ADVERTISEMENT

ಅಧಿಕಾರಿಗಳ ಕಣ್ತಪ್ಪು: ₹ 4 ಕೋಟಿ ನಷ್ಟ?

ಕಸ ಗುಡಿಸುವ ಯಂತ್ರ ಖರೀದಿಯಲ್ಲಿ ಅವ್ಯವಹಾರ – ಗುತ್ತಿಗೆದಾರರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 19:04 IST
Last Updated 9 ಜೂನ್ 2019, 19:04 IST
   

ಬೆಂಗಳೂರು: ಕಸ ಗುಡಿಸುವ ಯಂತ್ರಗಳ ಖರೀದಿ ವೇಳೆ ಅಧಿಕಾರಿಗಳ ಕಣ್ತಪ್ಪಿನಿಂದ ಪಾಲಿಕೆಗೆ ₹ 4 ಕೋಟಿ ನಷ್ಟ ಉಂಟಾಗಿದೆ. ಒಂಬತ್ತು ಯಂತ್ರಗಳನ್ನು ಖರೀದಿಸಿರುವ ಪಾಲಿಕೆ ಯಂತ್ರಗಳಿಗೆ ₹ 74 ಲಕ್ಷದ ಬದಲು ₹ 1.18 ಕೋಟಿಯಂತೆ ಪಾವತಿ ಮಾಡಿದೆ.

2017ರಲ್ಲಿ ನಡೆದಿದ್ದ ಕಸ ಗುಡಿಸುವ ಯಂತ್ರಗಳ ಖರೀದಿ ಪ್ರಕ್ರಿಯೆ ವಿವಾದಕ್ಕೆ ಕಾರಣವಾಗಿದೆಯಲ್ಲದೇ,
ಗುತ್ತಿಗೆದಾರರು ಹಾಗೂ ಪಾಲಿಕೆ ಅಧಿಕಾರಿಗಳ ನಡುವಿನ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದೆ.

ದೆಹಲಿ ಮೂಲದ ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯು ಪಾಲಿಕೆಗೆ ಕಸಗುಡಿಸುವ ಒಂಬತ್ತು ಯಂತ್ರಗಳನ್ನು ಪೂರೈಸಿತ್ತು. ಅಂತಹದ್ದೇ 16 ಯಂತ್ರಗಳ ಪೂರೈಕೆ ಟೆಂಡರ್‌ ಕೂಡಾ ಅದೇ ಸಂಸ್ಥೆಯ ಪಾಲಾಗಿದೆ. ಕಸ ನಿರ್ವಹಣೆ ವ್ಯವಸ್ಥೆ ಮೇಲೆ ಈ ಹಿಂದೆ ಹಿಡಿತ ಹೊಂದಿದ್ದ ಕೆಲವು ಗುತ್ತಿಗೆದಾರರು, ‘ಪಾಲಿಕೆ ನಿರ್ದಿಷ್ಟ ಕಂಪನಿ ಬಗ್ಗೆ ಪಕ್ಷಪಾತದ ಧೋರಣೆ ಅನುಸರಿಸಿದೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಇದರ ಬೆನ್ನಲ್ಲೇ, ಪಾಲಿಕೆ ಮತ್ತೆ ಅಂತಹದ್ದೇ 16 ಯಂತ್ರಗಳ ಖರೀದಿಗೆ ಟೆಂಡರ್‌ ಆಹ್ವಾನಿಸಿದೆ. 32 ಯಂತ್ರಗಳ ಖರೀದಿ ಪ್ರಕ್ರಿಯೆಯ ಪಾರದರ್ಶಕತೆಯನ್ನೇ ಗುತ್ತಿಗೆದಾರರು ಪ್ರಶ್ನೆ ಮಾಡಿದ್ದಾರೆ.

ಈ ಖರೀದಿ ಪ್ರಕ್ರಿಯೆಯ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಪಡೆದುಕೊಂಡಿರುವಕಸ ನಿರ್ವಹಣೆ ಗುತ್ತಿಗೆದಾರ ವಿದ್ಯಾನಾಥ ರೆಡ್ಡಿ, ‘ನಿರ್ದಿಷ್ಟ ಕಂಪನಿಗೆ ಗುತ್ತಿಗೆ ನೀಡಲೆಂದೇ ನಡೆದಿರುವ ಈ ಟೆಂಡರ್‌ ಪ್ರಕ್ರಿಯೆಯೇ ಒಂದು ಕಣ್ಣೊರೆಸುವ ತಂತ್ರ’ ಎಂದು ಅಭಿಪ್ರಾಯಪಟ್ಟರು.

‘₹ 74 ಲಕ್ಷ ಮೌಲ್ಯದ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಿ, ಅವುಗಳ ಬಿಲ್‌ ಮೊತ್ತವನ್ನು ₹ 1.18 ಕೋಟಿ ಎಂದು ತೋರಿಸಿದ್ದಾರೆ. ಒಂದೊಂದು ಯಂತ್ರದಲ್ಲೂ ₹ 44 ಲಕ್ಷ ವ್ಯತ್ಯಾಸವಾಗಿದ್ದು, ಇದರಿಂದ ಕಂಪನಿಗೆ ₹ 3.96 ಕೋಟಿ ಹೆಚ್ಚುವರಿ ಪಾವತಿಯಾಗಿದೆ’ ಎಂದು ಅವರು ಆರೋಪಿಸಿದರು.

