ADVERTISEMENT

ಪೌರಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸಲಿದೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 21:25 IST
Last Updated 29 ಜುಲೈ 2020, 21:25 IST
ಪೌರ ಕಾರ್ಮಿಕರನ್ನು ಪರೀಕ್ಷಿಸುತ್ತಿರುವುದು
ಪೌರ ಕಾರ್ಮಿಕರನ್ನು ಪರೀಕ್ಷಿಸುತ್ತಿರುವುದು   

ಬೆಂಗಳೂರು: ಪೌರಕಾರ್ಮಿಕರಿಗೆ ಉಚಿತವಾಗಿ ಕೋವಿಡ್‌ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌, ‘ಹಲವು ಪೌರಕಾರ್ಮಿಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಲಕ್ಷಣಗಳಿರುವ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಪೌರಕಾರ್ಮಿಕರನ್ನು ಆದ್ಯತೆ ಮೇರೆಗೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಕೆಲಸದ ವೇಳೆಯೇ ಆರೋಗ್ಯ ಕೇಂದ್ರಗಳಲ್ಲಿ ಹಂತ ಹಂತವಾಗಿ ಅವರಿಗೆ ರ‍್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಸಂಬಂಧ ಪಟ್ಟ ಆರೋಗ್ಯ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ಪೌರಕಾರ್ಮಿಕರ ಆರೋಗ್ಯ ಸುರಕ್ಷತೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಬಿಬಿಎಂಪಿಗೆ ಸೂಚಿಸಿತ್ತು. ‘ಎಲ್ಲ ಪೌರಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸಬೇಕು’ ಎಂದು ಪೌರಕಾರ್ಮಿಕರ ಸಂಘವು ಒತ್ತಾಯಿಸಿತ್ತು.

ADVERTISEMENT

‘ಪೌರಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸುವುದು ಒಳ್ಳೆಯದು. ಕೋವಿಡ್‌ಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಈಗಾಗಲೇ ಐವರನ್ನು ಕಳೆದುಕೊಂಡಿದ್ದೇವೆ. ಹಾಗಾಗಿ ಕೊರೊನಾ ಸೋಂಕು ಹೊಂದಿದ ಪೌರಕಾರ್ಮಿಕರ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಯನ್ನು ನಿಗದಿಪಡಿಸಬೇಕು’ ಎಂದು ಪೌರಕಾರ್ಮಿಕರ ಮುಖಂಡ ಮುತ್ಯಾಲಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.