ADVERTISEMENT

ರಸ್ತೆ ಅಗೆದ ಜಲಮಂಡಳಿಗೆ ದಂಡ

ಅನುಮತಿ ಪಡೆಯದೆ ರಸ್ತೆ ಅಗೆದಿದ್ದಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 20:29 IST
Last Updated 10 ನವೆಂಬರ್ 2019, 20:29 IST
ಒಳಚರಂಡಿ ದುರಸ್ತಿಗಾಗಿ ಕ್ವೀನ್‌ ರಸ್ತೆಯನ್ನು ಅಗೆದು ಮತ್ತೆ ಮಣ್ಣಿನಿಂದ ಮುಚ್ಚಿರುವುದು 
ಒಳಚರಂಡಿ ದುರಸ್ತಿಗಾಗಿ ಕ್ವೀನ್‌ ರಸ್ತೆಯನ್ನು ಅಗೆದು ಮತ್ತೆ ಮಣ್ಣಿನಿಂದ ಮುಚ್ಚಿರುವುದು    

ಬೆಂಗಳೂರು: ಅನುಮತಿ ಪಡೆಯದೆ ರಸ್ತೆ ಅಗೆದ ತಪ್ಪಿಗಾಗಿ ಜಲಮಂಡಳಿಗೆ ಬಿಬಿಎಂಪಿಯು ₹25 ಸಾವಿರ ದಂಡ ವಿಧಿಸಿದೆ.

ಜಲಮಂಡಳಿಯು ಕ್ವೀನ್ಸ್‌ ರಸ್ತೆಯಲ್ಲಿನ ಒಳಚರಂಡಿಯನ್ನು ದುರಸ್ತಿಗೊಳಿಸಲು ಶುಕ್ರವಾರ ಸಂಜೆ ರಸ್ತೆಯನ್ನು ಅಗೆದಿತ್ತು. ಸಂಜೆ 5ರಿಂದ 7ರವರೆಗೆ ಒಳಚರಂಡಿ ದುರಸ್ತಿ ಕಾರ್ಯ ಮಾಡಲಾಗಿದೆ. ಭಾನುವಾರ ಬೆಳಿಗ್ಗೆಯವರೆಗೆ ರಸ್ತೆ ದುರಸ್ತಿ ಮಾಡಿರಲಿಲ್ಲ. ಈ ವೇಳೆ ಇದೇ ರಸ್ತೆ ಮೂಲಕ ಸಾಗಿದ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌, ರಸ್ತೆ ದುರಸ್ತಿಗೊಳಿಸದಿರುವುದನ್ನು ಗಮನಿಸಿ ಮತ್ತು ಈ ಕುರಿತು ಅನುಮತಿ ಪಡೆಯದಿರುವ ಬಗ್ಗೆ ಮಾಹಿತಿ ಪಡೆದ ಅವರು, ಜಲಮಂಡಳಿಗೆ ದಂಡ ವಿಧಿಸಿದ್ದಾರೆ.

ಈ ಕುರಿತು ಭಾನುವಾರ ಸಂಜೆ ಟ್ವೀಟ್‌ ಮಾಡಿರುವ ಅನಿಲ್‌ಕುಮಾರ್‌, ‘ಜಲಮಂಡಳಿಗೆ ದಂಡ ವಿಧಿಸಿದ್ದು, ಕಾಮಗಾರಿಗೆ ಬಳಸಿದ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಗಣ್ಯರು ಓಡಾಡುವ ರಸ್ತೆ ಇದು. ಇಲ್ಲಿ ಒಳಚರಂಡಿ ಕೆಟ್ಟು ಹೋಗಿ, ಕಲುಷಿತ ನೀರು ರಸ್ತೆಯ ಮೇಲೆ ಹರಿದಾಡುತ್ತಿತ್ತು. ಸ್ಥಳೀಯರು ಮತ್ತು ಪೊಲೀಸರು ಬಂದು ಇದನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದರು. ಶನಿವಾರ ಮತ್ತು ಭಾನುವಾರ ರಜೆ ಇದ್ದುದರಿಂದ ಶುಕ್ರವಾರ ಸಂಜೆ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಎರಡೇ ತಾಸಿನಲ್ಲಿ ಒಳಚರಂಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದೇವೆ. ಮ್ಯಾನ್‌ಹೋಲ್‌ ಗಟ್ಟಿಯಾಗಬೇಕು ಎಂಬ ಉದ್ದೇಶದಿಂದ ‘ಕ್ಯೂರಿಂಗ್‌’ ಮಾಡಲು ನಿರ್ಧರಿಸಿದ್ದೆವು. ರಸ್ತೆ ಮುಚ್ಚಿರಲಿಲ್ಲ. ಭಾನುವಾರ ಸಂಜೆ ವೇಳೆಗೆ ರಸ್ತೆ ದುರಸ್ತಿಯನ್ನೂ ಮಾಡಲಾಯಿತು’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ. ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ದಂಡ ಹಾಕಿರುವ ಕುರಿತು ಈವರೆಗೆ ಯಾವುದೇ ಮಾಹಿತಿ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.