ADVERTISEMENT

ಬಿಬಿಎಂಪಿ: ತೆರಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನ

ಬಾಕಿ ವಸೂಲಿ: ಪ್ರತಿ ಬುಧವಾರ ಪಾಲಿಕೆ ಅಧಿಕಾರಿಗಳು ಮನೆ ಮುಂದೆ ಹಾಜರ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 20:30 IST
Last Updated 22 ನವೆಂಬರ್ 2018, 20:30 IST
   

ಬೆಂಗಳೂರು: ಬಾಕಿ ತೆರಿಗೆ ವಸೂಲಿ ಮಾಡಲು ಪಾಲಿಕೆ ಪ್ರತಿ ಬುಧವಾರ ವಿಶೇಷ ಆಂದೋಲನ ಹಮ್ಮಿಕೊಳ್ಳಲಿದೆ. ಅನೇಕ ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಉದ್ದಿಮೆಗಳ ಹಾಗೂ ಮನೆಗಳ ಮುಂದೆ ತೆರಿಗೆ ವಸೂಲಿ ಅಧಿಕಾರಿಗಳು ಹಾಜರಾಗಲಿದ್ದಾರೆ.

‘ಕೆಲವು ವರ್ಷಗಳಿಂದ ಪಾಲಿಕೆ ತೆರಿಗೆ ಸಂಗ್ರಹದ ಗುರಿ ತಲುಪುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗದ ಕಾರಣ ಅಭಿವೃದ್ಧಿ ಯೋಜನೆಗಳಿಗೆ ಹಣ ಹೊಂದಿಸಲು ಸಮಸ್ಯೆ ಆಗುತ್ತಿದೆ. ಈ ವರ್ಷ ಗುರಿ ಸಾಧನೆ ಆಗಲೇಬೇಕೆಂಬ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಂಡಿದ್ದೇವೆ’ ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

‘ಯಾರು ಎಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯಲು ವಲಯ ಮಟ್ಟದಲ್ಲಿ ಸಭೆ ನಡೆಸುತ್ತಿದ್ದೇನೆ. ಬಾಕಿ ಉಳಿಸಿಕೊಂಡವರ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆಲವರು ಒಂಬತ್ತು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅನೇಕರು ಐದಾರು ವರ್ಷಗಳಿಂದ ಕಟ್ಟಿಲ್ಲ’ ಎಂದರು.

ADVERTISEMENT

‘ಪ್ರತಿ ಬುಧವಾರವನ್ನು ತೆರಿಗೆ ವಸೂಲಿಗೆ ಮೀಸಲಿಡಬೇಕು. ಆ ದಿನ ಬಾಕಿ ಉಳಿಸಿಕೊಂಡಿರುವವರ ಬಳಿಗೇ ಹೋಗುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದಕ್ಕಾಗಿ ವಾಹನ ಸೌಕರ್ಯವನ್ನೂ ಕಲ್ಪಿಸಿದ್ದೇವೆ. ‘ತೆರಿಗೆ ವಸೂಲಾತಿ ಆಂದೋಲನ’ ಎಂದು ಎದ್ದು ಕಾಣಿಸುವಂತೆ ವಾಹನದಲ್ಲಿ ಫಲಕ ಅಳವಡಿಸಲಾಗುತ್ತದೆ. ಬಾಕಿದಾರರ ಮನೆ ಅಥವಾ ಕಚೇರಿ ಎದುರು ಇಂತಹ ವಾಹನ ನಿಲ್ಲಿಸಿ ವಸೂಲಿಗೆ ಕ್ರಮ ಕೈಗೊಂಡರೆ, ಮುಜುಗರ ತಪ್ಪಿಸಿಕೊಳ್ಳಲು ಅವರು ಬಾಕಿ ಪಾವತಿ ಮಾಡುತ್ತಾರೆ ಎಂಬ ನಿರೀಕ್ಷೆ ನಮ್ಮದು’ ಎಂದರು.

ಉತ್ತಮ ನೌಕರ ಪ್ರಶಸ್ತಿಗೆ ಶಿಫಾರಸು: ‘ಚೆನ್ನಾಗಿ ಕಾರ್ಯನಿರ್ವಹಿಸುವ ನೌಕರರಿಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ದಿನ ಉತ್ತಮ ನೌಕರ ಪ್ರಶಸ್ತಿ ನೀಡಲಾಗುತ್ತದೆ. ಅತಿ ಹೆಚ್ಚು ಕಂದಾಯ ವಸೂಲಿ ಮಾಡುವ ನೌಕರರು ಹಾಗೂ ಅಧಿಕಾರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಅವರನ್ನೂ ಮುಂದಿನ ವರ್ಷದಿಂದ ಈ ಪ್ರಶಸ್ತಿಗೆ ಪರಿಗಣಿಸುತ್ತೇವೆ’ ಎಂದು ಮೇಯರ್‌ ತಿಳಿಸಿದರು.

‘ಪ್ರತಿ ವಲಯದಲ್ಲಿ ಅತಿ ಹೆಚ್ಚು ಕರ ಸಂಗ್ರಹಿಸುವ ತೆರಿಗೆ ನಿರೀಕ್ಷಕ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ, ಉಪಆಯುಕ್ತ ಹಾಗೂ ಜಂಟಿ ಆಯುಕ್ತರನ್ನು ಆಯ್ಕೆ ಮಾಡಿ ಅವರಿಗೆ ಅಭಿನಂದನಾ ಪತ್ರ ನೀಡುತ್ತೇವೆ’ ಎಂದರು.

‘ಉತ್ತಮ ನೌಕರ ಪ್ರಶಸ್ತಿಗೆ ಶಿಫಾರಸು’

‘ಚೆನ್ನಾಗಿ ಕಾರ್ಯನಿರ್ವಹಿಸುವ ನೌಕರರಿಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ದಿನ ಉತ್ತಮ ನೌಕರ ಪ್ರಶಸ್ತಿ ನೀಡಲಾಗುತ್ತದೆ. ಅತಿ ಹೆಚ್ಚು ಕಂದಾಯ ವಸೂಲಿ ಮಾಡುವ ನೌಕರರು ಹಾಗೂ ಅಧಿಕಾರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಅವರನ್ನೂ ಮುಂದಿನ ವರ್ಷದಿಂದ ಈ ಪ್ರಶಸ್ತಿಗೆ ಪರಿಗಣಿಸುತ್ತೇವೆ’ ಎಂದು ಮೇಯರ್‌ ತಿಳಿಸಿದರು.

‘ಪ್ರತಿ ವಲಯದಲ್ಲಿ ಅತಿ ಹೆಚ್ಚು ಕರ ಸಂಗ್ರಹಿಸುವ ತೆರಿಗೆ ನಿರೀಕ್ಷಕ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ, ಉಪಆಯುಕ್ತ ಹಾಗೂ ಜಂಟಿ ಆಯುಕ್ತರನ್ನು ಆಯ್ಕೆ ಮಾಡಿ ಅವರಿಗೆ ಅಭಿನಂದನಾ ಪತ್ರ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.