ADVERTISEMENT

ನಕಲಿ ಆದೇಶ ಪತ್ರ ಸೃಷ್ಟಿಸಿ ಕೆಲಸಕ್ಕೆ ಹಾಜರು !

ಬಿಬಿಎಂಪಿಯ ಅಮಾನತ್ತಾದ ಎಸ್‌ಡಿಎ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 4:22 IST
Last Updated 7 ಜುಲೈ 2019, 4:22 IST
   

ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಅಮಾನತ್ತಾಗಿದ್ದ ದ್ವಿತೀಯ ದರ್ಜೆ ಸಹಾಯಕ ಆನಂದ್, ಸಹಾಯಕ ಆಯುಕ್ತ ಡಿ.ಬಿ. ನಟೇಶ್ ಅವರ ಹೆಸರಿನಲ್ಲಿ ನಕಲಿ ಆದೇಶ ಪತ್ರ ಸೃಷ್ಟಿಸಿ ಕೆಲಸಕ್ಕೆ ವರದಿ ಮಾಡಿಕೊಂಡ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸಹಾಯಕ ಆಯುಕ್ತ ನಟೇಶ್ ಅವರೇ ದೂರು ನೀಡಿದ್ದಾರೆ.ನಕಲಿ ದಾಖಲೆ ಸೃಷ್ಟಿ (ಐಪಿಸಿ 468),ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು (ಐಪಿಸಿ 471) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಆನಂದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜಯನಗರ 4ನೇ ಹಂತದ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು. ಪುನಃ ಕೆಲಸಕ್ಕೆ ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಅವರು ನಕಲಿ ಆದೇಶ ಪತ್ರ ಸೃಷ್ಟಿಸಿದ್ದರು’ ಎಂದು ವಿವರಿಸಿದರು.

ADVERTISEMENT

‘ಸಹಾಯಕ ಆಯುಕ್ತರ ಸಹಿಯನ್ನು ಪೂರ್ಜರಿ ಮಾಡಿ ಆದೇಶ ಪತ್ರ ಸಿದ್ಧಪಡಿಸಿದ್ದ ಆರೋಪಿ, ‘ಆನಂದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೊಮ್ಮನಹಳ್ಳಿಯ ವ್ಯವಸ್ಥಾಪಕರ (ಆರೋಗ್ಯ) ಕಚೇರಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದೆ’ ಎಂದು ಬರೆದಿದ್ದರು. ಆ ಪತ್ರವನ್ನೇ ಕಚೇರಿಗೆ ನೀಡಿ ಜೂನ್ 28ರಂದೇ ಕೆಲಸಕ್ಕೆ ವರದಿ ಮಾಡಿಕೊಂಡಿದ್ದರು.’

‘ಆ ವಿಷಯ ಇತ್ತೀಚೆಗೆ ಸಹಾಯಕ ಆಯುಕ್ತರ ಗಮನಕ್ಕೆ ಬಂದಿತ್ತು. ಆದೇಶ ಪತ್ರವನ್ನು ಪರಿಶೀಲಿಸಿದಾಗ ಆರೋಪಿ ಕೃತ್ಯ ಬಯಲಾಗಿತ್ತು. ಪತ್ರದ ಸಮೇತವೇ ಸಹಾಯಕ ಆಯುಕ್ತರು ದೂರು ನೀಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.