ADVERTISEMENT

24 ಗಂಟೆಯೂ ಕೋವಿಡ್‌ ಲಸಿಕೆ– ಪಾಲಿಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 21:55 IST
Last Updated 4 ಮಾರ್ಚ್ 2021, 21:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಲಸಿಕೆ ಕೇಂದ್ರಗಳಲ್ಲಿ ಜನಜಂಗುಳಿ ಉಂಟಾಗುವುದನ್ನು ತಪ್ಪಿಸಲು ದಿನದ 24 ಗಂಟೆಯೂ ಲಸಿಕೆ ಹಾಕುವುದಕ್ಕೆ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಬಿಬಿಎಂಪಿ ಇದರ ಅನುಷ್ಠಾನಕ್ಕೆ ತಯಾರಿ ನಡೆಸಿದೆ.

‘100ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯವಿರುವ 107 ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯನ್ನು ಶುಕ್ರವಾರ ಕರೆದಿದ್ದೇನೆ. ಅವುಗಳ ಜೊತೆಗೆ, ಬಿಬಿಎಂಪಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಹಾಗೂ 28 ಹೆರಿಗೆ ಆಸ್ಪತ್ರೆಗಳು ಹಾಗೂ ಆರು ರೆಫರಲ್‌ ಆಸ್ಪತ್ರೆಗಳಲ್ಲೂ ಸೋಮವಾರದಿಂದ ಕೋವಿಡ್‌ ಲಸಿಕಾ ಕೇಂದ್ರ ಆರಂಭಿಸಲಾಗುತ್ತಿದೆ. ದಿನದ 24 ಗಂಟೆಯೂ ಲಸಿಕೆ ನೀಡುವುದಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸುತ್ತೇವೆ. ಲಸಿಕ ಕೇಂದ್ರಗಳ ನಿರ್ವಹಣೆ ಬಗ್ಗೆ ಆಸ್ಪತ್ರೆಯವರಿಗೆ ತರಬೇತಿಯನ್ನೂ ನೀಡಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬಿಬಿಎಂಪಿಯ ಪಿಎಚ್‌ಸಿಗಳು ಮತ್ತು 34 ಆಸ್ಪತ್ರೆಗಳಲ್ಲೇ ದಿನಕ್ಕೆ ತಲಾ 200ರಂತೆ ಒಟ್ಟು 35 ಸಾವಿರ ಮಂದಿಗೆ ಕೋವಿಡ್‌ ಲಸಿಕೆ ನೀಡಬಹುದು. ಇದಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಹಾಕುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡರೆ, ಲಸಿಕೆ ಪಡೆಯಲು ಜನ ಜಂಗುಳಿ ಉಂಟಾಗುವ ಸಾಧ್ಯತೆ ಕಡಿಮೆ’ ಎಂದರು.

ADVERTISEMENT

ಲಸಿಕೆ ಪಡೆಯಲು ಉತ್ಸಾಹ: ಕೋವಿಡ್‌ ಲಸಿಕೆ ಪಡೆಯಲು ಹಿರಿಯ ನಾಗರಿಕರು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ 41 ಕೇಂದ್ರಗಳಲ್ಲಿ ಗುರುವಾರ 7,800 ಮಂದಿಗೆ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿತ್ತು. ಒಟ್ಟು 7,351 ಮಂದಿ ಲಸಿಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.