ಈ ಕುರಿತು ಮಾಹಿತಿ ಹಕ್ಕಿನಡಿ ಸಲ್ಲಿಸಿದ ಅರ್ಜಿಗೆ ಬಿಬಿಎಂಪಿ ಅಧಿಕಾರಿಗಳು ವಿಚಿತ್ರ ಉತ್ತರ ನೀಡಿದ್ದಾರೆ. ಅಧಿಕಾರಿಗಳು 2017ರ ಆ. 10ರಂದು ನೀಡಿದ್ದ ಮಾಹಿತಿ ಪ್ರಕಾರ, ‘ಟ್ರಕ್‌ ಮೇಲೆ ಅಳವಡಿಸಿರುವ ಕಸ ಗುಡಿಸುವ ಯಂತ್ರಗಳ ಬೆಲೆಯನ್ನು ಸ್ವಯಂಚಾಲಿತ ಯಂತ್ರಗಳ ಬೆಲೆ ಎಂದು ತಪ್ಪಾಗಿ ನಮೂದಿಸಿದ್ದರಿಂದ ಶೇ 13.02ರಷ್ಟು ಹೆಚ್ಚುವರಿ ಪಾವತಿ ಆಗಿದೆ. ಇದನ್ನು ಸರಿದೂಗಿಸಲು ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ವೆಚ್ಚದಲ್ಲಿ ಕಡಿತ ಮಾಡುವಂತೆ (ಪೂರಕ ಒಪ್ಪಂದದ ಪ್ರಕಾರ) ಪತ್ರ ಬರೆಯಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಮತ್ತೊಬ್ಬ ಕಸ ನಿರ್ವಹಣೆ ಗುತ್ತಿಗೆದಾರ ವಿನೋದ್ ರೆಡ್ಡಿ, ‘ಆ ಕಂಪನಿ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಪಕ್ಷಪಾತದಿಂದ ವರ್ತಿಸಿದ್ದಾರೆ ಎಂಬುದಕ್ಕೆ ಇದೇ ಉದಾಹರಣೆ ಸಾಕು. ನಾವು ಬಿಲ್‌ ಪಾವತಿಯಲ್ಲಿ ಆಗಿರುವ ಈ ಲೋಪವನ್ನು ಪ್ರಶ್ನೆ ಮಾಡದೇ ಇರುತ್ತಿದ್ದರೆ ಈ ಬಗ್ಗೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಉತ್ತರ ನೀಡಲು ಹೇಗೆ ಸಾಧ್ಯ? ಈಗ ಮತ್ತೆ 16 ಯಂತ್ರಗಳನ್ನುಖರೀದಿಸುತ್ತಿರುವ ಪಾಲಿಕೆ, ಈ ಗುತ್ತಿಗೆಯನ್ನೂ ಅದೇ ಕಂಪನಿಗೆ ನೀಡಲಿದೆ ಎಂಬುದು ಗುಟ್ಟಿನ ವಿಚಾರವೇನಲ್ಲ’ ಎಂದರು.

‘ಅಕ್ರಮ ನಡೆದಿಲ್ಲ– ಪಕ್ಷಪಾತ ನಡೆಸಿಲ್ಲ’

ಯಂತ್ರ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಪಾಲಿಕೆಯ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ಸಮರ್ಥಿಸಿಕೊಂಡರು.

‘ಎಲ್ಲವನ್ನೂ ನಿಯಮಗಳ ಪ್ರಕಾರವೇ ನಡೆಸಿದ್ದೇವೆ. ಗುತ್ತಿಗೆದಾರರ ಕೋರಿಕೆ ಮೇರೆಗೆ ಟೆಂಡರ್‌ ದಾಖಲೆಗಳನ್ನು ಪದೇ ಪದೇ ಬದಲಿಸಿದ್ದರಿಂದ ಕಣ್ತಪ್ಪಿನಿಂದಾಗಿ ಈ ಲೋಪ ಆಗಿದೆ. ನಾವು ಮೊದಲು ಸ್ವಯಂಚಾಲಿತ ಯಂತ್ರಗಳನ್ನು ಖರೀದಿಸಲು ಟೆಂಡರ್‌ ದಾಖಲೆ ಪತ್ರಗಳನ್ನು ಸಿದ್ಧಪಡಿಸಿದ್ದೆವು. ಗುತ್ತಿಗೆದಾರರು ಒತ್ತಡ ತಂದಿದ್ದರಿಂದ ಟ್ರಕ್‌ ಮೇಲೆ ಅಳವಡಿಸಿದ ಯಂತ್ರಗಳ ಖರೀದಿಸಲು ನಿರ್ಧರಿಸಲಾಯಿತು. ಸಂಸ್ಥೆಗೆ ಯಾವುದೇ ಹೆಚ್ಚುವರಿ ಪಾವತಿ ಆಗಿಲ್ಲ. ನಾವು ಯಾವ ಕಂಪನಿ ಕುರಿತೂ ಪಕ್ಷಪಾತದ ಧೋರಣೆ ಅನುಸರಿಸಿಲ್ಲ’ ಎಂದು ಖಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.