧಿಸುವಂತೆ ಮುಖ್ಯ
ಕಾರ್ಯದರ್ಶಿ ಸೂಚನೆ

l ರಸ್ತೆ ಕತ್ತರಿಸುವುದಕ್ಕೆ ಅನುಮತಿ ನೀಡಲು ಪ್ರತ್ಯೇಕ ತಂತ್ರಾಂಶ ಬಳಸುತ್ತಿದ್ದ ಬಿಬಿಎಂಪಿ ಒಎಫ್‌ಸಿ ಕೋಶ

l ಷರತ್ತು ಉಲ್ಲಂಘನೆ ಮೇಲೆ ನಿಗಾ ಇಡುವುದು ಇನ್ನು ಸುಲಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.