ADVERTISEMENT

ಮುಗಿದ ಗಡುವನ್ನು ಅಣಕಿಸುವ ಗುಂಡಿಗಳು!

ಕೆಲವೆಡೆ ಮರುಡಾಂಬರೀಕರಣವೇ ಪರಿಹಾರ: ಆಯುಕ್ತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 21:54 IST
Last Updated 11 ನವೆಂಬರ್ 2019, 21:54 IST
ಬನ್ನೇರುಘಟ್ಟ ರಸ್ತೆಯಲ್ಲಿ ಚಂದ್ರಪ್ಪ ನಗರದ ಬಳಿ ಸೋಮವಾರ ಕಂಡು ಬಂದ ರಸ್ತೆಗುಂಡಿ - ಪ್ರಜಾವಾಣಿ ಚಿತ್ರ
ಬನ್ನೇರುಘಟ್ಟ ರಸ್ತೆಯಲ್ಲಿ ಚಂದ್ರಪ್ಪ ನಗರದ ಬಳಿ ಸೋಮವಾರ ಕಂಡು ಬಂದ ರಸ್ತೆಗುಂಡಿ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಮುಖ್ಯರಸ್ತೆ ಹಾಗೂ ಉಪಮುಖ್ಯರಸ್ತೆಗಳಲ್ಲಿರುವ ಗುಂಡಿಗಳನ್ನೆಲ್ಲಾ ಮುಚ್ಚಿ ಆಗಿದೆ. ವಾರ್ಡ್ ಮಟ್ಟದ ರಸ್ತೆಗಳಲ್ಲಿ ಇನ್ನೂ 742 ಗುಂಡಿಗಳನ್ನು ಮುಚ್ಚಲು ಬಾಕಿ ಇದೆ ಎಂದು ಬಿಬಿಎಂಪಿ ಹೇಳಿದೆ. ಆದರೆ ಮುಖ್ಯ ರಸ್ತೆ ಹಾಗೂ ಉಪಮುಖ್ಯರಸ್ತೆಗಳಲ್ಲೂ ಈಗಲೂ ಇರುವ ಗುಂಡಿಗಳು ಮುಗಿದಿರುವ ಗಡುವನ್ನು ಅಣಕಿಸುತ್ತಿವೆ!

ರಸ್ತೆ ಗುಂಡಿ ಮುಚ್ಚಿರುವ ಕೆಲವೆಡೆ ಅಕ್ಕಪಕ್ಕದ ಕೆಲವು ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಬಿಬಿಎಂಪಿಯವರು ಯಾವ ಆಧಾರದಲ್ಲಿ ಗುಂಡಿ ಮುಚ್ಚಿದ ಲೆಕ್ಕ ನೀಡಿದ್ದಾರೋ ಗೊತ್ತಿಲ್ಲ. ವಾರ್ಡ್‌ ಮಟ್ಟದ ರಸ್ತೆಗಳಲ್ಲಂತೂ ಈಗಲೂ ಗುಂಡಿಗಳು ಹಾಗೆಯೇ ಇವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌, ‘ಒಂದು ಗುಂಡಿ ಮುಚ್ಚಿ ಪಕ್ಕದ ಇನ್ನೊಂದು ಬಿಡಬೇಡಿ ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ. ಇಂತಹ ದೂರುಗಳಿದ್ದರೆ ಪರಿಶೀಲಿಸುತ್ತೇನೆ’ ಎಂದರು.

ADVERTISEMENT

ಕೆಲವೆಡೆ ರಸ್ತೆಗಳು ಗುಂಡಿ ಮತ್ತು ರಸ್ತೆಯ ನಡುವೆ ವ್ಯತ್ಯಾಸವೇ ತಿಳಿಯದಷ್ಟು ಹದಗೆಟ್ಟಿವೆ.

