ADVERTISEMENT

ಬೆಂಗಳೂರು | ಕೋವಿಡ್ ಸೋಂಕಿತರಿಗೆ ಪಾಲಿಕೆಯಿಂದಲೇ ವೈದ್ಯಕೀಯ ಕಿಟ್‌

ಕೋವಿಡ್‌ ನಿಯಂತ್ರಣ– ಪಾಲಿಕೆ ಸದಸ್ಯರ ಹೆಗಲಿಗೆ ಹೆಚ್ಚಿನ ಹೊಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 21:37 IST
Last Updated 28 ಜುಲೈ 2020, 21:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ವಾರ್ಡ್‌ ಮಟ್ಟದಲ್ಲಿ ಹಾಗೂ ಬೂತ್‌ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಸಮಿತಿಗಳನ್ನು ಬಳಸಿಕೊಂಡು ಕೋವಿಡ್‌ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ ವಹಿಸಲಾಗುತ್ತಿದೆ.

ಪಾಲಿಕೆ ಸದಸ್ಯರ ಪಿಒಡಬ್ಲ್ಯು ಕಾಮಗಾರಿಗಳಿಗೆ ಮೀಸಲಿಟ್ಟ ಅನುದಾನವನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳುವ ಬಗ್ಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರತಿ ವಾರ್ಡ್‌ಗೆ ಮೀಸಲಿಟ್ಟ ₹ 25 ಲಕ್ಷ ವಿಶೇಷ ಅನುದಾನವನ್ನು ಕೋವಿಡ್‌ ಜಾಗೃತಿ ಮೂಡಿಸುವ ಜಾಹೀರಾತಿಗೆ ಬಳಸಲು ಈ ಹಿಂದಿನ ಆಯುಕ್ತರು ತೀರ್ಮಾನಿಸಿದ್ದರು. ಆ ಅನುದಾನವನ್ನು ವಾರ್ಡ್‌ನಲ್ಲಿ ಮನೆಯಲ್ಲೇ ಆರೈಕೆಗೆ ಒಳಗಾಗುವ ಸೋಂಕಿತರಿಗೆ ವೈದ್ಯಕೀಯ ಕಿಟ್‌ ನೀಡಲು ಹಾಗೂ ಕಂಟೈನ್‌ಮೆಂಟ್‌ ವಲಯದಲ್ಲಿರುವವರಿಗೆ ಆಹಾರದ ಕಿಟ್‌ ನೀಡಲು ಬಳಸಿಕೊಳ್ಳುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಐಸಿಎಂಆರ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಆಗುವ ನಗರಕ್ಕೆ ಸಂಬಂಧಿಸಿದ ಕೋವಿಡ್‌ ಮಾಹಿತಿಯನ್ನು ಬಿಬಿಎಂಪಿ ವಾರ್‌ ರೂಮ್‌ನ ಸಿಬ್ಬಂದಿ ಡೌನ್‌ಲೋಡ್‌ ಮಾಡಿ ವಲಯಗಳಿಗೆ ಕಳುಹಿಸುತ್ತಿದ್ದರು. ಈಗ ವಿಧಾನಸಭಾ ಕ್ಷೇತ್ರವಾರು ನಿಯಂತ್ರಣ ಕೊಠಡಿಗಳನ್ನು ನಿರ್ವಹಿಸಲಾಗುತ್ತಿದೆ. ಅಲ್ಲಿಂದ ಪ್ರತಿ ವಾರ್ಡ್‌ಗೂ ಕ್ಷಣ ಕ್ಷಣದ ಮಾಹಿತಿ ಕಳುಹಿಸಲಾಗುತ್ತದೆ. ಸೋಂಕು ಪತ್ತೆಯಾದ ಮನೆಯವರಿಗೆ ವಿಷಯ ತಿಳಿಸಿ ಅವರಲ್ಲಿ ವಿಶ್ವಾಸ ತುಂಬುವ ಕೆಲಸ ತಳ ಮಟ್ಟದಲ್ಲಿ ನಡೆಯಲಿದೆ. ಅಗತ್ಯ ಬಿದ್ದರೆ ಸೋಂಕಿತರನ್ನು ಆಸ್ಪತ್ರೆಗೆ ಅಥವಾ ಆರೈಕೆ ಕೇಂದ್ರಕ್ಕೆ ಕಳುಹಿಸಲು ಪ್ರತಿ ವಾರ್ಡ್‌ಗೆ ಎರಡರಿಂದ ಮೂರು ಆಂಬುಲೆನ್ಸ್‌ ಹಾಗೂ ಪ್ರತ್ಯೇಕ ವಾಹನಗಳನ್ನು ಒದಗಿಸಲಾಗಿದೆ’ ಎಂದರು.

