ADVERTISEMENT

ಬಿಬಿಎಂಪಿ: ವೃಂದ, ನೇಮಕಾತಿ– ಹೊಸ ನಿಯಮ ಜಾರಿ

49 ವರ್ಷ ಬಳಿಕ ನಿಯಮ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 19:47 IST
Last Updated 17 ಮಾರ್ಚ್ 2020, 19:47 IST
   

ಬೆಂಗಳೂರು: ಬಿಬಿಎಂಪಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ– 2020 ಜಾರಿಗೆ ಬಂದಿದೆ. 1971ರಲ್ಲಿ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಲಾಗಿತ್ತು. 49 ವರ್ಷಗಳ ಬಳಿಕ ಅದನ್ನು ಪರಿಷ್ಕರಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಯು ಈ ಕುರಿತು ಸೋಮವಾರ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿದೆ.

ಈ ಹಿಂದೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಿಂದ ಹಿಡಿದು ಎಲ್ಲ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಮಾತ್ರ ಇತ್ತು. ಕರ್ನಾಟಕ ಸರ್ಕಾರಿ ಸೇವಾ ನಿಯಮ, ನಡತೆ ನಿಯಮ, ಹುದ್ದೆ ವರ್ಗೀಕರಣ ನಿಯಮಗಳು ಬಿಬಿಎಂಪಿಗೆ ಅನ್ವಯವಾಗುತ್ತಿರಲಿಲ್ಲ. ರಾಜ್ಯದ ಇತರ ಪಾಲಿಕೆಗಳಿಗೆ ಹಾಗೂ ಬಿಬಿಎಂಪಿ ನಡುವೆ ಅನೇಕ ವಿಚಾರಗಳಲ್ಲಿ ತಾರತಮ್ಯಗಳಿದ್ದವು. ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಇನ್ನು ಮುಂದೆ ಎ ಗುಂಪಿನ ಅಧಿಕಾರಿಗಳನ್ನು ಹಾಗೂ ₹ 74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳನ್ನು ಸರ್ಕಾರವೇ ನೇಮಿಸಲಿದೆ. ಬಿ ಮತ್ತು ಸಿ ಗುಂಪಿನ ಅಧಿಕಾರಿಗಳನ್ನು ಹಾಗೂ ಡಿ ಗುಂಪಿನ ಸಿಬ್ಬಂದಿಯನ್ನು ಮಾತ್ರ ಆಯುಕ್ತರು ಅಥವಾ ಅವರು ಸೂಚಿಸಿದ ಅಧಿಕಾರಿ ನೇಮಿಸಿಕೊಳ್ಳಲಿದ್ದಾರೆ.

ಈ ಹಿಂದೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದ ಎಲ್ಲ ಅಧಿಕಾರ ಪಾಲಿಕೆಯಲ್ಲೇ ಕೇಂದ್ರಿಕೃತವಾಗಿತ್ತು. ಮೇಯರ್‌, ಪಾಲಿಕೆ ಸದಸ್ಯರು ಒತ್ತಡ ತಂದು ತಮಗೆ ಬೇಕಾದವರಿಗೆ ಬಡ್ತಿ ಕೊಡಿಸುತ್ತಿದ್ದರು. ಮೀಸಲಾತಿಯ ಆಶಯಗಳನ್ನೂ ಗಾಳಿಗೆ ತೂರಲಾಗುತ್ತಿತ್ತು. ಈ ವಿಚಾರದಲ್ಲಿ ಪಾಲಿಕೆಯನ್ನು ಸುಪ್ರೀಂ ಕೋರ್ಟ್‌ ಕೂಡಾ ತರಾಟೆಗೆ ತೆಗೆದುಕೊಂಡಿತ್ತು. ಪಾಲಿಕೆ ಎಂಜಿನಿಯರ್‌ಗಳಿಗೆ ನೀಡಿದ್ದ ಬಡ್ತಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ರದ್ದು ಪಡಿಸಿತ್ತು. ಬಡ್ತಿ ಪಡೆದ ಎಂಜಿನಿಯರ್‌ಗಳಿಗೆ ಆಯುಕ್ತರು ನ್ಯಾಯಾಲಯದ ಆದೇಶದ ಬಳಿಕ ಹಿಂಬಡ್ತಿ ನೀಡಿದ್ದರು.

ನಿಯೋಜನೆ ಮೇರೆಗೆ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವವರಿಗೆ, ದಿನಗೂಲಿ ನೌಕರರಿಗೆ, ಸೀಮಿತ ಯೋಜನೆಗಳ ಅನುಷ್ಠಾನದ ಸಲುವಾಗಿ ನೇಮಕಗೊಂಡ ಅಧಿಕಾರಿಗಳಿಗೆ, ಪಿಂಚಣಿ ಸೌಲಭ್ಯ ಇಲ್ಲದ ಹುದ್ದೆಗಳಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಹೊಸ ನಿಯಮವು ಅನ್ವಯಿಸುವುದಿಲ್ಲ.

ನೌಕರರ ಸಂಘ ಆಕ್ಷೇಪ

ಹೊಸ ವೃಂದ ಮತ್ತು ನೇಮಕಾತಿ ನಿಯಮದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

‘ಎ ಗುಂಪಿನ ಅಧಿಕಾರಿಗಳು ಹಾಗೂ ₹ 74 ಸಾವಿರಕ್ಕಿಂತ ಹೆಚ್ಚು ಮೂಲವೇತನ ಹೊಂದಿರುವ ಅಧಿಕಾರಿಗಳನ್ನು ಸರ್ಕಾರವೇ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ. ಈ ಅಧಿಕಾರವನ್ನು ಪಾಲಿಕೆಯಲ್ಲೇ ಉಳಿಸಿಕೊಳ್ಳಬೇಕಿತ್ತು. ವ್ಯವಸ್ಥಾಪಕ ಮತ್ತು ಮೌಲ್ಯಮಾಪಕರ ಹುದ್ದೆಗಳು ಹಾಗೂ ಕಂದಾಯ ಅಧಿಕಾರಿಗಳ ತಲಾ 10 ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಇದರಿಂದ ಈ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಲಿದೆ’ ಎಂದು ಸಂಘದ ಅಧ್ಯಕ್ಷ ಎ.ಅಮೃತರಾಜ್‌ ದೂರಿದರು.

‘ನಗರ ಯೋಜನೆ ವಿಭಾಗದ ಅಷ್ಟೂ ಹುದ್ದೆಗಳನ್ನು ಇನ್ನು ಎರವಲು ಸೇವೆ ಮೂಲಕ ಪಡೆಯಬೇಕಾಗುತ್ತದೆ. ಇದು ಕೂಡಾ ಸರಿಯಲ್ಲ. ಈ ಅಂಶಗಳನ್ನು ಕೈಬಿಡುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.