‘ಇಂತಹ ಕಡೆ ಮರುಡಾಂಬರೀಕರಣವೇ ಪರಿಹಾರ. ಗುಂಡಿ ಬೀಳುವುದನ್ನು ತಪ್ಪಿಸಲು ರಸ್ತೆಗಳನ್ನು ಸದೃಢಗೊಳಿಸಬೇಕಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಮಳೆ ನೀರು ಚರಂಡಿಗಳನ್ನು ಸುಸ್ಥಿತಿಗೆ ತರಬೇಕಿದೆ’ ಎಂದರು.

‘ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚುವಂತೆ ಸೂಚಿಸಿದರೂ ಈ ಆದೇಶ ಪಾಲಿಸದ ನಾಲ್ವರು ಎಂಜಿನಿಯರ್‌ಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ರಸ್ತೆಗಳನ್ನು ನಿರ್ಮಿಸಿರುವ ಗುತ್ತಿಗೆದಾರರು ಅದನ್ನು ನಿರ್ವಹಣೆ ಮಾಡಬೇಕಾದ ಅವಧಿ ಚಾಲ್ತಿಯಲ್ಲಿರುವ ರಸ್ತೆಗಳಲ್ಲೂ ಹೊಂಡಗಳು ಕಾಣಿಸಿವೆ. ಅವುಗಳನ್ನು ದುರಸ್ತಿ ಪಡಿಸದ ಗುತ್ತಿಗೆದಾರರಿಗೆ ನೋಟಿಸ್‌ ಜಾರಿ ಮಾಡಿ ಕೆಲಸ ಮಾಡಿಸುವಂತೆ ಸೂಚನೆ ನೀಡಿದ್ದೇನೆ’ ಎಂದರು.

ಸುಮನಹಳ್ಳಿ ಸೇತುವೆ: ಇನ್ನೊಂದು ರಸ್ತೆಯೂ ಶಿಥಿಲ
ಸುಮನಹಳ್ಳಿ ಮೇಲ್ಸೇತುವೆಯ ಇತ್ತೀಚೆಗೆ ಕಾಂಕ್ರಿಟ್‌ ಕುಸಿತವಾಗಿದ್ದ ರಸ್ತೆಯ ಪಕ್ಕದ ಇನ್ನೊಂದು ರಸ್ತೆಯೂ ಶಿಥಿಲಗೊಂಡಿದೆ. ಹಾಗಾಗಿ ಎರಡನ್ನೂ ಒಟ್ಟಿಗೆ ದುರಸ್ತಿಪಡಿಸಲು ಪಾಲಿಕೆ ಮುಂದಾಗಿದೆ.

‘ಮೇಲ್ಸೇತುವೆಯ ಒಂದು ಭಾಗದ ರಸ್ತೆ ಮಾತ್ರ ಶಿಥಿಲವಾಗಿದೆ ಎಂಬು ಭಾವಿಸಿದ್ದೆವು. ಆದರೆ ಈ ಮೆಲ್ಸೇತುವೆಯ ದೃಢತೆಯನ್ನು ಮೂಲಮಾದರಿ ಪರೀಕ್ಷೆ ಹಾಗೂ ಅಲ್ಟ್ರಾ ಸೌಂಡ್‌ ಪರೀಕ್ಷೆಗೆ ಒಳಪಡಿಸಿದಾಗ ಅದರ ಪಕ್ಕದ ಇನ್ನೊಂದು ರಸ್ತೆಯೂ ದುರ್ಬಲಗೊಂಡಿರುವುದು ಕಂಡುಬಂದಿದೆ. ಹಾಗಾಗಿ ಅವೆರಡರಲ್ಲೂ ಶಿಥಿಲಗೊಂಡ ಭಾಗದ ಸೆಂಟ್ರಿಂಗ್‌ ತೆರವುಗೊಳಿಸಿದ್ದೇವೆ’ ಎಂದು ಆಯುಕ್ತ ಅನಿಲ್ ಕುಮಾರ್‌ ಮಾಹಿತಿ ನೀಡಿದರು.

‘ಎರಡು ದಿನಗಳಲ್ಲಿ ಇವುಗಳಿಗೆ ಮತ್ತೆ ಕಾಂಕ್ರೀಟ್‌ ಹಾಕಲಾಗುತ್ತದೆ. ಇದಾಗಿ ಎರಡು ದಿನ ಬಿಟ್ಟು ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುತ್ತದೆ’ ಎಂದರು.