‘ಸೋಂಕಿನ ಲಕ್ಷಣಗಳಿಲ್ಲದವರು ಹಾಗೂ ಅಲ್ಪ ಪ್ರಮಾಣದ ಲಕ್ಷಣಗಳಿರುವವರು ಮನೆಯಲ್ಲೇ ಆರೈಕೆಗೆ ಒಳಗಾಗಬಹುದು. ದಿನಕ್ಕೆರಡು ಭಾರಿ ದೇಹದ ಉಷ್ಣಾಂಶವನ್ನು ಹಾಗೂ ಆಕ್ಸಿಮೀಟರ್‌ ಬಳಸಿ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಪರೀಕ್ಷಿಸಿದರೆ ಸಾಕು. ಆಮ್ಲಜನಕರ ಪ್ರಮಾಣ ಶೇ 95ಕ್ಕಿಂತ ಕಡಿಮೆ ಆಗದಿದ್ದರೆ ಯಾವ ಸಮಸ್ಯೆಯೂ ಆಗದು. ಅದಕ್ಕಿಂತ ಕೆಳಗಿಳಿದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ’ ಎಂದರು.

‘ನಗರದಲ್ಲಿ ನಿತ್ಯ 13 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗುತ್ತಿದೆ. ಹೆಚ್ಚು ಹೆಚ್ಚು ಪರೀಕ್ಷೆ ಮಾಡಿಸಿದಷ್ಟೂ ಸೋಂಕಿನ ಪ್ರಮಾಣವೂ ಹೆಚ್ಚುವುದು ಸಹಜ. ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದರು.

ಚೇತರಿಕೆ ಪ್ರಮಾಣ ಹೆಚ್ಚುತ್ತಿಲ್ಲ ಏಕೆ: ‘ನಗರದಲ್ಲಿ ಕೋವಿಡ್‌ ಸೋಂಕಿತರ ಚೇತರಿಕೆ ಪ್ರಮಾಣ ಕೇವಲ ಶೇ 36ರಷ್ಟಿದೆ. ನವದೆಹಲಿಯಲ್ಲಿ ಈ ಪ್ರಮಾಣವು ಶೇ 87ರಷ್ಟಿದ್ದರೆ, ತಮಿಳುನಾಡಿನಲ್ಲಿ ಶೇ 73ರಷ್ಟಿದೆ. ಬಿಬಿಎಂಪಿ ಇಷ್ಟೆಲ್ಲ ಖರ್ಚು ಮಾಡಿದರೂ ಚೇತರಿಕೆ ಪ್ರಮಾಣ ಹೆಚ್ಚುತ್ತಿಲ್ಲ ಏಕೆ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಪ್ರಶ್ನಿಸಿದರು.

‘ರೋಗ ಲಕ್ಷಣಗಳೇ ಇಲ್ಲದ ಸೋಂಕಿತರನ್ನು ಬೇಗನೇ ಮರು ಪರೀಕ್ಷೆಗೆ ಒಳಪಡಿಸಿ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಿದರೆ ಚೇತರಿಕೆ ಪ್ರಮಾಣ ಹೆಚ್ಚುತ್ತದೆ’ ಎಂದು ವೇಲು ನಾಯ್ಕರ್‌ ಸಲಹೆ ನೀಡಿದರು.

ಬಿಬಿಎಂಪಿ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವವರ ಚಿಕಿತ್ಸೆ ವೆಚ್ಚವನ್ನು ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಭರಿಸುತ್ತದೆ. ಜತೆಗೆ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳಿಂದಲೂ ಬಿಲ್‌ ಪಡೆಯುತ್ತಿವೆ ಎಂದು ವಾಜಿದ್‌ ಆರೋಪಿಸಿದರು.

ಖಾಸಗಿ ಆಸ್ಪತ್ರೆಗಳು ಈಗಲೂ ಕೋವಿಡ್‌ ರೋಗಿಗಳನ್ನು ಸೇರಿಸಿಕೊಳ್ಳುತ್ತಿಲ್ಲ. ಬೇರೆ ಕಾಯಿಲೆ ಇರುವವರಿಗೂ ಚಿಕಿತ್ಸೆ ಸಿಗುತ್ತಿಲ್ಲ. ಆಂಬುಲೆನ್ಸ್‌ ಕೊರತೆ ಇದೆ ಎಂದು ಪಾಲಿಕೆ ಸದಸ್ಯರು ದೂರಿದರು.

