ADVERTISEMENT

ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದಿಂದ ವೆಂಟಿಲೇಟರ್‌

ಕೋವಿಡ್‌ ಸಾವು ಕಡಿಮೆ ಮಾಡಲು ಸರ್ಕಾರದ ಮುಂದೆ ವಿವಿಧ ಪ್ರಸ್ತಾಪ ಮುಂದಿಟ್ಟ ಬಿಬಿಎಂಪಿ

ಪ್ರವೀಣ ಕುಮಾರ್ ಪಿ.ವಿ.
Published 14 ಅಕ್ಟೋಬರ್ 2020, 20:43 IST
Last Updated 14 ಅಕ್ಟೋಬರ್ 2020, 20:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಸಾಯುತ್ತಿರುವವರ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಿಗೂ ಕೃತಕ ಉಸಿರಾಟದ ಸಾಧನಗಳನ್ನು (ವೆಂಟಿಲೇಟರ್‌) ಪೂರೈಸುವ ಪ್ರಸ್ತಾಪವನ್ನು ಬಿಬಿಎಂಪಿ ಮುಂದಿಟ್ಟಿದೆ.

ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಲಾ 100 ವೆಂಟಿಲೇಟರ್‌ ಒದಗಿಸಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರವು ಖರೀದಿಸಿದ ಪ್ರತಿ ವೆಂಟಿಲೇಟರ್‌ಗಳಿಗೆ ₹ 4ಲಕ್ಷ ವೆಚ್ಚವಾಗಿತ್ತು. ರಾಜ್ಯ ಸರ್ಕಾರ ಈ ಹಿಂದೆ ಪ್ರತಿ ವೆಂಟಿಲೇಟರ್‌ಗೆ ₹ 18 ಲಕ್ಷದವರೆಗೂ ಪಾವತಿಸಿತ್ತು. ಖಾಸಗಿ ಆಸ್ಪತ್ರೆಗೆ ಪೂರೈಸುವ ಪ್ರತಿ ವೆಂಟಿಲೇಟರ್‌ಗೆ ಎಷ್ಟು ವೆಚ್ಚವಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕೋವಿಡ್‌ ರೋಗಿಗಳ ಮರಣ ದರವನ್ನು (ಸಿಎಫ್‌ಆರ್‌ ) ಶೇ 1ಕ್ಕಿಂತ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಂವಾದದಲ್ಲಿ ಸೂಚಿಸಿದ್ದರು. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಎಫ್‌ಆರ್‌ ಪ್ರಮಾಣ ಶೇ 1.17ರಷ್ಟಿದೆ.

ADVERTISEMENT

‘ಕೋವಿಡ್‌ ಮರಣ ದರವನ್ನು (ಸಿಎಫ್‌ಆರ್‌) ಶೇ 1ಕ್ಕಿಂತ ಕಡಿಮೆಗೆ ಇಳಿಸಬೇಕಾಗಿದೆ. ಇದಕ್ಕಾಗಿ ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ನಗರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸುವುದೂ ಇದರಲ್ಲಿ ಒಂದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಂಟಿಲೇಟರ್‌ಗಳಿಗೆ ಆಗುವ ವೆಚ್ಚಕ್ಕಿಂತ ಅದರ ನಿರ್ವಹಣೆಗೆ ತಗಲುವ ವೆಚ್ಚ ಜಾಸ್ತಿ. ವೆಂಟಿಲೇಟರ್‌ ಅಳವಡಿಸಲಾದ ರೋಗಿಗೆ ದಿನದ 24 ಗಂಟೆಯೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಬೇಕಾಗುತ್ತದೆ. ಕೆಲವು ಖಾಸಗಿ ಆಸ್ಪತ್ರೆಗಳು ವೆಂಟಿಲೇಟರ್‌ ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದವು. ತಾವಾಗಿಯೇ ಮುಂದೆ ಬರುವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ವೆಂಟಿಲೇಟರ್‌ ಪೂರೈಸುತ್ತೇವೆ. ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಶಿಫಾರಸಿನ ಆಧಾರದಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಬಿಲ್‌ ಪಾವತಿ ವೇಳೆ ವೆಂಟಿಲೇಟರ್‌ಗೆ ತಗಲುವ ವೆಚ್ಚವನ್ನು ಸರ್ಕಾರ ಸರಿದೂಗಿಸಲಿದೆ’ ಎಂದರು.

