ADVERTISEMENT

ಬಿಬಿಎಂಪಿ ಕಂದಾಯ ಪರಿವೀಕ್ಷಕ ರವಿ ಕೋವಿಡ್‌ನಿಂದ ಸಾವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 13:39 IST
Last Updated 13 ಆಗಸ್ಟ್ 2020, 13:39 IST
 ಕಂದಾಯ ಪರಿವೀಕ್ಷಕ ಆರ್‌.ರವಿ
ಕಂದಾಯ ಪರಿವೀಕ್ಷಕ ಆರ್‌.ರವಿ    

ಬೆಂಗಳೂರು: ಬಿಬಿಎಂಪಿಯ ಮಹಾಲಕ್ಷ್ಮಿ ಲೇಔಟ್‌ ವಿಧಾನ ಸಭಾ ಕ್ಷೇತ್ರದ ನಾಗಪುರ ವಾರ್ಡ್‌ನ ಕಂದಾಯ ಪರಿವೀಕ್ಷಕ ಆರ್‌.ರವಿ (47) ಅವರು ಕೋವಿಡ್‌ನಿಂದಾಗಿ ಗುರುವಾರ ಕೊನೆಯುಸಿರೆಳೆದರು.

ರವಿ ಅವರ ತಾಯಿಗೆ ಸುಮಾರು 25 ದಿನಗಳ ಹಿಂದೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಆ ಬಳಿಕ ರವಿ ಅವರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಿದ್ದರು. ನಂತರ ಕೆಲಸಕ್ಕೆ ಬಂದಿರಲಿಲ್ಲ. ತಾಯಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ರವಿ ಅವರಿಗೂ ಜ್ವರ, ನೆಗಡಿ ಕಾಣಿಸಿಕೊಂಡಿತ್ತು. ರವಿ ಹಾಗೂ ಅವರ ಪತ್ನಿ ಝಾನ್ಸಿ, ಮಗಳು ಸರಿನಾ ಹಾಗೂ ಮಗ ಜಾನ್ಸನ್‌ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಅವರೆಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಅವರ ಸಹೋದ್ಯೋಗಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರವಿ ಹಾಗೂ ಅವರ ಮನೆಯವರೆಲ್ಲ ಕಳೆದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಝಾನ್ಸಿ, ಸರಿನಾ ಹಾಗೂ ಜಾನ್ಸನ್‌ ಅವರಲ್ಲಿ ಸೋಂಕು ಕಂಡು ಬಂದಿರಲಿಲ್ಲ. ಆದರೆ ರವಿ ಅವರಿಗೆ ಸೋಂಕು ಇತ್ತು. ಮಂಗಳವಾರ ಅವರೆಲ್ಲ ಮನೆಗೆ ಮರಳಿದ್ದಾರೆ. ರವಿ ಅವರು ಇನ್ನೆರಡು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಅದಕ್ಕೊಪ್ಪದ ರವಿ, ‘ಮನೆಯಲ್ಲೇ ಆರೈಕೆಗೆ ಒಳಗಾಗುತ್ತೇನೆ’ ಎಂದು ಹೇಳಿ ಕುಂಟುಂಬದವರ ಜೊತೆ ಅವರೂ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದರು’ ಎಂದು ಸಹೋದ್ಯೋಗಿ ಹೇಳಿದರು.

