ADVERTISEMENT

ಬಿಬಿಎಂಪಿ: ಸ್ವಾಧೀನವಾಗದ ಕಟ್ಟಡಗಳಿಗೂ ಟಿಡಿಆರ್‌ಸಿ!

ಹೊರಮಾವು, ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಕರ್ಮಕಾಂಡ

ಹೊನಕೆರೆ ನಂಜುಂಡೇಗೌಡ
Published 20 ಮಾರ್ಚ್ 2020, 5:30 IST
Last Updated 20 ಮಾರ್ಚ್ 2020, 5:30 IST
   

ಬೆಂಗಳೂರು: ಇಲ್ಲಿನ ಹೊರಮಾವು ಮತ್ತು ಟಿ.ಸಿ. ಪಾಳ್ಯ ರಸ್ತೆ ವಿಸ್ತರಣೆಗಾಗಿ ಸ್ವಾಧೀನವಾಗದ ಕಟ್ಟಡಗಳಿಗೂ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಟಿಡಿಆರ್‌ಸಿ) ವಿತರಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದು ಎಸಿಬಿ ತನಿಖೆಯಿಂದ ಬಯಲಾಗಿದೆ.

ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಕೌದೇನಹಳ್ಳಿ ಸರ್ವೆ ನಂಬರ್‌ 132ರ ಜಮೀನಿನ ನಿಜವಾದ ಮಾಲೀಕರನ್ನು ಮರೆಮಾಚಿ ಮೂಲ ಮಾಲೀಕರಿಗೆ ಟಿಡಿಆರ್‌ಸಿ ವಿತರಿಸಿರುವ ಬೆನ್ನಲ್ಲೇ, ಈ ಯೋಜನೆಗೆ ಒಳಪಡದ ಕಟ್ಟಡಗಳಿಗೂ ಟಿಡಿಆರ್‌ಸಿ ವಿತರಿಸಿರುವ ಸಂಗತಿಯನ್ನು ಬಿಬಿಎಂಪಿ ಕಮಿಷನರ್‌ ಗಮನಕ್ಕೆ ಎಸಿಬಿ ಅಧಿಕಾರಿಗಳು ತಂದಿದ್ದಾರೆ.

‘ಕೆ.ವಿ.ಜಿ ಟವರ್‌’ ಹೆಸರಿನ ಕಟ್ಟಡವನ್ನು ‘ಕೆ.ಜಿ ಟವರ್’ ಎಂದು ದಾಖಲಿಸಿಕೊಂಡು ಅಸ್ತಿತ್ವದಲ್ಲಿ ಇಲ್ಲದ ನೆಲ ಮತ್ತು ಮೂರು
ಅಂತಸ್ತಿನ ಕಟ್ಟಡಕ್ಕೆ ₹ 74.57 ಲಕ್ಷ ಬೆಲೆ ನಿಗದಿಪಡಿಸಿ ಟಿಡಿಆರ್‌ಸಿ ಕೊಡುವಂತೆ ಪಾಲಿಕೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ.

ADVERTISEMENT

ಇದೇ ರೀತಿ ಅಸ್ತಿತ್ವದಲ್ಲೇ ಇಲ್ಲದ ‘ಪ್ರಿನ್ಸ್‌ ಸೆಲೆಕ್ಷನ್‌‘ ಹಾಗೂ ‘ಎಸ್‌ಎಎಲ್‌ ಕಮರ್ಷಿಯಲ್‌ ಕಾಂಪ್ಲೆಕ್ಸ್‌’ ಕಟ್ಟಡಗಳನ್ನು ರಸ್ತೆ ವಿಸ್ತರಣೆಗೆ ವಶಪಡಿಸಿಕೊಳ್ಳುವುದಾಗಿ ನಕಲಿ ದಾಖಲೆ ತಯಾರಿಸಿ, ತಲಾ ₹ 50 ಲಕ್ಷ ಮೌಲ್ಯ ನಿಗದಿಪಡಿಸಿ ಟಿಡಿಆರ್‌ಸಿಗೆ ಶಿಫಾರಸು ಮಾಡಿದ್ದಾರೆ.

