ADVERTISEMENT

ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

ಕೆ.ಆರ್.ಮಾರುಕಟ್ಟೆ: ಮೇಯರ್‌ ದಿಢೀರ್‌ ತಪಾಸಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:08 IST
Last Updated 11 ಜುಲೈ 2019, 20:08 IST
ಮೇಯರ್ ಗಂಗಾಬಿಕೆ ಅವರು ಕೆ.ಆರ್.ಮಾರುಕಟ್ಟೆ ಪ್ರದೇಶವನ್ನು ಗುರುವಾರ ತಪಾಸಣೆ ನಡೆಸಿದರು. ದಕ್ಷಿಣ ವಲಯದ ಜಂಟಿ ಆಯುಕ್ತ ವಿಶ್ವನಾಥ್ ಇದ್ದಾರೆ
ಮೇಯರ್ ಗಂಗಾಬಿಕೆ ಅವರು ಕೆ.ಆರ್.ಮಾರುಕಟ್ಟೆ ಪ್ರದೇಶವನ್ನು ಗುರುವಾರ ತಪಾಸಣೆ ನಡೆಸಿದರು. ದಕ್ಷಿಣ ವಲಯದ ಜಂಟಿ ಆಯುಕ್ತ ವಿಶ್ವನಾಥ್ ಇದ್ದಾರೆ   

ಬೆಂಗಳೂರು: ಕೆ.ಆರ್.ಮಾರುಕಟ್ಟೆ ಆಸುಪಾಸಿನಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗು
ವುದು ಎಂದು ಮೇಯರ್‌ ಗಂಗಾಂಬಿಕೆ ಭರವಸೆ ನೀಡಿದರು.

ಕೆ.ಆರ್.ಮಾರುಕಟ್ಟೆ ಆಸುಪಾಸಿನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಪಾದಾಚಾರಿ ಮಾರ್ಗ ಹಾಗೂ ರಸ್ತೆಯನ್ನು ಒತ್ತು
ವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಮಾರುಕಟ್ಟೆ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪಲು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹೈಕೋರ್ಟ್ ಈ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಅದರಂತೆ ಮೂರು ತಿಂಗಳ ಹಿಂದೆ ಪಾಲಿಕೆ ಒತ್ತುವರಿ ತೆರವು ಮಾಡಿಸಿತ್ತು.

ಮೇಯರ್‌ ಅವರು ಕೆ.ಆರ್‌.ಮಾರುಕಟ್ಟೆಗೆ ಗುರುವಾರ ದಿಢೀರ್‌ ಭೇಟಿ ನೀಡಿದ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ಅಳಲು ತೋಡಿಕೊಂಡರು.

ADVERTISEMENT

‘ಹೊಟ್ಟೆ ಪಾಡಿಗಾಗಿ ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದೆವು. ಅದನ್ನು ನಿಲ್ಲಿಸಿದ ಬಳಿಕ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದಂತಾಗಿದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ’ ಎಂದು ಮನವಿ ಮಾಡಿಕೊಂಡರು.

ಮೇಯರ್‌ ಭೇಟಿ ವೇಳೆ ನೆಲಮಹಡಿಯಲ್ಲಿ ಕಸದ ರಾಶಿ ಹಾಗೆಯೇ ಇತ್ತು. ಅದನ್ನು ಕೂಡಲೆ ತೆರವುಗೊಳಿಸುವಂತೆ ಸೂಚಿಸಿದ ಮೇಯರ್‌, ‘ಇನ್ನುಮುಂದೆ ಈ ಜಾಗದಲ್ಲಿ ಕಸ ಬೀಳದಂತೆ ನೋಡಿಕೊಳ್ಳಬೇಕು. ಇಲ್ಲಿ ಕಸ ಬಿಸಾಡುವುದನ್ನು ತಡೆಯಲು ಮುಖ್ಯದ್ವಾರದಲ್ಲಿ ಶಟರ್ ಅಳವಡಿಸಬೇಕು. ಅಗ್ನಿಶಾಮಕ ದಳದ ವಾಹನ ಬರುವಾಗ ಮಾತ್ರ ಅದನ್ನು ತೆರೆಯಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ವಾರಕ್ಕೊಮ್ಮೆ ಸಭೆ ಕಡ್ಡಾಯ’
‘ಕೆ.ಆರ್.ಮಾರುಕಟ್ಟೆ ನಿರ್ವಹಣೆಯ ಹೊಣೆ ವಹಿಸಿರುವ ಎಲ್ಲ ಅಧಿಕಾರಿಗಳು ವಾರಕ್ಕೊಮ್ಮೆ ಸಭೆ ನಡೆಸಬೇಕು. ಇಲ್ಲಿನ ಲೋಪಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು. ಅದರ ನಡಾವಳಿಯನ್ನು ನನಗೆ ಸಲ್ಲಿಸಬೇಕು’ ಎಂದು ಮೇಯರ್‌ ಸೂಚನೆ ನೀಡಿದರು.

‘ಸಭೆ ನಡೆಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.