ADVERTISEMENT

ಭಯಗೊಂಡಿದ್ದ ರವಿ: ‘ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ರವಿ ವಿಪರೀತ ಆತಂಕಕ್ಕೆ ಒಳಗಾಗಿದ್ದರು. ಬಂಧುಗಳ ಬಳಿ, ‘ನಾನು ಬದುಕುತ್ತೇನಲ್ಲಾ. ನನಗೇನೂ ಆಗುವುದಿಲ್ಲವಲ್ಲ’ ಎಂದು ಕಳವಳದಿಂದ ಹೇಳಿಕೊಂಡಿದ್ದರು. ಮನೆಗೆ ಮರಳಿದ ಬಳಿಕವೂ ಎರಡು ದಿನ ಸರಿಯಾಗಿ ಊಟವನ್ನೂ ಮಾಡಿರಲಿಲ್ಲ. ಅಷ್ಟರಲ್ಲಿ ಮಿದುಳಿನ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ’ ಎಂದು ಸಹೋದ್ಯೋಗಿ ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ರವಿ ಅವರ ಮೃತದೇಹವಿದ್ದ ಸಕ್ರಾ ಆಸ್ಪತ್ರೆಗೆ ಧಾವಿಸಿ ಅವರ ಅಂತಿಮ ದರ್ಶನ ಪಡೆದು ಅವರ ಬಂಧುಗಳಿಗೆ ಸಾಂತ್ವನ ಹೇಳಿದರು.

‘ರವಿ ಉತ್ತಮ ಕೆಲಸಗಾರ. ಇಷ್ಟು ಸಣ್ಣ ಪ್ರಾಯದಲ್ಲೇ ಅವರಿಗೆ ಈ ರೀತಿ ಆಗಬಾರದಿತ್ತು’ ಎಂದು ನಾಗಪುರ ವಾರ್ಡ್‌ನ ಸಹಾಯಕ ಕಂದಾಯ ಅಧಿಕಾರಿ ಸುನಂದಾ ಬೇಸರ ವ್ಯಕ್ತಪಡಿಸಿದರು.

ಇನ್ನೂ ಕೈಸೇರಿಲ್ಲ ಕೋವಿಡ್‌ ಪರಿಹಾರ: ಸರ್ಕಾರ ಕೊರೊನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸುವವರಿಗೆ ಕೋವಿಡ್‌ ವಿಮೆ ಸೌಲಭ್ಯ ಕಲ್ಪಿಸಿದೆ. ಕೋವಿಡ್‌ ವಿಮೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಬಿಬಿಎಂಪಿಯಲ್ಲಿ ಇದುವರೆಗೆ ಅಧಿಕಾರಿಗಳು ಮತ್ತು ನೌಕರರು ಸೇರಿ ಏಳು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದರೆ, ಈ ನೌಕರರ ಕುಟುಂಬಗಳಿಗೆ ಇದುವರೆಗೆ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ.

‘ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ಕೋವಿಡ್‌ ಆರೈಕೆ ಕೇಂದ್ರದಲ್ಲಿ ನೋಡಲ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೇಷನರಿ ಕೆ.ಎ.ಎಸ್‌ ಅಧಿಕಾರಿ ಗಂಗಾಧರಯ್ಯ ಅವರು ಹೃದಯಾಘಾತದಿಂದ ಮೃತಪಟ್ಟಾಗ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ತ್ವರಿತವಾಗಿ ₹ 25 ಲಕ್ಷ ಪರಿಹಾರದ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ, ಕೋವಿಡ್‌ ವಿರುದ್ಧ ಸೆಣಸಾಟದಲ್ಲೇ ಮೃತಪಟ್ಟ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕುಟುಂಬಗಳನ್ನು ಈ ವಿಚಾರದಲ್ಲಿ ಕಡೆಗಣಿಸಲಾಗಿದೆ. ಸರ್ಕಾರ ಎಲ್ಲ ನೌಕರರನ್ನೂ ಒಂದೇ ರೀತಿ ನಡೆಸಿಕೊಳ್ಳಬೇಕು’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ಸತ್ತ ಬಿಬಿಎಂಪಿ ನೌಕರರ ಕುಟುಂಬದವರಿಗೂ ಸರ್ಕಾರ ವಿಮೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಿ ಅವರಿಗೆ ಸಾಂತ್ವನ ಹೇಳಬೇಕು’ ಎಂದು ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತರಾಜ್‌ ಒತ್ತಾಯಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.