ರಸ್ತೆ ಗುಂಡಿ
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ‘ಮೈಕ್ರೊ ಪ್ಲಾನ್’ ಮಾಡಿಕೊಳ್ಳಲು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ಅಧಿಕಾರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಿದ ಅವರು, ಆಯಾ ವಲಯ ವ್ಯಾಪ್ತಿಯಲ್ಲಿ ಸಮಗ್ರವಾಗಿ ‘ಮೈಕ್ರೊ ಪ್ಲಾನ್’ ರೂಪಿಸಿಕೊಂಡು, ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಎಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ರಸ್ತೆ ಗುಂಡಿಗಳನ್ನು ಗುರುತಿಸಿ ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್, ಇಕೋ ಫಿಕ್ಸ್ ಬಳಸಿಕೊಂಡು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು ಎಂದರು.
ಸಂಚಾರ ಪೊಲೀಸ್ ವಿಭಾಗದ ವತಿಯಿಂದ 4,500 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 3,621 ರಸ್ತೆ ಗುಂಡಿಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಬರಲಿವೆ. ಗುರುತಿಸಲಾಗಿರುವ ಈ ಎಲ್ಲಾ ರಸ್ತೆಗುಂಡಿಗಳನ್ನು ಶೀಘ್ರ ಮುಚ್ಚಬೇಕು ಎಂದರು.
ಸಂಚಾರ ಪೊಲೀಸ್ ವಿಭಾಗದಿಂದ ಗುಂಡಿಗಳನ್ನು ಜಿಐಎಸ್ ಮ್ಯಾಪ್ ಮೂಲಕ ಗುರುತಿಸಲಾಗಿದ್ದು, ಆ ಗುಂಡಿಗಳನ್ನು ಮುಚ್ಚಿದ ನಂತರ ಛಾಯಾಚಿತ್ರಗಳನ್ನು ಲಗತ್ತಿಸಲಾಗುವುದು ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದರು.
ಮೆಟ್ರೊ, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ರಾಷ್ಟ್ರೀಯ ಹೆದ್ದಾರಿ ನಿಗಮ ಸೇರಿದಂತೆ ಇನ್ನಿತರೆ ಇಲಾಖೆಗಳು ರಸ್ತೆಯಲ್ಲಿ ಕಾಮಗಾರಿ ನಡೆಸಿ, ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಅಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ನೀಡಬೇಕು ಎಂದು ಮಹೇಶ್ವರ್ ರಾವ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.