ADVERTISEMENT

ರೋಗ ನಿರೋಧಕ ಶಕ್ತಿ ಅಧ್ಯಯನಕ್ಕೆ ಸೆರೊ ಸಮೀಕ್ಷೆ

ಪ್ರತಿಕಾಯ ಪತ್ತೆಗಾಗಿ 2 ಸಾವಿರ ಮಂದಿಯ ರಕ್ತದ ದ್ರವ ವಿಶ್ಲೇಷಿಸಲಿದೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 21:47 IST
Last Updated 4 ಆಗಸ್ಟ್ 2021, 21:47 IST
ಸೆರೊ ಸಮೀಕ್ಷೆ ಬಗ್ಗೆ ಗೌರವ್‌ ಗುಪ್ತ ಅವರು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ.ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ವಿಜಯೇಂದ್ರ, ವಿಶೇಷ ಆಯುಕ್ತ (ಆರೋಗ್ಯ) ರಂದೀಪ್ ಹಾಗೂ ಆರೋಗ್ಯ ಅಧಿಕಾರಿಗಳು ಇದ್ದಾರೆ
ಸೆರೊ ಸಮೀಕ್ಷೆ ಬಗ್ಗೆ ಗೌರವ್‌ ಗುಪ್ತ ಅವರು ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಡಾ.ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ವಿಜಯೇಂದ್ರ, ವಿಶೇಷ ಆಯುಕ್ತ (ಆರೋಗ್ಯ) ರಂದೀಪ್ ಹಾಗೂ ಆರೋಗ್ಯ ಅಧಿಕಾರಿಗಳು ಇದ್ದಾರೆ   

ಬೆಂಗಳೂರು: ನಗರದ ನಿವಾಸಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿದೆ ಎಂಬುದನ್ನು ಪತ್ತೆಹಚ್ಚಲು ಸೆರೊ ಸಮೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.

ಲಸಿಕೆ ಪಡೆದವರಲ್ಲಿ ಹಾಗೂ ಲಸಿಕೆ ಪಡೆಯದವರಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಎಷ್ಟರಮಟ್ಟಿದೆ ಪ್ರತಿಕಾಯಗಳು ಸೃಷ್ಟಿ ಯಾಗಿವೆ ಎಂಬುದನ್ನು ಪತ್ತೆ ಹಚ್ಚಲು ನೆರವಾಗುವ ಈ ಸಮಿಕ್ಷೆಗೆ ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತ ಬುಧವಾರ ಚಾಲನೆ ನೀಡಿದರು.

ಸೆರೊ ಸಮೀಕ್ಷೆಯಡಿ ನಗರದ 2 ಸಾವಿರ ನಿವಾಸಿಗಳ ರಕ್ತದ ದ್ರವ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಸಮೀಕ್ಷೆಗೆ ಒಳಪಡಿಸಲಾಗುವವರನ್ನು 18 ವರ್ಷದೊಳಗಿನವರು, 18 ರಿಂದ 45 ವರ್ಷಗಳ ಒಳಗಿನವರು ಹಾಗೂ 45 ವರ್ಷ ಮೇಲಿನವರು ಎಂದು ಮೂರು ಗುಂಪುಗಳನ್ನಾಗಿ ವರ್ಗೀಕರಿಸಲಾಗುತ್ತದೆ. 2 ಸಾವಿರ ಮಂದಿಯಲ್ಲಿ 18 ವರ್ಷಗಳ ಒಳಗಿನ ಶೇ 30ರಷ್ಟು ಮಂದಿ, 18 ವರ್ಷಗಳಿಂದ 45 ವರ್ಷಗಳ ಒಳಗಿನವರು ಶೇ 50ರಷ್ಟು ಮಂದಿ ಹಾಗೂ 45 ವರ್ಷ ಮೇಲ್ಪಟ್ಟ ಶೇ 20ರಷ್ಟು ಮಂದಿ ಇರುತ್ತಾರೆ. ಲಸಿಕೆ ಪಡೆದ ಹಾಗೂ ಲಸಿಕೆ ಪಡೆಯದ ತಲಾ 1 ಸಾವಿರ ಮಂದಿ ಸಮೀಕ್ಷೆಗೆ ಒಳಗಾಗಲಿ ದ್ದಾರೆ. ಅವರ ರಕ್ತದ ದ್ರವ (ಸೀರಂ) ಸಂಗ್ರಹಿಸಿ ಅವರಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು ಪತ್ತೆಯಾಗಿವೆ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ.

ADVERTISEMENT

ಆಯಾ ವಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಆರೋಗ್ಯಾಧಿಕಾರಿ ಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಸಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ತಂಡಗಳನ್ನು ರಚಿಸಲಿದ್ದಾರೆ. ಈ ತಂಡ ಸೆರೊ ಸಮೀಕ್ಷೆ ಕೈಗೊಳ್ಳಲಿದೆ. ಈ ಸಲುವಾಗಿ ಪಾಲಿಕೆಯ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಪ್ರಯೋಗಾಲಯ ತಂತ್ರಜ್ಞರ ಕಾರ್ಯಪಡೆಗಳನ್ನು ರಚಿಸ ಲಾಗಿದೆ. ಈ ತಂಡ ಗಳ ಸದಸ್ಯರು ಮನೆ-ಮನೆಗೆ ತೆರಳಿ ಗುರುತಿ ಸುವ ವ್ಯಕ್ತಿಗಳಿಂದ ರಕ್ತದ ಮಾದರಿ ಮತ್ತು ಗಂಟಲಿನ ದ್ರವ ಸಂಗ್ರಹಿಸಲಾಗುತ್ತದೆ.

ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಇಂತಿಷ್ಟು ಮಂದಿಗೆ ಸಮೀಕ್ಷೆ ನಡೆಸಬೇಕೆಂದು ಗುರಿ ಗೊತ್ತುಪಡಿಸಲಾಗಿದೆ. ವಾರದೊಳಗೆ ಸೆರೊ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

-0-

‘ಸೋಂಕು ನಿಯಂತ್ರಣಕ್ಕೆ ನೆರವಾಗಲಿದೆ ಸೆರೊ ಸಮೀಕ್ಷೆ’

‘ರೋಗ ತರುವ ವೈರಾಣುವಿಗೆ ಪ್ರತಿರೋಧ ತೋರಿಸಲು ಎಷ್ಟರ ಮಟ್ಟಿಗೆ ದೇಹವು ಸಜ್ಜಾಗಿದೆ, ಪ್ರತಿಕಾಯಗಳ ತೀವ್ರತೆ ಎಷ್ಟಿದೆ ಎಂಬುದು ಈ ಸಮೀಕ್ಷೆಯಿಂದ ತಿಳಿಯುತ್ತದೆ. ಇದರಲ್ಲಿ ಎಷ್ಟು ಜನರಿಗೆ ಸೋಂಕು ಬಂದಿದೆ, ಎಷ್ಟು ಜನರಿಗೆ ಸೋಂಕು ತಗುಲಿಲ್ಲ, ಎಷ್ಟು ಜನರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎನ್ನುವ ಅಂಶಗಳನ್ನೂ ವಿಶ್ಲೇಷಿಸಲಾಗುತ್ತದೆ. ಈ ಸಮೀಕ್ಷೆಯ ವರದಿ ಆಧರಿಸಿ ಮುಂದಿನ ದಿನಗಳಲ್ಲಿ ಸೋಂಕು ಹರಡದಂತೆ ತಡೆಯುವ ಕುರಿತು ನಿಯಮಗಳನ್ನು ರೂಪಿಸಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.