ADVERTISEMENT

ಪರಿಷತ್‌ನ ನಾಲ್ವರು ಸದಸ್ಯರ ಸೇರ್ಪಡೆ

ಉಪಮೇಯರ್‌ ಚುನಾವಣೆಗೆ ಮತದಾರರ ಪರಿಷ್ಕೃತ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:22 IST
Last Updated 20 ನವೆಂಬರ್ 2018, 20:22 IST
   

ಬೆಂಗಳೂರು: ಪಾಲಿಕೆ 12 ಸ್ಥಾಯಿ ಸಮಿತಿಗಳ ಹಾಗೂ ಉಪಮೇಯರ್‌ ಆಯ್ಕೆ ಚುನಾವಣೆಯ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಮೂವರ ಹೆಸರನ್ನು ಕೈಬಿಟ್ಟು ನಾಲ್ಕು ಹೊಸ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

‘ಸಂಸದರಾಗಿ ಆಯ್ಕೆಯಾಗಿರುವ ವಿ.ಎಸ್‌.ಉಗ್ರಪ್ಪ, ಬೆಂಗಳೂರು ದಕ್ಷಿಣ ಸಂಸದರಾಗಿದ್ದ ದಿ.ಅನಂತ ಕುಮಾರ್‌ ಹಾಗೂಉಪಮೇಯರ್‌ ಆಗಿದ್ದ ದಿ.ರಮೀಳಾ ಉಮಾಶಂಕರ್‌ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.

ವಿಧಾನ ಪರಿಷತ್‌ಗೆ ಹೊಸತಾಗಿ ಆಯ್ಕೆಯಾಗಿರುವ ಎಂ.ಸಿ.ವೇಣುಗೋಪಾಲ್‌, ನಜೀರ್‌ ಅಹ್ಮದ್‌, ರಮೇಶ್‌ ಗೌಡ, ಹಾಗೂ ಯು.ಬಿ.ವೆಂಕಟೇಶ್‌ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವವರಲ್ಲಿ ಮೂವರು ಕಾಂಗ್ರೆಸ್‌ ಹಾಗೂ ಒಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದಾರೆ.

‘ಉಗ್ರಪ್ಪ ಅವರ ಹೆಸರು ಕೈಬಿಡುವ ಬಗ್ಗೆ ವಿಧಾನ ಪರಿಷತ್ತಿನಿಂದ ಸ್ಪಷ್ಟಿಕರಣ ಕೋರಿದ್ದೆವು. ಅವರು ರಾಜೀನಾಮೆ ನೀಡಿರುವುದಾಗಿ ಅಲ್ಲಿಂದ ಮಾಹಿತಿ ಬಂದಿದ್ದರಿಂದ ಹೆಸರನ್ನು ಕೈಬಿಟ್ಟಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

ಒಟ್ಟು ಮತದಾರರ ಸಂಖ್ಯೆ 260 ಆಗಿರಲಿದೆ. ಮೇಯರ್‌ ಆಯ್ಕೆಗೆ ಚುನಾವಣೆ ನಡೆದಾಗ ಮತದಾರರ ಒಟ್ಟು ಸಂಖ್ಯೆ 259 ಇತ್ತು. ಅದೀಗ 260ಕ್ಕೆ ಹೆಚ್ಚಳವಾಗಿದೆ. ಈಗ ಯಾವುದೇ ಪಕ್ಷವು ಗೆಲ್ಲಲು 131 ಮತಗಳನ್ನು ಪಡೆಯ ಬೇಕಾಗುತ್ತದೆ. ಕಾಂಗ್ರೆಸ್‌ ಮತದಾರರ ಸಂಖ್ಯೆ ಹಿಂದಿಗಿಂತ ಎರಡು ಹೆಚ್ಚಳವಾಗಿದೆ. ಜೆಡಿಎಸ್‌ ಈ ಹಿಂದಿನಷ್ಟೇ ಮತಗಳನ್ನು ಹೊಂದಿದೆ. ಬಿಜೆಪಿಗೆ ಒಂದು ಮತ ಕಡಿಮೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.