ADVERTISEMENT

ವಸತಿ ಪ್ರದೇಶ: ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ –ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:43 IST
Last Updated 10 ನವೆಂಬರ್ 2022, 20:43 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ‘ನಗರದ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆ ಹೊರತುಪಡಿಸಿದಂತೆ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.

‘ವಿಲ್ಸನ್ ಗಾರ್ಡನ್ ಜನವಸತಿ ಪ್ರದೇಶದ ರಸ್ತೆ ಮತ್ತು ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ತೆರೆದಿರುವ ಹೂವಿನ ಅಂಗಡಿಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿಗಳು, ಹಾಲಿನ ಬೂತ್‌ಗಳು, ಸ್ಟೇಷನರಿ ಅಂಗಡಿ, ಬೇಕರಿಗಳು, ಎಸ್‌ಟಿಡಿ ಬೂತ್ ಮತ್ತು ಬ್ಯಾಂಕ್ ಸೇರಿ ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ’ ಎಂದು ತಿಳಿಸಿದರು.

ADVERTISEMENT

‘ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿ ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿದರು.

ಬಿಬಿಎಂಪಿ ಅಧಿಕಾರಿಗಳು ಇದೇ ವೇಳೆ, ‘ಹೈಕೋರ್ಟ್ ಆದೇಶದಂತೆ ವಿಲ್ಸನ್ ಗಾರ್ಡನ್ ವಸತಿ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗಿದೆ. ಅನಧಿಕೃತ 101 ಹೂವಿನ ಅಂಗಡಿಗಳ ಪೈಕಿ ಈಗಾಗಲೇ 60 ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಉಳಿದ 41 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವು ಮಾಡಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ವಿಲ್ಸನ್ ಗಾರ್ಡನ್ ಬಡಾವಣೆಯಲ್ಲಿರುವ 41 ಅನಧಿಕೃತ ಹೂವಿನ ಅಂಗಡಿ ಮತ್ತು ದಾಸ್ತಾನು ಘಟಕಗಳ ತೆರವು ಕಾರ್ಯಚರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.