ಓಕಳೀಪುರ ಜಂಕ್ಷನ್‌ ಬಳಿ ರಸ್ತೆಗುಂಡಿಯಲ್ಲಿ ನೀರು ನಿಂತಿರುವುದು

*
ಮಳೆ ಬಂದಾಗ ರಸ್ತೆ ಗುಂಡಿ ಬೀಳುವುದು ಸಹಜ. ಗುಂಡಿ ಮುಚ್ಚುವುದು ನಿರಂತರ ಪ್ರಕ್ರಿಯೆ. ಬಾಕಿ ಇರುವ ಗುಂಡಿಗಳನ್ನು ಇನ್ನೆರಡು ದಿನಗಳಲ್ಲಿ ಮುಚ್ಚುತ್ತೇವೆ.
–ಬಿ.ಎಚ್‌.ಅನಿಲ್‌ ಕುಮಾರ್‌, ಪಾಲಿಕೆ ಆಯುಕ್ತ

**

ಪರಿಹಾರ: ವಿವರಣೆ ಸಲ್ಲಿಸಲು ಹೈಕೋರ್ಟ್‌ ಆದೇಶ
ಬೆಂಗಳೂರು:
‘ರಸ್ತೆ ಗುಂಡಿಗಳಿಂದಉಂಟಾಗುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಹೈಕೋರ್ಟ್‌ ನೀಡಿರುವ ಆದೇಶಗಳನ್ನು ಇನ್ನೂ ಏಕೆ ಪಾಲನೆ ಮಾಡಿಲ್ಲ ಎಂಬುದರ ಕುರಿತು ವಿವರಣೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ಆದೇಶಿಸಿದೆ.

‘ನಗರದಲ್ಲಿನ ರಸ್ತೆಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ಅವರು, ‘ರಸ್ತೆ ಗುಂಡಿಗಳಿಂದ ಅಪಘಾತಗಳಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವ ಕುರಿತಂತೆ ಕರ್ನಾಟಕ ಪೌರಾಡಳಿತ ಕಾಯ್ದೆಯಲ್ಲಿ ಯಾವುದೇ ಸ್ಪಷ್ಟ ವಿವರಣೆ ಇಲ್ಲ. ಈ ದಿಸೆಯಲ್ಲಿ ಪಾಲಿಕೆ ಇನ್ನೂ ಮಾರ್ಗದರ್ಶಿ ಸೂತ್ರ ರೂಪಿಸಬೇಕಿದೆ. ತಜ್ಞರ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

‘ಅಪಘಾತಗಳು ರಸ್ತೆ ಗುಂಡಿಗಳಿಂದಲೇ ಆಗಿವೆ ಎಂಬ ಬಗ್ಗೆ ನಿರ್ದಿಷ್ಟ ಸಾಕ್ಷ್ಯಗಳಿರಬೇಕು ಮತ್ತು ಇಂತಹ ಅರ್ಜಿಗಳನ್ನು ಸ್ವೀಕರಿಸುವ ಹಾಗೂ ವಿಲೇವಾರಿ ಮಾಡುವ ಬಗ್ಗೆ ಸ್ಪಷ್ಟ ಕಾನೂನುಗಳಿಲ್ಲ. ಆದಾಗ್ಯೂ, ನ್ಯಾಯಪೀಠದ ಆದೇಶದ ಅನುಸಾರ ಶೇ 100ರಷ್ಟು ಗುಂಡಿ ಮುಕ್ತ ಮಾಡಲು ಪಾಲಿಕೆ ಶ್ರಮ ವಹಿಸುತ್ತದೆ. ಆದ್ದರಿಂದ ಅಪಘಾತ ಪರಿಹಾರ ನೀಡಿಕೆ ಕುರಿತಂತೆ ಜಾಹೀರಾತು ಮೂಲಕ
ಸಾರ್ವಜನಿಕರಿಗೆ ಪ್ರಚಾರ ನೀಡಬೇಕೆಂಬ ಆದೇಶ ವಾಪಸು ಪಡೆಯಬೇಕು’ ಎಂದು ಕೋರಿದರು.

