ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ಕಚೇರಿಯಲ್ಲಿ ಅಭಿವೃದ್ಧಿ ಹಕ್ಕು ವರ್ಗಾವಣೆಗೆ (ಟಿಡಿಆರ್) ಸಂಬಂಧಪಟ್ಟ ಕೆಲವು ಕಡತಗಳು ನಾಪತ್ತೆಯಾದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಕೊಟ್ಟರೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ಸಂಗತಿ ಬಯಲಿಗೆ ಬಂದಿದೆ.
ಮಹದೇವಪುರ ವಲಯ ಕಚೇರಿಯ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್ ಟಿಡಿಆರ್ ಕಡತಗಳು ಕಣ್ಮರೆಯಾದ ಬಗ್ಗೆ ಉನ್ನತ ಅಧಿಕಾರಿಗಳಿಗೆ 2014ರಲ್ಲೇ ಪತ್ರ ಬರೆದಿದ್ದರು. ಆದರೆ, ಈ ಪತ್ರವನ್ನು ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಮಹದೇವಪುರ ವಲಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ಕೃಷ್ಣಲಾಲ್ (ಸದ್ಯ ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಟಿಡಿಆರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಾಹಿತಿ ಹಿರಿಯ ಅಧಿಕಾರಿಗಳಿಗಿತ್ತು. ಆದರೂ ಕ್ರಮ ಕೈಗೊಳ್ಳಲು ಆಸಕ್ತಿ ವಹಿಸಲಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಈ ಸಂಬಂಧ ಹಿರಿಯ ಅಧಿಕಾರಿಗಳಿಬ್ಬರು ಬರೆದ ಪತ್ರದ ಪ್ರತಿಗಳು ಪತ್ರಿಕೆಗೆ ಲಭ್ಯವಾಗಿವೆ. ಈ ಪತ್ರಗಳು ಕೈ ಸೇರಿದ ಬಳಿಕವೂ ಆರೋಪಿ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಲಿಲ್ಲವೇಕೆ ಎಂಬ ಪ್ರಶ್ನೆ ಪಾಲಿಕೆ ಅಧಿಕಾರಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.
ಮಹದೇವಪುರ ವಲಯ ಕಚೇರಿಯಲ್ಲಿ 2013ರ ಡಿಸೆಂಬರ್ 13ರಿಂದ 2014ರ ಸೆಪ್ಟೆಂಬರ್ 2ರವರೆಗೆ ಸಹಾಯಕ ಎಂಜಿನಿಯರ್ ಆಗಿಕೃಷ್ಣಲಾಲ್ ಕೆಲಸ ಮಾಡಿದ್ದ ಸಮಯದಲ್ಲಿ 208 ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಿದ್ದರು. ಅವರು ವರ್ಗಾವಣೆ ಆದ ಬಳಿಕ 41 ಡಿಆರ್‌ಸಿ ಕಡತಗಳು ನಾಪತ್ತೆಯಾಗಿರುವ ಕುರಿತು ಜಂಟಿ ಕಮಿಷನರ್ ಕಚೇರಿ ಕೃಷ್ಣಲಾಲ್ ಅವರಿಗೆ ನೋಟಿಸ್ ನೀಡಿತ್ತು.
ಮೂರು ತಿಂಗಳ ಬಳಿಕ ಅಂದರೆ, 2014 ಡಿಸೆಂಬರ್ 23ರಂದು ಮುಖ್ಯ ಎಂಜಿನಿಯರ್ (ರಸ್ತೆ ಮೂಲಸೌಕರ್ಯ) ಕೃಷ್ಣಲಾಲ್ ಅವರಿಗೆ ನೋಟಿಸ್ ನೀಡಿ, ‘ನಿಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದೆಂದು ಕೇಳಿ ನೋಟಿಸ್ ಜಾರಿ ಮಾಡಿದ್ದರು. ಈ ಸಂಬಂಧ ಬಿಬಿಎಂಪಿಗೆ ವರದಿ ಕೊಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಇಲ್ಲಿನ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಳ್ಳಲಾಗಿರುವ ಕಟ್ಟಡ ಮತ್ತು ನಿವೇಶನಗಳಿಗೆ ಪರ್ಯಾಯವಾಗಿ ನೀಡಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್ ದಾಖಲಿಸಿದ ಬಳಿಕ ಕಡತಗಳ ಕಣ್ಮರೆಯಾಗಿರುವ ಸಂಗತಿ ಬಹಿರಂಗವಾಗಿದೆ.
ಈ ಕುರಿತ ಪ್ರತಿಕ್ರಿಯೆಗೆ ಕೃಷ್ಣಲಾಲ್ ಸಿಗಲಿಲ್ಲ. ಟಿಡಿಆರ್ ವಂಚನೆ ಪ್ರಕರಣದಲ್ಲಿ ನೀಡಿದ್ದ ಮಧ್ಯಂತರ ಜಾಮೀನನ್ನು ಲೋಕಾಯುಕ್ತ ವಿಶೇಷ ಕೊರ್ಟ್ ರದ್ದು
ಪಡಿಸಿದ ಬಳಿಕ ಕೃಷ್ಣಲಾಲ್ ಎಸಿಬಿ ಅಧಿಕಾರಿಗಳ ಕೈಗೂ ಸಿಗುತ್ತಿಲ್ಲ. ಜಾಮೀನು ರದ್ದುಪಡಿಸಿದ ಕ್ರಮವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
**
ಕಡತಗಳು ಕಣ್ಮರೆಯಾಗಿರುವ ಕುರಿತು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆಯೇ ಎಂದು ಪರಿಶೀಲಿಸುತ್ತೇನೆ.
-ಎನ್.ಸಿ ಜಗದೀಶ್, ಜಂಟಿ ಆಯುಕ್ತ, ಬಿಬಿಎಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.