ADVERTISEMENT

ಜನಪ್ರತಿನಿಧಿಗಳ ಭಾವಚಿತ್ರ ತೆರವಿಗೆ ಆದೇಶ

ಸುತ್ತೋಲೆ ಹೊರಡಿಸಿದ ಬಿಬಿಎಂಪಿ ಆಯುಕ್ತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:20 IST
Last Updated 21 ನವೆಂಬರ್ 2020, 20:20 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರದ ಹಾಗೂ ಬಿಬಿಎಂಪಿ ಅನುದಾನದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳ ಪ್ರಚಾರದ ಸಂದರ್ಭದಲ್ಲಿ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಹಾಗೂ ಅದಕ್ಕೆ ಸಂಬಂಧ ಪಡದ ಯಾವುದೇ ವ್ಯಕ್ತಿಗಳ ಭಾವಚಿತ್ರವಿರುವ ಜಾಹೀರಾತುಗಳನ್ನು ಮುದ್ರಿಸಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.

ಇಂತಹ ಜಾಹೀರಾತುಗಳನ್ನು ಬಸ್‌ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕಗಳೂ ಸೇರಿದಂತೆ ಯಾವುದೇ ಸರ್ಕಾರಿ ಅಥವಾ ಬಿಬಿಎಂಪಿ ಸ್ಥಳಗಳಲ್ಲಿ ಪ್ರದರ್ಶಿಸಿದ್ದರೆ ಅವುಗಳನ್ನು ತೆರವುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

‘ಸರ್ಕಾರ ಅಥವಾ ಬಿಬಿಎಂಪಿ ವತಿಯಿಂದ ಜಾರಿಗೊಳಿಸುವ ಯಾವುದೇ ಯೋಜನೆಗಳು ಅಥವಾ ಕಾಮಗಾರಿಗಳ ಪ್ರಚಾರಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಸಚಿವರು, ರಾಷ್ಟ್ರದ ಪಿತಾಮಹರ ಭಾವಚಿತ್ರ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಪಕ್ಷದ ಅಥವಾ ಜನಪ್ರತಿನಿಧಿಗಳ ಭಾವಚಿತ್ರ ಬಳಸುವುದಕ್ಕೆ ಅವಕಾಶ ಇಲ್ಲ. ರಿಟ್‌ ಅರ್ಜಿಯೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.’

ADVERTISEMENT

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಹೈಕೋರ್ಟ್‌ ಕಾಲ ಕಾಲಕ್ಕೆ ಪಾಲಿಕೆಗೆ ನಿರ್ದೇಶನಗಳನ್ನು ನೀಡಿದೆ. ಅವುಗಳ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಅನಧಿಕೃತ ಜಾಹೀರಾತು ಫಲಕ, ಗೋಡೆ ಬರಹ, ಭಿತ್ತಿಪತ್ರ, ಹೋರ್ಡಿಂಗ್ಸ್‌, ಗ್ಯಾಂಟ್ರಿಸ್‌, ಮುಂತಾದ ಜಾಹೀರಾತುಗಳನ್ನೂ ನಿಷೇಧಿಸಲಾಗಿದೆ. ಇಂತಹ ಜಾಹೀರಾತುಗಳಿಂದ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಪರಿಸರ ಮಾಲಿನ್ಯ ಹೆಚ್ಚಳ ಹಾಗೂ ರಸ್ತೆ ಅಪಘಾತಗಳಿಗೂ ಇವು ಕಾರಣವಾಗುತ್ತವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ 2018’ ಅನ್ನು ರೂಪಿಸಲಾಗಿದೆ. ಅದಕ್ಕೆ ಅನುಗುಣವಾಗಿ ಬೈ–ಲಾ ರಚಿಸಲಾಗಿದ್ದು, ಇದು 2020ರ ಏ.1ರಿಂದ ಜಾರಿಗೆ ಬಂದಿದೆ.’

‘ಬಿಬಿಎಂಪಿ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶಗಳ ಬೈ–ಲಾ ಪ್ರಕಾರವೂ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅಥವಾ ಬಿಬಿಎಂಪಿ ಕಾರ್ಯಕ್ರಮಗಳ ಅಥವಾ ಯೋಜನೆಗಳ ಜಾಹೀರಾತು ಪ್ರಕಟಣೆಗಳಲ್ಲಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಪದಾಧಿಕಾರಿಗಳು ಮತ್ತಿತರರ ಭಾವಚಿತ್ರ ಬಳಸುವುದಕ್ಕೆ ಅವಕಾಶ ಇಲ್ಲ’ ಎಂದು ಆಯುಕ್ತರು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಜಾಹೀರಾತು ಪ್ರಕಟಿಸಿದರೆ 1981ರ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆಯ ನಿಯಮಗಳ ಅನುಸಾರ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಬೇಕು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಿಷೇಧ ಜಾರಿಯಲ್ಲಿದ್ದರೂ ಬಸ್‌ ನಿಲ್ದಾಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಹಾಗೂ
ಗೋಡೆ ಬರಹಗಳಲ್ಲಿ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಭಾವಚಿತ್ರ ಹಾಗೂ ಹೆಸರು ಪ್ರಕಟಿಸುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದರು.

‘ಸರ್ಕಾರದ ದುಡ್ಡಲ್ಲಿ ರಾಜಕಾರಣಿಗಳು ಈ ರೀತಿ ಪ್ರಚಾರ ಪಡೆಯುವುದು ತಪ್ಪು. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ಅಗೌರವ ತೋರಿದಂತೆ. ಹಾಗಾಗಿ ಜನಪ್ರತಿನಿಧಿಗಳು ಹಾಗೂ ಪಕ್ಷಗಳ ಮುಖಂಡರೇ ಸ್ವಯಂಪ್ರೇರಿತರವಾಗಿ ಇಂತಹ ಜಾಹೀರಾತುಗಳನ್ನಯ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬಿಬಿಎಂಪಿ ಅಧಿಕಾರಿ
ಗಳು ನಿರ್ದಾಕ್ಷಿಣ್ಯವಾಗಿ ಇವುರಗಳನ್ನು ತೆರವುಗೊಳಿಸಬೇಕು’ ಎಂದು ಸಾಯಿದತ್ತ ಒತ್ತಾಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.