ADVERTISEMENT

ಮರಗಳ ರಕ್ಷಣೆಯಲ್ಲಿ BBMP ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ: ಆರೋಪ

ಮರಗಳ ರಕ್ಷಣೆ: ಡಿಪಿಆರ್‌ನಲ್ಲೇ ಮರ ಕಡಿಯುವ ಮಾಹಿತಿ ಇರಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 20:42 IST
Last Updated 5 ಅಕ್ಟೋಬರ್ 2022, 20:42 IST
ಬೃಹತ್‌ ಮರ ಕಡಿದಿರುವುದು (ಸಾಂದರ್ಭಿಕ ಚಿತ್ರ)
ಬೃಹತ್‌ ಮರ ಕಡಿದಿರುವುದು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ಮರಗಳಿಗೆ ಕೊಡಲಿ ಹಾಕುವ ಮುನ್ನ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗಕ್ಕೆ ಕಾಳಜಿ ಇಲ್ಲ. ಎಲ್ಲದಕ್ಕೂ ಒಂದೇ ರೀತಿಯ ಸಾರ್ವಜನಿಕ ನೋಟಿಸ್‌ ಜಾರಿ ಮಾಡಿ, ಮರಗಳನ್ನು ಕತ್ತರಿಸಲಾಗುತ್ತಿದೆ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಆರೋಪಿಸಿದೆ.

ಈ ಬಗ್ಗೆ ವಿವರವಾದ ಪತ್ರವನ್ನು ಬಿಬಿಎಂಪಿ ಅರಣ್ಯ ವಿಭಾಗದ ಡಿಎಫ್‌ಒ ಸರೀನಾ ಸಿಕ್ಕಲಿಗರ ಅವರಿಗೆ ಬರೆದು, ಇನ್ನು ಮುಂದಾದರೂ ಯೋಜನೆಗಳನ್ನು ರೂಪಿಸುವಾಗಲೇ ಮರಗಳ ರಕ್ಷಣೆ ಹಾಗೂ ಅವುಗಳನ್ನು ಕಡಿಯುವ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.

‘ನಗರದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೆ ಅದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಾಗುತ್ತದೆ. ಆದರೆ ನಿರ್ದಿಷ್ಟ ಯೋಜನೆಗೆ ಎಲ್ಲಿ ಎಷ್ಟು ಮರಗಳನ್ನು ಕಡಿಯಲಾಗುತ್ತದೆ ಎಂಬ ಮಾಹಿತಿಯೇ ಇರುವುದಿಲ್ಲ. ಬದಲಿಗೆ ಯೋಜನೆ ಅನುಷ್ಠಾನವಾದ ನಂತರ ಮರಗಳನ್ನು ಕಡಿಯಲಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ಇಲಾಖೆ ಸಾಮಾನ್ಯ ನೋಟಿಸ್‌ ನೀಡುತ್ತದೆ. ಇದರಿಂದ ಮರಗಳನ್ನು ಎಲ್ಲೆಂದರಲ್ಲಿ ಕಡಿಯಲಾಗುತ್ತಿದೆ. ಮರಗಳನ್ನು ಉಳಿಸುವ ಪ್ರಯತ್ನವೇ ಆಗುತ್ತಿಲ್ಲ’ ಎಂದು ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ಜಾಕೊಬ್‌ ದೂರಿದರು.

ADVERTISEMENT

‘ಹಲವು ಯೋಜನೆಗಳು ಅನುಷ್ಠಾನಗೊಂಡ ಸಾಕಷ್ಟು ದಿನಗಳ ನಂತರ ಮರಗಳನ್ನು ಕಡಿಯುವ ಪ್ರಕ್ರಿಯೆ ನಡೆಸಲಾಗುತ್ತದೆ. ಇದರಬಗ್ಗೆ ಡಿಪಿಆರ್‌ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಕೆಲವು ಬಾರಿ ಮರ ಕಡಿಯುವ ಸಂದರ್ಭದಲ್ಲಿ ನೀಡುವ ಕಾರಣಗಳು ಸಾಕಷ್ಟು ಗೊಂದಲ ಹಾಗೂ ಅನುಮಾನಗಳಿಗೆ ಕಾರಣ
ವಾಗುತ್ತವೆ. ಉದಾಹರಣೆಗೆ, ರಾಧಾಕೃಷ್ಣ ದೇವಸ್ಥಾನದ ಬಳಿ ರಾಜಕಾಲುವೆ ಸಮೀಪವಿರುವ ಮರಗಳನ್ನು ಕಡಿಯಲು ಸೆ.16ರಂದು ಸಾರ್ವಜನಿಕ ನೋಟಿಸ್‌ ಜಾರಿ ಮಾಡಲಾಗಿದೆ. ಸ್ಥಳ ಪರಿಶೀಲನೆ ಮಾಡಿದಾಗ, ನೋಟಿಸ್‌ನಲ್ಲಿ ಪ್ರಕಟಿಸಿರುವ ಸ್ಥಳಕ್ಕೂ ವಾಸ್ತವ ಸ್ಥಳಕ್ಕೂ ಒಂದು ಕಿ.ಮೀ ದೂರವಿದೆ. ಅಂದರೆ, ಅರಣ್ಯಾಧಿಕಾರಿಗಳು ವಾಸ್ತವದ ಅರಿವಿಲ್ಲದೆ ನೋಟಿಸ್‌ ಜಾರಿ ಮಾಡಿ, ಕ್ರಮ ತೆಗೆದುಕೊಳ್ಳುತ್ತಿರುವುದು
ಸ್ಪಷ್ಟವಾಗುತ್ತದೆ’ ಎಂದಿದ್ದಾರೆ.

