ADVERTISEMENT

ಕಾಂಗ್ರೆಸ್‌ ಕಟ್ಟಾಳುಗಳಲ್ಲಿ ಕಳವಳ ಮೂಡಿಸಿದ ಮೀಸಲಾತಿ ಕರಡು

ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಕರಡು ಪಟ್ಟಿ ಪ್ರಕಟ– ಬಿಜೆಪಿಯಲ್ಲೂ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 20:15 IST
Last Updated 14 ಸೆಪ್ಟೆಂಬರ್ 2020, 20:15 IST
ಬಿಬಿಎಂಪಿ ಲೊಗೊ
ಬಿಬಿಎಂಪಿ ಲೊಗೊ   

ಬೆಂಗಳೂರು: ಬಿಬಿಎಂಪಿ ಚುನಾವಣೆ ಸಲುವಾಗಿ ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ನಗರಾಭಿವೃದ್ಧಿ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಕೂಟದ ಆಡಳಿತಾವಧಿಯ ನಾಲ್ವರು ಮೇಯರ್‌ಗಳು ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಮುಖ ಪಾಲಿಕೆ ಸದಸ್ಯರಿಗೆ ಈ ಹಿಂದೆ ಪ್ರತಿನಿಧಿಸಿದ್ದ ವಾರ್ಡ್‌ನಲ್ಲಿ ಮತ್ತೆ ಸ್ಪರ್ಧೆಗೆ ಅವಕಾಶ ಸಿಗದು.

ಈ ಬೆಳವಣಿಗೆ ಪಾಲಿಕೆಯಲ್ಲಿ ಕಾಂಗ್ರೆಸ್‌ನ ಮುಂಚೂಣಿ ನಾಯಕರ ಕಳವಳಕ್ಕೆ ಕಾರಣವಾಗಿವೆ. ಮೀಸಲಾತಿಯ ಕರಡು ಪಟ್ಟಿ ರಾಜಕೀಯಪ್ರೇರಿತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಹಿಂದಿನ ಅವಧಿಯಲ್ಲಿ ಮೇಯರ್‌ ಆಗಿದ್ದ ಜಿ.ಪದ್ಮಾವತಿ ಪ್ರತಿನಿಧಿಸಿದ್ದ ಪ್ರಕಾಶನಗರ ಹಾಗೂ ಗಂಗಾಂಬಿಕೆ ಪ್ರತಿನಿಧಿಸಿದ್ದ ಜಯನಗರ (153) ವಾರ್ಡ್‌ಗಳು ಮರುವಿಂಗಡಣೆ ಬಳಿಕ ಅಸ್ತಿತ್ವದಲ್ಲೇ ಇಲ್ಲ. ಬಿ.ಎನ್‌.ಮಂಜುನಾಥ ರೆಡ್ಡಿ ಪ್ರತಿನಿಧಿಸಿದ್ದ ಮಡಿವಾಳ ವಾರ್ಡ್‌ನಲ್ಲಿ ಹಾಗೂ ಆರ್‌.ಸಂಪತ್‌ ಕುಮಾರ್‌ ಪ್ರತಿನಿಧಿಸಿದ್ದ ದೇವರ ಜೀವನಹಳ್ಳಿ ವಾರ್ಡ್‌ಗಳೆರಡರಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ. ನಿಕಟಪೂರ್ವ ಮೇಯರ್‌ ಎಂ.ಗೌತಮ್‌ ಕುಮಾರ್‌ ಪ್ರತಿನಿಧಿಸಿದ್ದ ಜೋಗುಪಾಳ್ಯ ವಾರ್ಡ್‌ನಲ್ಲಿ ಮೀಸಲಾತಿ ಬದಲಾವಣೆ ಮಾಡಿಲ್ಲ.

ADVERTISEMENT

ಪಾಲಿಕೆ ವಿರೋಧ ಪಕ್ಷದ ನಾಯಕರಾಗಿದ್ದ ಅಬ್ದುಲ್ ವಾಜಿದ್‌ ಪ್ರತಿನಿಧಿಸುವ ಮನೋರಾಯನಪಾಳ್ಯ ವಾರ್ಡ್‌ನ ಹೆಸರು ಚಾಮುಂಡಿನಗರ ಎಂದು ಬದಲಾಗಿದ್ದು, ಈ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿದ್ದ ಆರ್.ಎಸ್‌.ಸತ್ಯನಾರಾಯಣ ಪ್ರತಿನಿಧಿಸಿದ್ದ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆ ಎಂದು ಬದಲಾಯಿಸಲಾಗಿದೆ. ಆಡಳಿತ ಪಕ್ಷದ ನಾಯಕರಾಗಿದ್ದ ಎಂ.ಶಿವರಾಜು ಪ್ರತಿನಿಧಿಸಿದ್ದ ಶಂಕರಮಠ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಎನಿಂದ ಹಿಂದುಳಿದ ವರ್ಗ ಬಿಗೆ ಬದಲಾಯಿಸಲಾಗಿದೆ.

