ADVERTISEMENT

ಬಿಬಿಎಂಪಿ: ‘ಸುರಕ್ಷ 75 ಜಂಕ್ಷನ್‌’ ಯೋಜನೆ ಕೊನೆಗೂ ಸಿದ್ಧ

ಬಿಬಿಎಂಪಿ: 2023ರ ಮಾರ್ಚ್‌ನಲ್ಲಿ ಚಾಲನೆಯಾಗಿದ್ದ ಯೋಜನೆ ಟೆಂಡರ್‌ಗೆ ಸಜ್ಜು

ಆರ್. ಮಂಜುನಾಥ್
Published 9 ಜನವರಿ 2024, 20:27 IST
Last Updated 9 ಜನವರಿ 2024, 20:27 IST
ಹಡ್ಸನ್‌ ವೃತ್ತದಲ್ಲಿ ನಡೆಯುತ್ತಿರುವ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ
ಹಡ್ಸನ್‌ ವೃತ್ತದಲ್ಲಿ ನಡೆಯುತ್ತಿರುವ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿ   

ಬೆಂಗಳೂರು: ರಾಜ್ಯ ಹಾಗೂ ಬಿಬಿಎಂಪಿಯ 2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ‘ಸುರಕ್ಷ ಮಿಷನ್‌– 75’ ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆ ಆರಂಭವಾಗಲು ಸಜ್ಜಾಗಿದೆ.

ಪಾದಚಾರಿಗಳಿಗೆ ಸುರಕ್ಷಿತವಾಗಿರಿಸುವ ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಗೆ 2023ರ ಮಾರ್ಚ್‌ 27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ನಂತರ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಚಾಲನೆ ದೊರೆತಿದ್ದು, ಟೆಂಡರ್‌ ಕರೆಯುವ ಘಟ್ಟಕ್ಕೆ ಬಂತು ನಿಂತಿದೆ.

75 ಜಂಕ್ಷನ್‌ಗಳನ್ನು ಮರುವಿನ್ಯಾಸಗೊಳಿಸಿ, ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ರಸ್ತೆ ಅಪಘಾತಗಳಿಂದ ಸುರಕ್ಷಿತಗೊಳಿಸುವ ಉದ್ದೇಶವನ್ನು ‘ಸುರಕ್ಷ ಮಿಷನ್‌–75’ ಹೊಂದಿದೆ. ಬಿಬಿಎಂಪಿ ಅನುದಾನದಲ್ಲಿ ₹150 ಕೋಟಿಯನ್ನು ಈ ಯೋಜನೆಗೆ ಮೀಸಲಿಡಲಾಗಿತ್ತು. ಒಂದು ಚದರ ಮೀಟರ್‌ಗೆ ₹1,650 ವೆಚ್ಚದಲ್ಲಿ ವಲಯವಾರು ಎಂಟು ಪ್ಯಾಕೇಜ್‌ಗಳಲ್ಲಿ ₹114.27 ಕೋಟಿ ಅಂದಾಜಿನ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. 2025ರ ಮಾರ್ಚ್‌ ಅಂತ್ಯಕ್ಕೆ 75 ಜಂಕ್ಷನ್‌ಗಳ ಅಭಿವೃದ್ಧಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ADVERTISEMENT

ಬೆಂಗಳೂರು ಟ್ರಾಫಿಕ್ ಪೊಲೀಸ್, ವಿಶ್ವ ಸಂಪನ್ಮೂಲ ಸಂಸ್ಥೆ– ಭಾರತ (ಡಬ್ಲ್ಯೂಆರ್‌ಐ) ಸಹಯೋಗದೊಂದಿಗೆ, ಬ್ಲೂಮ್‌ಬರ್ಗ್‌ ಫಿಲಾಂತ್ರೊಪಿಸ್‌ ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ (ಬಿಜಿಆರ್‌ಎಸ್‌) ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಬಿಬಿಎಂಪಿಯ ಟ್ರಾಫಿಕ್‌ ಎಂಜಿನಿಯರಿಂಗ್‌ ಸೆಲ್‌ (ಟಿಇಸಿ) ವಿಭಾಗದಿಂದ ಈ ಯೋಜನೆಯನ್ನು ನಿರ್ವಹಿಸಲಾಗುತ್ತದೆ.