‘ಅರಣ್ಯ ವಿಭಾಗದ ಅಧಿಕಾರಿಗಳು ಸಾರ್ವಜನಿಕ ನೋಟಿಸ್‌ ಜಾರಿ ಮಾಡುವ ಮುನ್ನ ಅಗತ್ಯವಾದ ಅಧ್ಯಯನ
ನಡೆಸಿ, ಯೋಜನೆಯ ಪರಿಶೀಲನೆ ನಡೆಸಿ ಮರಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೆ ಸಾಕಷ್ಟು ಕಾಲಾವಕಾಶ ನೀಡಿ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸಬೇಕು. ಯಾವ ಪ್ರದೇಶದಲ್ಲಿ ಮರಗಳನ್ನು ಕಡಿಯುವ ಪ್ರಸ್ತಾವ ಇದೆಯೋ ಅಲ್ಲಿ ಮೊದಲು ಸಾರ್ವಜನಿಕರ ಸಭೆ ನಡೆಸಬೇಕು. ಸ್ಥಳೀಯರ ಪ್ರತಿಕ್ರಿಯೆಪಡೆದ ನಂತರ ಮರಗಳನ್ನು ಕಡಿಯುವ ಬಗ್ಗೆ ನೋಟಿಸ್‌ ಜಾರಿ ಮಾಡಬೇಕು’ ಎಂದು
ಆಗ್ರಹಿಸಿದ್ದಾರೆ.

ಈ ಬಗ್ಗೆ ಅರಣ್ಯ ವಿಭಾಗದ ಡಿಎಫ್‌ಒ ಸರೀನಾ ಅವರನ್ನು ಸಂಪರ್ಕಿಸಿದಾಗಪ್ರತಿಕ್ರಿಯಿಸಲಿಲ್ಲ.

ಟ್ರೀ ಕಮಿಟಿ ಏನು ಮಾಡುತ್ತಿದೆ?

‘ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ‘ಟ್ರೀ ಕಮಿಟಿ’ ಇದೆ. ನಗರದಲ್ಲಿ ಮರಗಳ ರಕ್ಷಣೆಗೆ ಈ ಸಮಿತಿ ಕಾರ್ಯನಿರ್ವಹಿಸಬೇಕು. ಆದರೆ ಮರಗಳ ರಕ್ಷಣೆ ಹಾಗೂ ಕತ್ತರಿಸಿದ ಮರಗಳ ಬದಲಿಗೆ ನೆಡಲಾಗುತ್ತಿರುವ ಸಸಿಗಳ ಮಾಹಿತಿ ಈ ಸಮಿತಿಗೆ ಇಲ್ಲ’ ಎಂದು ವಿನೋದ್‌ ಜಾಕೊಬ್‌ ದೂರಿದರು.

‘ನಾವು ಅಭಿವೃದ್ಧಿಗೆ ವಿರೋಧವಾಗಿಲ್ಲ. ಆದರೆ ಯೋಜನೆಗಳಿಗೆ ಕಡಿಯಲಾಗುವ ಮರಗಳ ಬದಲಿಗೆ ಸಸಿಗಳನ್ನು ನೆಡಬೇಕು. ಇಲ್ಲಿ ಮರ ಕಡಿದು ಕಾಡಿನಲ್ಲಿ ಸಸಿ ನೆಟ್ಟರೆ ಉಪಯೋಗವಾಗಲಾರದು. ಮರ ಕಡಿದ ಪ್ರದೇಶದ ಸುತ್ತಮುತ್ತ, ಅದು ಸಾಧ್ಯವಾಗದಿದ್ದರೆ ಆಯಾ ವಾರ್ಡ್‌ಗಳಲ್ಲಾದರೂ ಸಸಿಗಳನ್ನು ನೆಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.