‘ಪಾಲಿಕೆಯಲ್ಲಿ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್‌ ನಾಯಕರು ಪ್ರತಿನಿಧಿಸಿದ್ದ ವಾರ್ಡ್‌ಗಳ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ. ಇದು ಪಾಲಿಕೆಯಲ್ಲಿ ಕಾಂಗ್ರೆಸ್‌ ಧ್ವನಿ ಅಡಗಿಸುವ ಪ್ರಯತ್ನ’ ಎಂದು ಅಬ್ದುಲ್ ವಾಜಿದ್‌ ಆರೋಪಿಸಿದರು.

ಬಿಜೆಪಿಯಲ್ಲೂ ಅಸಮಾಧಾನ: ಐದು ಅವಧಿಗೆ ಪಾಲಿಕೆ ಸದಸ್ಯರಾಗಿದ್ದ ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ ಪ್ರತಿನಿಧಿಸುತ್ತಿದ್ದ ಬಸವನಗುಡಿ ವಾರ್ಡ್‌ ಅನ್ನು ಸಾಮಾನ್ಯ ಮಹಿಳೆಗೆ ಕಾಯ್ದಿರಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸತ್ಯನಾರಾಯಣ, ‘ಪಾಲಿಕೆಗೆ ಕೇವಲ 7 ಮಂದಿ ಬಿಜೆಪಿ ಸದಸ್ಯರು ಆಯ್ಕೆಯದ ಸಂದರ್ಭದಿಂದಲೂ ನಾನು ಸತತವಾಗಿ ಗೆಲ್ಲುತ್ತಿದ್ದೇನೆ. ಪಕ್ಷ ಕಟ್ಟುವುದಕ್ಕೆ ನಿಸ್ವಾರ್ಥವಾಗಿ ಸೇವೆ ಮಾಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದಾಗಲೂ ನಾನು ಬಸವನಗುಡಿ ವಾರ್ಡ್‌ನಿಂದ ಸ್ಪರ್ಧಿಸಲು ಆಗದಂತೆ ಮೀಸಲಾತಿ ನಿಗದಿಪಡಿಸಿರಲಿಲ್ಲ. ಈಗ ನಮ್ಮದೇ ಸರ್ಕಾರವಿದ್ದರೂ ಈ ರೀತಿ ಮಾಡಿರುವುದು ಬೇಸರ ತಂದಿದೆ’ ಎಂದು ಅಸಮಾಧಾನ ತೋಡಿಕೊಂಡರು.

ಕಳೆದ ಪಾಲಿಕೆ ಚುನಾವಣೆಯಲ್ಲಿ ಸಿ.ವಿ.ರಾಮನ್‌ನಗರ ಕ್ಷೇತ್ರದ ಕೋನೇನ ಅಗ್ರಹಾರ ವಾರ್ಡ್‌ನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಎಂ.ಚಂದ್ರಪ್ಪ ರೆಡ್ಡಿ ಗೆದ್ದಿದ್ದರು. ಕೊನೆಯ ಅವಧಿಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದರು. ಕೋನೇನ ಅಗ್ರಹಾರ ವಾರ್ಡ್‌ ಅನ್ನೂ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.

‘30 ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದೆ. ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ನಿರಾಕರಿಸಿದ್ದರು. ಈ ಬಾರಿ ಟಿಕೆಟ್‌ ನೀಡುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದರು. ಈಗ ವಾರ್ಡ್‌ನ ಮೀಸಲಾತಿಯನ್ನೇ ಬದಲಾಯಿಸಲಾಗಿದೆ. ಈ ಬಗ್ಗೆ ಪಕ್ಷದ ಮುಖಂಡರ ಜೊತೆ ಮಾತನಾಡುತ್ತೇನೆ’ ಎಂದು ಚಂದ್ರಪ್ಪ ರೆಡ್ಡಿ ತಿಳಿಸಿದರು.

ಬೈರಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಬಿಜೆಪಿಯ ಎನ್‌.ನಾಗರಾಜು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದರು. ಅವರ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆಗೆ ನಿಗದಿಪಡಿಸಲಾಗಿದೆ.

ಪಕ್ಷಾಂತರಿಗಳ ಬೆಂಬಲಿಗರಿಗಿಲ್ಲ ಮಣೆ

ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜು ಹಾಗೂ ಮುನಿರತ್ನ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಅವರ ಬೆಂಬಲಿಗ ಪಾಲಿಕೆ ಸದಸ್ಯರಲ್ಲಿ ಬಹುತೇಕರು ಪ್ರತಿನಿಧಿಸಿದ್ದ ವಾರ್ಡ್‌ಗಳ ಮೀಸಲಾತಿ ಬದಲಾಗಿದೆ.

ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದ್ದು, ಎಸ್‌.ಟಿ.ಸೋಮಶೇಖರ್ ಬೆಂಬಲಿಗ ಆರ್ಯ ಶ್ರೀನಿವಾಸ್‌ಗೆ ಇಲ್ಲಿ ಸ್ಪರ್ಧೆಗೆ ಅವಕಾಶ ಸಿಗದು. ದೊಡ್ಡಬಿದರಕಲ್ಲು ವಾರ್ಡ್‌ನ ಮೀಸಲಾತಿಯನ್ನು ಪರಿಶಿಷ್ಟ ಪಂಗಡದಿಂದ ಹಿಂದುಳಿದ ವರ್ಗ ಮಹಿಳೆ ಎಂದು ಬದಲಿಸಲಾಗಿದೆ. ಹಾಗಾಗಿ ಸೋಮಶೇಖರ್ ಅವರ ಜೊತೆಗಿದ್ದ ಎಸ್‌.ವಾಸುದೇವ್‌ ಸ್ಪರ್ಧೆಗೆ ಇಲ್ಲಿ ಅವಕಾಶ ಸಿಗದು.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಯಶವಂತಪುರ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಎ ನಿಂದ ಪರಿಶಿಷ್ಟ ಜಾತಿಗೆ, ಜಾಲಹಳ್ಳಿ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ ಬಿ ನಿಂದ ಪರಿಶಿಷ್ಟ ಜಾತಿಗೆ, ಲಕ್ಷ್ಮೀದೇವಿನಗರ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿಯಿಂದ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿದೆ. ಇದರಿಂದಾಗಿ, ಮುನಿರತ್ನ ಜೊತೆ ಗುರುತಿಸಿಕೊಂಡಿದ್ದ ಜಿ.ಕೆ.ವೆಂಕಟೇಶ್‌, ಜೆ.ಎನ್‌.ಶ್ರೀನಿವಾಸ್‌ ಹಾಗೂ ವೇಲು ನಾಯ್ಕರ್‌ ಅವರಿಗೆ ತಮ್ಮ ವಾರ್ಡ್‌ನಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಸಿಗುತ್ತಿಲ್ಲ.

ಕೆ.ಆರ್‌.ಪುರ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಎಗೆ ಮೀಸಲಾಗಿದ್ದ ವಿಜ್ಞಾನನಗರ ವಾರ್ಡ್‌ನ ಮೀಸಲಾತಿಯನ್ನು ಸಾಮಾನ್ಯ ಮಹಿಳೆಗೆ ಬದಲಾಯಿಸಲಾಗಿದೆ. ಇದರಿಂದ ಭೈರತಿ ಬಸವರಾಜು ಬೆಂಬಲಿಗ ಎಸ್‌.ಜಿ.ನಾಗರಾಜು ಅದೇ ವಾರ್ಡ್‌ನಲ್ಲಿ ಸ್ಪರ್ಧಿಸಲಾಗದು.

‘ಇದು ಮೀಸಲಾತಿ ಪಟ್ಟಿಯ ಕರಡು ಮಾತ್ರ. ನಮಗೆ ಅನುಕೂಲವಾಗುವಂತೆ ಮೀಸಲಾತಿಯಲ್ಲಿ ಮಾರ್ಪಾಡು ಮಾಡಲಾಗುತ್ತದೆ’ ಎಂದು ಕೆಲವು ಸದಸ್ಯರು ಆಶಾವಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.