‘ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ನೇತೃತ್ವದ ಎಂಜಿನಿಯರ್‌ಗಳು 75 ಜಂಕ್ಷನ್‌ಗಳನ್ನು ಅಂತಿಮಗೊಳಿಸಿದ್ದಾರೆ. ಮೊದಲಿನ ಪಟ್ಟಿಯಲ್ಲಿದ್ದ 10 ಜಂಕ್ಷನ್‌ಗಳು ಈಗಾಗಲೇ ಅಭಿವೃದ್ಧಿಯಾಗಿದ್ದು, ಅವುಗಳನ್ನು ಕೈಬಿಡಲಾಗಿದೆ. 65 ಜಂಕ್ಷನ್‌ಗಳನ್ನೇ ಅಭಿವೃದ್ಧಿಪಡಿಸಲು ಯೋಜಿಸಿತ್ತಾದರೂ, ಯೋಜನೆಯ ಹೆಸರು ‘ಸುರಕ್ಷ–75’ ಆಗಿರುವುದರಿಂದ ಹೊಸದಾಗಿ 10 ಜಂಕ್ಷನ್‌ಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಯೋಜನೆಯ ಪಟ್ಟಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಮ್ಮತಿ ನೀಡಿದ ಕೂಡಲೇ ಟೆಂಡರ್‌ ಆಹ್ವಾನಿಸಲಾಗುತ್ತದೆ’ ಎಂದು  ಬಿಬಿಎಂಪಿ ಟಿಇಸಿ ವಿಭಾಗದ ಎಂಜಿನಿಯರ್‌ ತಿಳಿಸಿದರು.

25 ಜಂಕ್ಷನ್‌ ಮಾರ್ಚ್‌ ಅಂತ್ಯಕ್ಕೆ ಸಿದ್ಧ!

ದೂಳು ಕಸ ಮುರಿದುಬಿದ್ದ ಕಲ್ಲು ಬೇಲಿಯಿಂದ ಬೇಸರ ಮೂಡಿಸುತ್ತಿದ್ದ 25 ಜಂಕ್ಷನ್‌ಗಳ ಸ್ವರೂಪ ಬದಲಾಗುತ್ತಿದ್ದು ಇವುಗಳ ಕಾಮಗಾರಿ ಮಾರ್ಚ್‌ ಅಂತ್ಯಕ್ಕೆ  ಮುಗಿಯಲಿದೆ. ಜಂಕ್ಷನ್‌ಗಳ ಸೌಂದರ್ಯ ವೃದ್ಧಿಯ ಜೊತೆಗೆ ನಾಗರಿಕರು ವಿರಮಿಸಲು ಅವಕಾಶವನ್ನೂ ಕಲ್ಪಿಸಲಾಗಿದೆ. ಕುಳಿತುಕೊಳ್ಳಲು ಕಲ್ಲಿನ ಕುರ್ಚಿಗಳ ಜೊತೆಗೆ ಮರಗಳನ್ನು ಉಳಿಸಿಕೊಂಡು ಹೊಸ ಸಸಿ ಅಥವಾ ಆಲಂಕಾರಿಕ ಗಿಡಗಳನ್ನು ನೆಡಲಾಗುತ್ತಿದೆ. 23 ಜಂಕ್ಷನ್‌ಗಳಲ್ಲಿ ಕಾರಂಜಿಯನ್ನೂ ಸ್ಥಾಪಿಸಲಾಗುತ್ತಿದ್ದು ವಾಯುಮಾಲಿನ್ಯವನ್ನು ತಡೆಯುವ ಉದ್ದೇಶವಿದೆ. ಟೌನ್‌ಹಾಲ್‌ ಶೇಷಾದ್ರಿ ರಸ್ತೆಯ ಮೌರ್ಯ ವೃತ್ತ ಹಡ್ಸನ್‌ ವೃತ್ತ ಎನ್‌.ಆರ್‌.ಸ್ಕ್ವೇರ್‌ ಬ್ರಿಗೇಡ್ ರಸ್ತೆ ಮೆಯೊ ಹಾಲ್‌ ಕೆ.ಎಚ್.ವೃತ್ತ ಅಶೋಕ ಪಿಲ್ಲರ್‌ ಸೇರಿದಂತೆ 25 ಜಂಕ್ಷನ್‌ಗಳ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. 15ನೇ ಹಣಕಾಸು ಆಯೋಗದ ಅನುದಾನದ ₹23.80 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಟಿಇಸಿ ವಿಭಾಗದ ಎಂಜಿನಿಯರ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.