ಸೋಂಕು ಪತ್ತೆ ಪ್ರಮಾಣ ಇಳಿಕೆ

ನಗರದಲ್ಲಿ ಸೋಂಕು ಪತ್ತೆಯಾಗುವ ಪ್ರಮಾಣ ಶೇ 13.23ಕ್ಕೆ ಇಳಿಕೆಯಾಗಿದೆ. ಕೇಂದ್ರ ಪ್ರದೇಶದಲ್ಲಿರುವ ವಾರ್ಡ್‌ಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. ಆದರೆ, ಹೊರ ವಲಯದ ವಾರ್ಡ್‌ಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚು. ಸೊಂಕು ಪತ್ತೆ ಪ್ರಮಾಣ ಜುಲೈ ತಿಂಗಳಲ್ಲಿ ಶೇ 24.15ಕ್ಕೆ ಏರಿತ್ತು.

‘ನಾವು ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. ದಿನದಲ್ಲಿ 50 ಸಾವಿರಕ್ಕೂ ಹೆಚ್ಚುಮಂದಿಯ ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಸೋಂಕಿತರ ಪ್ರಮಾಣವೂ ಹೆಚ್ಚುತ್ತಿದೆ. ಕೇಂದ್ರ ಭಾಗದ ವಾರ್ಡ್‌ಗಳಲ್ಲಿ ಸೋಂಕು ಹರಡುವ ಪ್ರಮಾಣ ಗರಿಷ್ಠ ಮಟ್ಟವನ್ನು ಈಗಾಗಲೇ ತಲುಪಿಯಾಗಿದೆ. ಈ ವಾರ್ಡ್‌ಗಳಲ್ಲಿ ಈಚೆಗೆ ಸೋಂಕು ತಗಲುವ ಪ್ರಮಾಣ ಕಡಿಮೆ ಆಗಿದೆ. ಆದರೆ, ನಗರದ ಹೊರ ವಲಯಗಳ ವಾರ್ಡ್‌ಗಳಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಕೋವಿಡ್‌ ಪತ್ತೆಗೆ ನಡೆಸುವ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕಿನ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ರ‍್ಯಾಪಿಡ್ ಆ್ಯಕ್ಷನ್‌ ಟೆಸ್ಟ್‌ ಬದಲು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನೇ ಹೆಚ್ಚಾಗಿ ನಡೆಸಲು ನಾವು ತೀರ್ಮಾನಿಸಿದ್ದೇವೆ’ ಎಂದರು.

ಸೋಂಕು ಪತ್ತೆ ಪ್ರಮಾಣ ಇಳಿಕೆ

ನಗರದಲ್ಲಿ ಸೋಂಕು ಪತ್ತೆಯಾಗುವ ಪ್ರಮಾಣ ಶೇ 13.23ಕ್ಕೆ ಇಳಿಕೆಯಾಗಿದೆ. ಕೇಂದ್ರ ಪ್ರದೇಶದಲ್ಲಿರುವ ವಾರ್ಡ್‌ಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. ಆದರೆ, ಹೊರ ವಲಯದ ವಾರ್ಡ್‌ಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚು. ಸೊಂಕು ಪತ್ತೆ ಪ್ರಮಾಣ ಜುಲೈ ತಿಂಗಳಲ್ಲಿ ಶೇ 24.15ಕ್ಕೆ ಏರಿತ್ತು.

