ADVERTISEMENT

10 ದಿನಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:31 IST
Last Updated 28 ಡಿಸೆಂಬರ್ 2020, 20:31 IST
ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಆಡಳಿತಾಧಿಕಾರಿ ಗೌರವ್‌ ಗುಪ್ತ
ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಆಡಳಿತಾಧಿಕಾರಿ ಗೌರವ್‌ ಗುಪ್ತ   

ಬೆಂಗಳೂರು: ಪಾಲಿಕೆಯ ವ್ಯಾಪ್ತಿಯಲ್ಲಿ ಬಾಕಿ ಇರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ಗುಂಡಿ, ಬೀದಿ ದೀಪ ಅಳವಡಿಕೆ, ಯಾಂತ್ರಿಕ ಕಸ ಗುಡಿಸುವ ಯಂತ್ರ ಹಾಗೂ ವಾರ್ಷಿಕ ರಸ್ತೆ ನಿರ್ವಹಣೆ ಕುರಿತು ಅಧಿಕಾರಿಗಳ ಜತೆ ಅವರು ಸೋಮವಾರ ಸಭೆ ನಡೆಸಿದರು.

‘ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಬಹುತೇಕ ಕಡೆ ಗುಂಡಿಗಳನ್ನು ಮುಚ್ಚಲಾಗಿದೆ. ಆ ಕಾಮಗಾರಿಗೆ ಇನ್ನಷ್ಟು ವೇಗ ನೀಡಿ ಗುಣಮಟ್ಟ ಮತ್ತು ಪ್ರಮಾಣ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಡಾಂಬರು ಮಿಶ್ರಣ ಘಟಕದಿಂದ ಎಲ್ಲ 8 ವಲಯಗಳಿಗೂ ಪ್ರತಿದಿನ ಎರಡು ಲೋಡ್‌ ಡಾಂಬರು ಕಳುಹಿಸಿ 10 ದಿನಗಳಲ್ಲಿ ಉಳಿದೆಲ್ಲಾ ಗುಂಡಿಗಳನ್ನು ಮುಚ್ಚಬೇಕು’ ಎಂದರು.

‘ಬೀದಿದೀಪಗಳ ನಿರ್ವಹಣೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಟೆಂಡರ್ ಪ್ರಕ್ರಿಯೆಗಳನ್ನು ವೇಗವಾಗಿ ನಡೆಸಿ ಬೀದಿ ದೀಪಗಳ ನಿರ್ವಹಣೆಗೆ ತ್ವರಿತ ಕಾರ್ಯಾದೇಶ ನೀಡಬೇಕು. ಬೀದಿ ದೀಪ ಅಳವಡಿಸುವ ಸಂಬಂಧ ಆಯಾ ವಲಯ ಮುಖ್ಯ ಎಂಜಿನಿಯರ್‌ಗಳು ಹೆಚ್ಚು ಗಮನ ಹರಿಸಬೇಕು’ ಎಂದು ಆಡಳಿತಾಧಿಕಾರಿ ಸೂಚನೆ ನೀಡಿದರು.

‘ಕಸ ಗುಡಿಸುವ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಎಂಬುದರ ಬಗ್ಗೆ ಕಾರ್ಯಪಾಲಕ ಎಂಜಿನಿಯರ್ (ರಸ್ತೆ ಮೂಲಸೌಕರ್ಯ) ನಿಗಾ ವಹಿಸಬೇಕು. ಪ್ರತಿನಿತ್ಯ ಎಷ್ಟು ಕಿ.ಮೀ. ರಸ್ತೆ ಗುಡಿಸುತ್ತಿವೆ ಎಂಬುದರ ಕುರಿತು ವರದಿ ಸಿದ್ಧಪಡಿಸಬೇಕು‘ ಎಂದರು.

‘ಪಾಲಿಕೆ ವ್ಯಾಪ್ತಿಯ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ಸಮರ್ಪಕ ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ತ್ವರಿತಗೊಳಿಸಿ ನಿರ್ವಹಣೆ ಕಾರ್ಯ ಆರಂಭಿಸಬೇಕು. ಇದೇ ರೀತಿ ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ ವಿಭಜಕಗಳಿಗೆ ಬಣ್ಣ ಬಳಿಯುವ ಹಾಗೂ ರಸ್ತೆಗಳಿಗೆ ಲೈನ್ ಗುರುತು ಮಾಡುವ ಸಂಬಂಧ ಯೋಜನೆ ರೂಪಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು‘ ಎಂದು ಹೇಳಿದರು.

ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.