ADVERTISEMENT

ಬಿಬಿಎಂಪಿ: 10 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಇಂದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 19:31 IST
Last Updated 30 ಜನವರಿ 2021, 19:31 IST
ಪಲ್ಸ್‌ ಪೋಲಿಯೊ ಲಸಿಕೆ ಅಭಿಯಾನ
ಪಲ್ಸ್‌ ಪೋಲಿಯೊ ಲಸಿಕೆ ಅಭಿಯಾನ    

ಬೆಂಗಳೂರು: ಭಾನುವಾರ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 5 ವರ್ಷದೊಳಗಿನ 10,84,392 ಮಕ್ಕಳಿಗೆ ಹನಿ ಹಾಕಲು ಉದ್ದೇಶಿಸಲಾಗಿದೆ.

ಪೋಲಿಯೊ ಹನಿ ಹಾಕುವ ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ಬಿಬಿಎಂಪಿಯು 14,922 ಲಸಿಕಾ ಕಾರ್ಯಕರ್ತರು ಹಾಗೂ 426 ಮೇಲ್ವಿಚಾರಕರನ್ನು ನಿಯೋಜಿಸಿದೆ.

ಎಲ್ಲ 198 ವಾರ್ಡ್‌ಗಳಲ್ಲೂ ಇದೇ 31ರಿಂದ ಫೆ.03ರವರೆಗ ಪಲ್ಸ್ ಪೋಲಿಯೊ ಹನಿ ಹಾಕಲಾಗುತ್ತದೆ. ಇದಕ್ಕಾಗಿ ಪಾಲಿಕೆ ಆರೋಗ್ಯ ವಿಭಾಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 140 ಯೋಜನಾ ಘಟಕಗಳನ್ನು ರೂಪಿಸಲಾಗಿದೆ.

ADVERTISEMENT

‘ವಲಸೆ ಕಾರ್ಮಿಕರು ಹೆಚ್ಚಾಗಿ ನೆಲೆಸಿರುವ3,995 ಪ್ರದೇಶಗಳನ್ನು ಬಿಬಿಎಂಪಿ ಗುರುತಿಸಿದ್ದು, ಇಲ್ಲಿ 5 ವರ್ಷದೊಳಗಿನ ಒಟ್ಟು 18,507 ಮಕ್ಕಳನ್ನು ಗುರುತಿಸಲಾಗಿದೆ. ವಿವಿಧ ಕೊಳಚೆ ಪ್ರದೇಶಗಳಲ್ಲಿ 3,60,712 ಮಕ್ಕಳನ್ನು ಗುರುತಿಸಲಾಗಿದೆ’ ಎಂದು ಬಿಬಿಎಂಪಿ ತಿಳಿಸಿದೆ.

ಪಾಲಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಕುಟುಂಬ ಕಲ್ಯಾಣ ಕೇಂದ್ರ, ಔಷಧಾಲಯಗಳು, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಪೋಲಿಯೊ ಹನಿ ಹಾಕಲಾಗುತ್ತದೆ. ಇದಲ್ಲದೇ, ಸ್ಥಿರ ಮತ್ತು ಸಂಚಾರಿ ತಂಡಗಳು ಬಸ್ ನಿಲ್ದಾಣ, ರೈಲ್ವೆ ಮತ್ತು ಮೆಟ್ರೊ ನಿಲ್ದಾಣ, ಮಾಲ್‌ಗಳಲ್ಲೂ ಪೊಲಿಯೋ ಹನಿ ಹಾಕಲಿವೆ.

ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್ ಹೋಮ್‌ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲೂ ಪೋಲಿಯೊ ಲಸಿಕೆ ಹಾಕಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.