ADVERTISEMENT

ಕೋವಿಡ್‌ ಮೂರನೇ ಅಲೆ: ಮಕ್ಕಳ ಐಸಿಯು, ಹಾಸಿಗೆ ಹೆಚ್ಚಳಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 0:19 IST
Last Updated 3 ಜೂನ್ 2021, 0:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಮಕ್ಕಳ ಪಾಲಿಗೆ ಹೆಚ್ಚು ಅಪಾಯಕಾರಿ ಆಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದು, ಮಕ್ಕಳ ಆರೋಗ್ಯ ಸೇವೆಯ ಸೌಕರ್ಯ ಹೆಚ್ಚಳಕ್ಕೆ ಬಿಬಿಎಂಪಿ ಕ್ರಮ ಕೈಗೊಂಡಿದೆ.

‘ಮಕ್ಕಳ ಆರೋಗ್ಯ ರಕ್ಷಣೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸರ್ಕಾರ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗಂಭೀರ ಸಮಸ್ಯೆ ಎದುರಿಸುವ ಮಕ್ಕಳ ಆರೈಕೆಗೆ ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಬುಧವಾರ ಇಲ್ಲಿ ತಿಳಿಸಿದರು.

ಕೆಲವೆಡೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ (ಸಿಸಿಸಿ) ದಾಖಲಾಗಲು ಕೋವಿಡ್‌ ಸೋಂಕಿನ ಸೌಮ್ಯ ಲಕ್ಷಣಗಳಿರುವವರು ಮುಂದೆ ಬರುತ್ತಿಲ್ಲ. ಕೋರಮಂಗಲದ ಕೋವಿಡ್‌ ಆರೈಕೆ ಕೇಂದ್ರವೂ ಸೇರಿದಂತೆ ವಿವಿಧ ಸಿಸಿಸಿಗಳಲ್ಲಿ ಹಾಸಿಗೆಗಳು ಖಾಲಿ ಬಿದ್ದಿವೆ. ಈ ಕುರಿತು ಪ್ರತಿಕ್ರಿಯಿಸಿದ ಗೌರವ್‌ ಗುಪ್ತ, ‘ಕೆಲವು ಕಡೆ ಸೊಂಕಿತರು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಾಗಲು ಅಷ್ಟಾಗಿ ಆಸಕ್ತಿ ವಹಿಸುತ್ತಿಲ್ಲ ನಿಜ. ಆದರೂ ಈ ಮೂಲಸೌಕರ್ಯವನ್ನು ಸದ್ಯಕ್ಕೆ ಉಳಿಸಿಕೊಳ್ಳುತ್ತೇವೆ’ ಎಂದರು.

ADVERTISEMENT

ಕೋವಿಡ್‌ ಪರೀಕ್ಷಾ ವರದಿ ಕೈಸೇರುವುದು ಈಗಲೂ ವಿಳಂಬವಾಗುತ್ತಿದೆ. ಕೆಲವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡ ನಾಲ್ಕೈದು ದಿನಗಳ ಬಳಿಕವೂ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡ ಮರುದಿನವೇ ಫಲಿತಾಂಶದ ವರದಿಯೂ ಕೈಸೇರುತ್ತದೆ. ನಾಲ್ಕೈದು ದಿನಗಳ ಬಳಿಕವೂ ವರದಿ ಕೈಸೇರದ ದೂರುಗಳಿದ್ದರೆ ನನ್ನ ಗಮನಕ್ಕೆ ತರಬಹುದು. ಪರೀಕ್ಷಾ ಫಲಿತಾಂಶದ ವರದಿ ತ್ವರಿತವಾಗಿ ತಲುಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಕೋವಿಡ್‌ ಮೂರನೇ ಅಲೆಯ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್‌ನಿಂದ ಸಾವು ನೋವುಗಳಾಗುತ್ತಿವೆ. ಇವುಗಳನ್ನು ನೋಡಿಯಾದರೂ ಸಾರ್ವಜನಿಕರು ಮನೆಯಲ್ಲೇ ಉಳಿದು ಕೊರೊನಾದಿಂದ ರಕ್ಷಿಸಿಕೊಳ್ಳಬೇಕು. ಕೈಮುಗಿದು ಮನವಿ ಮಾಡುತ್ತೇನೆ’ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.