ನೆಲ ಅಂತಸ್ತು ಮತ್ತು ಒಂದು ಮಹಡಿ ಇರುವ ‘ಯು.ಎಸ್‌. ಫೀಜ್ಜಾ’ ಹಾಗೂ ’ಗುಡ್‌ ಹೆಲ್ತ್ ಕೇರ್‌ ಸೆಂಟರ್‌’ ಕಟ್ಟಡಗಳು ನೆಲ ಅಂತಸ್ತು ಮತ್ತು ಮೂರು ಮಹಡಿ ಇರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ಕ್ರಮವಾಗಿ ₹ 66 ಲಕ್ಷ ಮತ್ತು ₹ 71 ಲಕ್ಷ ಮೌಲ್ಯ ನಿಗದಿಪಡಿಸಿ, ಟಿಡಿಆರ್‌ಸಿ ಕೊಡುವಂತೆ ಹೇಳಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ಬಿಬಿಎಂಪಿ ಸಹಾಯಕ ಎಂಜಿನಿಯರ್‌ ಕೃಷ್ಣಲಾಲ್‌ ಮತ್ತು ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಇತರ ಅಧಿಕಾರಿಗಳು ಟಿಡಿಆರ್‌ಸಿ ಬ್ರೋಕರ್‌ಗಳ ಜತೆಗೂಡಿ ಒಳಸಂಚು ರೂಪಿಸಿದ್ದಾರೆ. ಆ ಮೂಲಕ ಸರ್ಕಾರದ ನಿಯಮಗಳ ಹಾಗೂ ಬಿಬಿಎಂಪಿ ಸುತ್ತೋಲೆಗಳನ್ನು ಉಲ್ಲಂಘಿಸಿರುವುದಾಗಿ ಎಸಿಬಿ ತನಿಖೆ ದೃಢಪಡಿಸಿದೆ.

ರಸ್ತೆ ಹಾದುಹೋಗುವ ಮಾರ್ಗ ಹಾಗೂ ಅಳತೆಗಳಿಗೆ ವ್ಯತಿರಿಕ್ತವಾಗಿ ಅಗತ್ಯಕ್ಕಿಂತಲೂ ಹೆಚ್ಚು ವಿಸ್ತೀರ್ಣ ನಿಗದಿಪಡಿಸುವ ಮೂಲಕ ಸರ್ಕಾರ ಮತ್ತು ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೌದೇನಹಳ್ಳಿ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ಕೃಷ್ಣಲಾಲ್‌ ಮತ್ತು ಕೆಲವು ಟಿಡಿಆರ್‌ಸಿ ಬ್ರೋಕರ್‌ಗಳೂ ಸೇರಿ ಅನೇಕರನ್ನು ಬಂಧಿಸಿದ್ದರು. ಅವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ.

ಮೂವರ ವಿಚಾರಣೆಗೆ ಮಾತ್ರ ಅನುಮತಿ!
ಟಿಡಿಆರ್‌ಸಿ ವಂಚನೆ ಪ್ರಕರಣದಲ್ಲಿ ಬಿಬಿಎಂಪಿಯ ಹಲವು ಅಧಿಕಾರಿಗಳು ಭಾಗಿಯಾಗಿದ್ದರೂ ಮೂವರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದೆ. ಉಳಿದವರ ವಿಚಾರಣೆಗೆ ಅನುಮತಿ ಕೇಳಿ ಎಸಿಬಿ ಬರೆದಿರುವ ಪತ್ರ ದೂಳು ಹಿಡಿಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಗರದಲ್ಲಿ ಟಿಡಿಆರ್‌ ಮಾಪಿಯಾ ಪ್ರಬಲವಾಗಿದ್ದು, ಎಸಿಬಿ ಮುಂದಿರುವ ಪ್ರಕರಣಗಳ ತನಿಖೆಯನ್ನು ಸ್ಥಗಿತಗೊಳಿಸಲು ಸೂಚಿಸುವಂತೆ ತೆರೆಮರೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಮೇಲೂ ಒತ್ತಡ ಹಾಕಲಾಗಿತ್ತು. ಅದಕ್ಕೆ ಅವರು ಸೊಪ್ಪು ಹಾಕಿರಲಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.