ಘಟಕ ಸ್ಥಾಪನೆ: ‘ಗುಂಡಿ ಭರ್ತಿಮಾಡಲು ಬಳಸುವ ಹಾಟ್‌ ಮಿಕ್ಸ್‌ (ಜಲ್ಲಿ ಕಲ್ಲು ಮತ್ತು ಟಾರು ಮಿಶ್ರಣ) ಘಟಕವನ್ನು ಬಿಬಿಎಂಪಿ ವತಿಯಿಂದಲೇ ಸ್ಥಾಪಿಸಲಾಗಿದೆ. ಡಿಸೆಂಬರ್ ನಂತರ ಈ ಘಟಕ ತನ್ನ ಕಾರ್ಯಆರಂಭಿಸಲಿದೆ’ ಎಂದು ವಿವರಿಸಿದರು. ಇದಕ್ಕೆ ನ್ಯಾಯಪೀಠವು, ‘ಈ ಕುರಿತಂತೆ ನ್ಯಾಯಪೀಠ ಈ ಹಿಂದೆ ನೀಡಿರುವ ಆದೇಶಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಏಕೆ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬಾರದು ಎಂಬ ಬಗ್ಗೆ ವಿವರಿಸಿ’ ಎಂದು ಸೂಚಿಸಿ ವಿಚಾರಣೆ ಮುಂದೂಡಿದೆ.

1,337 ರಸ್ತೆಗುಂಡಿಗಳ ಭರ್ತಿ ಬಾಕಿ: ಬಿಬಿಎಂಪಿ
‘ರಸ್ತೆ ಗುಂಡಿಗಳನ್ನು ಭರ್ತಿ ಮಾಡುವಲ್ಲಿ ಪಾಲಿಕೆ ಎಂಜಿನಿಯರ್‌ಗಳು ಹಗಲೂ ರಾತ್ರಿ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಮಳೆ ಇರುವ ಕಾರಣ ಶೇ 100ರಷ್ಟು ಗುಂಡಿ ಮುಕ್ತ ರಸ್ತೆಗಳ ನಿರ್ವಹಣೆ ಸಾಧ್ಯವಾಗಿಲ್ಲ’ ಕೆ.ಎನ್‌.ಪುಟ್ಟೇಗೌಡ ನ್ಯಾಯಪೀಠಕ್ಕೆ ತಿಳಿಸಿದರು.

‘ಪಾಲಿಕೆಯ ಒಟ್ಟು 46 ವಾರ್ಡುಗಳಲ್ಲಿ ರಸ್ತೆಗುಂಡಿಗಳ ಬಗ್ಗೆ ಈತನಕ ಚರ್ಚೆ ನಡೆದಿದೆ. ನವೆಂಬರ್‌ ಅಂತ್ಯದೊಳಗೆ ಎಲ್ಲ ರಸ್ತೆಗಳನ್ನೂ ಗುಂಡಿ ಮುಕ್ತಗೊಳಿಸಲಾಗುವುದು’ ಎಂದರು.

‘ಪಾಲಿಕೆ ವ್ಯಾಪ್ತಿಯ ಒಟ್ಟು ವಲಯಗಳಲ್ಲಿರುವ ರಸ್ತೆಗುಂಡಿಗಳ ಬಗ್ಗೆ 1.10.2019ರಿಂದ 8.11.2019ರವರೆಗೆ ಇದ್ದ ವಸ್ತುಸ್ಥಿತಿ ವರದಿಯನ್ನು ಪ್ರಮಾಣ ಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು. ಎಂಟು ವಲಯಗಳಲ್ಲಿ ಒಟ್ಟು 10,656 ಗುಂಡಿಗಳಿವೆ. ಇವುಗಳಲ್ಲಿ 9,319 ಭರ್ತಿ ಮಾಡಲಾಗಿದ್ದು, 1,337 ಬಾಕಿ ಇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.