ADVERTISEMENT

ಆಸ್ತಿ ತೆರಿಗೆ | 3.75 ಲಕ್ಷ ಸುತ್ತಿದಾರರಿಗೆ ನೋಟಿಸ್‌: ಮಹೇಶ್ವರ್‌ ರಾವ್

ನಗರದಲ್ಲಿ ಒಂದು ವಾರದಲ್ಲಿ 68 ಡೆಂಗಿ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 15:21 IST
Last Updated 28 ಜುಲೈ 2025, 15:21 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ₹800 ಕೋಟಿ ಆಸ್ತಿ ತೆರಿಗೆ ಪಾವತಿಸದ 3.75 ಲಕ್ಷ ಸುಸ್ತಿದಾರರಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ತಿಳಿಸಿದರು.

ಅಧಿಕಾರಿಗಳ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಆದ್ಯತೆ ನೀಡಬೇಕು. ಇನ್ನೂ ಪರಿಣಾಮಕಾರಿಯಾಗಿ ಸಂಗ್ರಹವಾಗಬೇಕು. ಎಸ್‌ಎಂಎಸ್ ಹಾಗೂ ಇ-ಮೇಲ್ ಮೂಲಕ ನೋಟೀಸ್ ಜಾರಿ ಮಾಡಬೇಕು’ ಎಂದು ಸೂಚಿಸಿದರು.

ಹೊಸ ಖಾತಾ ನೀಡುವಂತೆ ಕೋರಿ 50 ಸಾವಿರಕ್ಕೂ ಹೆಚ್ಚು ಅರ್ಜಿಗಳು ಪಾಲಿಕೆಗೆ ಸಲ್ಲಿಕೆಯಾಗಿವೆ. ಅವುಗಳನ್ನು ಆದ್ಯತೆ ಮೇರೆಗೆ ಅನುಮೋದಿಸಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಲಿದೆ ಎಂದರು.

ADVERTISEMENT

ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಆದ್ಯತೆಯ ಮೇಲೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ವಾರ್ಡ್ ರಸ್ತೆಗಳಲ್ಲಿಯೂ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದರು.

ಡೆಂಗಿ ಪ್ರಕರಣ: ನಗರದಲ್ಲಿ ಒಂದು ವಾರದಲ್ಲಿ 69 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಜುಲೈನಲ್ಲಿ 442 ಪ್ರಕರಣಗಳು, 2025ರ ಜನವರಿಯಿಂದ ಇಲ್ಲಿಯವರೆಗೆ 1,685 ಪ್ರಕರಣಗಳು ಪತ್ತೆಯಾಗಿವೆ. ಲಾರ್ವಾ ಉತ್ಪತ್ತಿ ಆಗುವ ತಾಣಗಳನ್ನು ಗುರುತಿಸಿ ಔಷಧಿ ಸಿಂಪಡಣೆ ಮಾಡಿ ಡೆಂಗಿ ನಿರ್ಮೂಲನೆ ಮಾಡಬೇಕು ಎಂದು ಮಹೇಶ್ವರ್‌ ರಾವ್‌ ಸೂಚಿಸಿದರು.

ಸೊಳ್ಳೆಗಳನ್ನು ನಿಯಂತ್ರಿಸಲು ಮನೆಗಳಲ್ಲಿ ಓವಿ ಟ್ರ್ಯಾಪ್‌ಗಳನ್ನು ಅಳವಡಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚು ಪ್ರಕರಣಗಳು ಕಂಡುಬರುವ ಕಡೆ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿರ್ಮೂಲನೆ ಮಾಡಬೇಕು. ನಿರಂತರವಾಗಿ ಫಾಗಿಂಗ್ ಮತ್ತು ಔಷಧ ಸಿಂಪಡಣೆ ಕಾರ್ಯ ನಡೆಸಬೇಕು ಎಂದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕರೀಗೌಡ, ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

‘ಎಲ್ಲರಿಗೂ ಎ ಖಾತಾ: ಯಾರಿಗೂ ಲಂಚ ನೀಡಬೇಡಿ’

'ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳಿಗೆ ಎ ಖಾತಾ ನೀಡುವ ಪ್ರಕ್ರಿಯೆಯನ್ನು 15 ದಿನದಲ್ಲಿ ಆನ್‌ಲೈನ್‌ನಲ್ಲೇ ಆರಂಭಿಸಲಾಗುವುದು. ಬಿಬಿಎಂಪಿ ಕಚೇರಿಗೆ ಹೋಗಬೇಡಿ ಯಾರಿಗೂ ಲಂಚ ನೀಡಬೇಡಿ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಮನವಿ ಮಾಡಿದ್ದಾರೆ. ‘ಸರ್ಕಾರದ ಆದೇಶದ ಪ್ರಕಾರ ನಾಗರಿಕರು ಎ-ಖಾತಾಗೆ ಅರ್ಜಿ ಸಲ್ಲಿಸಲು ಮತ್ತು ಖಾತಾ ಪಡೆದುಕೊಳ್ಳಲು ಆನ್‌ಲೈನ್‌ ವ್ಯವಸ್ಥೆ ಆರಂಭಿಸಲಾಗುತ್ತದೆ. ಅದು ಜಾರಿಯಾದ ನಂತರ ನಾಗರಿಕರು ಅರ್ಜಿ ಸಲ್ಲಿಸಬಹುದು. ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದು ಅಥವಾ ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸ ಎ-ಖಾತಾ ಕೋರಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.