ADVERTISEMENT

ಹಾರ ತುರಾಯಿ ಬದಲು ಕನ್ನಡ ಪುಸ್ತಕ: ಬಿಬಿಎಂಪಿ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 13:01 IST
Last Updated 11 ಆಗಸ್ಟ್ 2021, 13:01 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಸರ್ಕಾರ ಏರ್ಪಡಿಸುವ ಸಭೆ ಸಮಾರಂಭಗಳಲ್ಲಿ ಹಾರ–ತುರಾಯಿ ನೀಡುವ ಬದಲು ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ನಾಂದಿ ಹಾಡಿದ ಬೆನ್ನಲ್ಲೇ ಬಿಬಿಎಂಪಿಯೂ ಇದೇ ಕ್ರಮವನ್ನು ಅನುಸರಿಸಿದೆ.

ಬಿಬಿಎಂಪಿ ಏರ್ಪಡಿಸುವ ಎಲ್ಲಾ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ-ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ನೀಡುವ ಶಿಷ್ಟಾಚಾರವನ್ನು ರದ್ದುಪಡಿಸಲಾಗಿದೆ. ಇಂತಹ ಉಡುಗೊರೆಗಳ ಬದಲು ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.

‘ರಾಜ್ಯ ಸರ್ಕಾರ ಮತ್ತು ಸರ್ಕಾರದ ಅಧೀನದ ಸಂಸ್ಥೆಗಳು ಏರ್ಪಡಿಸುವ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ-ತುರಾಯಿ, ಹಣ್ಣಿನ ಬುಟ್ಟಿಗಳನ್ನು ಉಡುಗೊರೆಯನ್ನಾಗಿ ನೀಡಬಾರರು. ಶಾಲು ಹೊದಿಸಬಾರದು ಹಾಗೂ ಅದರ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂಬ ನಿರ್ದೇಶನವಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.