‘ಪಾಲಿಕೆ ಸದಸ್ಯರ ಅವಧಿ ವಿಸ್ತರಿಸಿ‘

‘ಈಗಿನ ಪಾಲಿಕೆ ಕೌನ್ಸಿಲ್‌ ಅವಧಿ ಸೆ.10ಕ್ಕೆ ಕೊನೆಗೊಳ್ಳಲಿದೆ. ಕೋವಿಡ್‌ ವ್ಯಾಪಕವಾಗಿ ಹಬ್ಬಿರುವುದರಿಂದ ಚುನಾವಣೆ ನಡೆಸುವುದು ಕಷ್ಟಸಾಧ್ಯ. ಕೋವಿಡ್ ಸಮರ್ಥ ನಿರ್ವಹಣೆಗೆ ಅನುವು ಮಾಡಿಕೊಡುವ ಸಲುವಾಗಿ ಈಗಿನ ಪಾಲಿಕೆ ಸದಸ್ಯರ ಅವಧಿಯನ್ನು ಮೂರು ತಿಂಗಳು ವಿಸ್ತರಿಸಬೇಕು’ ಎಂದು ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌ ಒತ್ತಾಯಿಸಿದರು.

ಮಾತೃ ಇಲಾಖೆಗೆ ರವೀಂದ್ರ: ನಿರ್ಣಯ

ಕಲ್ಯಾಣ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದ ಪಾಲಿಕೆ ನಿರ್ಣಯಗಳನ್ನು ಅಧಿಕಾರಿಗಳು ಜಾರಿಗೊಳಿಸುತ್ತಿಲ್ಲ. ಒಂಟಿ ಮನೆಗಳ ಬಿಲ್‌ ಸಕಾಲದಲ್ಲಿ ಪಾವತಿ ಆಗುತ್ತಿಲ್ಲ. ಹೊಲಿಗೆ ಯಂತ್ರ, ಅಂಗವಿಕಲರಿಗೆ ವಾಹನ ಒದಗಿಸುವ ಕಾರ್ಯಕ್ರಮಗಳ ಅನುಷ್ಠಾನವೂ ವಿಳಂಬವಾಗುತ್ತಿದೆ ಎಂದು ಪಾಲಿಕೆಯ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಕಲ್ಯಾಣ) ಎಸ್‌.ಜಿ. ರವೀಂದ್ರ ಅವರ ಕಾರ್ಯವೈಖರಿ ಬಗ್ಗೆಯೂ ಅನೇಕ ಸದಸ್ಯರು ದೂರಿದರು. ಈ ಹಿನ್ನೆಲೆಯಲ್ಲಿ ರವೀಂದ್ರ ಅವರನ್ನು ಮಾತೃ ಇಲಾಖೆಗೆ ವಾಪಸ್‌ ಕಳುಹಿಸುವ ಕುರಿತು ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ಟ್ಯಾಬ್‌, ಲ್ಯಾಪ್‌ಟಾಪ್‌

ಕೋವಿಡ್‌ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ. ಐದರಿಂದ 9ನೇ ತರಗತಿವರೆಗಿನ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್‌ ಹಾಗೂ 10ನೇ ತರಗತಿ, ಡಿಪ್ಲೊಮಾ, ಪಿಯುಸಿ, ಎಂಜಿನಿಯರಿಂಗ್‌ ವೈದ್ಯಕೀಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕೌನ್ಸಿಲ್‌ ಸಭೆಯ ಪ್ರಮುಖ ನಿರ್ಣಯಗಳು

* ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣಕ್ಕೆ ದಿವಂಗತ ಸಿ.ಕೆ.ಜಾಫರ್ ಷರೀಫ್‌ ಹೆಸರು ಇಡಲು ಒಪ್ಪಿಗೆ

* ಕಾವೇರಿಪುರದ ಹೆರಿಗೆ ಆಸ್ಪತ್ರೆಗೆ ದಿವಂಗತ ಉಪಮೇಯರ್ ರಮೀಳಾ ಉಮಾಶಂಕರ್‌ ಹೆಸರು ಇಡಲು ಒಪ್ಪಿಗೆ

* 15ನೇ ಹಣಕಾಸು ಆಯೋಗದ ನಿಧಿಯ ₹558 ಕೋಟಿ ಅನುದಾನವನ್ನು ಮಾರ್ಗಸೂಚಿ ಅನ್ವಯ ಮರುಹಂಚಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.