‘ನಾವು ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ಸೋಂಕಿತರ ಪ್ರಮಾಣವೂ ಹೆಚ್ಚುತ್ತಿದೆ. ಕೇಂದ್ರ ಭಾಗದ ವಾರ್ಡ್‌ಗಳಲ್ಲಿ ಸೋಂಕು ಹರಡುವ ಪ್ರಮಾಣ ಗರಿಷ್ಠ ಮಟ್ಟವನ್ನು ಈಗಾಗಲೇ ತಲುಪಿಯಾಗಿದೆ. ಈ ವಾರ್ಡ್‌ಗಳಲ್ಲಿ ಈಚೆಗೆ ಸೋಂಕು ತಗಲುವ ಪ್ರಮಾಣ ಕಡಿಮೆ ಆಗಿದೆ. ಆದರೆ, ನಗರದ ಹೊರ ವಲಯಗಳ ವಾರ್ಡ್‌ಗಳಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ಕೋವಿಡ್‌ ಪತ್ತೆಗೆ ನಡೆಸುವ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕಿನ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಬಹುದು. ಹಾಗಾಗಿ ರ‍್ಯಾಪಿಡ್ ಆ್ಯಕ್ಷನ್‌ ಟೆಸ್ಟ್‌ ಬದಲು ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನೇ ಹೆಚ್ಚಾಗಿ ನಡೆಸಲು ನಾವು ತೀರ್ಮಾನಿಸಿದ್ದೇವೆ’ ಎಂದರು.

‘ಏಳೇ ದಿನಗಳಲ್ಲಿ ಬಿಡುಗಡೆಗೆ ಅವಕಾಶ ಕೊಡಿ’

ಕೋವಿಡ್‌ ರೋಗಿಯು ಸರ್ಕಾರದ ಶಿಫಾರಸಿನ ಮೇರೆಗೆ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 10 ದಿನ ಚಿಕಿತ್ಸೆ ಪಡೆಯುವುದು ಕಡ್ಡಾಯ ಎಂಬ ನಿಯಮ ಜಾರಿಯಲ್ಲಿದೆ. ಕೋವಿಡ್‌ನ ಲಘು ಲಕ್ಷಣ ಕಾಣಿಸಿಕೊಂಡಿರುವ ಅನೇಕರು ಭವಿಷ್ಯದಲ್ಲಿ ಅಪಾಯ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂತಹವರು ಒಂದೆರಡು ದಿನಗಳಲ್ಲೇ ಚೇತರಿಸಿಕೊಂಡರೂ ಆಸ್ಪತ್ರೆಯಿಂದ ತಕ್ಷಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಡ್ಡಾಯ ಚಿಕಿತ್ಸೆ ಅವಧಿಯನ್ನು 10 ದಿನಗಳ ಬದಲು 7 ದಿನಗಳಿಗೆ ಇಳಿಸುವಂತೆ ಸರ್ಕಾರವನ್ನು ಕೋರಿದ್ದೇವೆ. ಚಿಕಿತ್ಸೆ ತೀರಾ ಅಗತ್ಯ ಇರುವವರಿಗೆ ಇದರಿಂದ ಶೇ 20ರಷ್ಟು ಹಾಸಿಗೆಗಳು ಹೆಚ್ಚುವರಿಯಾಗಿ ಲಭ್ಯವಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಮಂಜುನಾಥಪ್ರಸಾದ್‌ ತಿಳಿಸಿದರು.

ಕೋವಿಡ್‌ ಚಿಕಿತ್ಸೆ; ಹಾಸಿಗೆಗಳ ವಿವರ

11,328 -ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಒಟ್ಟು ಹಾಸಿಗೆಗಳು

509 -ಐಸಿಯುನಲ್ಲಿ ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳು

8,254 -ಭರ್ತಿಯಾಗಿರುವ ಒಟ್ಟು ಹಾಸಿಗೆಗಳು

454 -ವೆಂಟಿಲೇಟರ್‌ ಸೌಲಭ್ಯದ ಹಾಸಿಗೆಗಳು ಭರ್ತಿಯಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.