ADVERTISEMENT

ಸ್ಮಾರ್ಟ್‌ ಆಗಲಿವೆ 36 ರಸ್ತೆಗಳು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸಿ.ಎಂ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:03 IST
Last Updated 9 ನವೆಂಬರ್ 2019, 19:03 IST
ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. (ಎಡದಿಂದ) ಉಪ ಮೇಯರ್‌ ಸಿ.ಆರ್‌. ರಾಮ‌ಮೋಹನ ರಾಜು, ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ಪಿ.ಸಿ ಮೋಹನ್, ಕಂದಾಯ ಸಚಿವ ಆರ್. ಅಶೋಕ, ಮೇಯರ್ ಎಂ. ಗೌತಮ್ ಕುಮಾರ್, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ವಸತಿ ಸಚಿವ ವಿ. ಸೋಮಣ್ಣ ಇದ್ದರು - ಪ್ರಜಾವಾಣಿ ಚಿತ್ರ
ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. (ಎಡದಿಂದ) ಉಪ ಮೇಯರ್‌ ಸಿ.ಆರ್‌. ರಾಮ‌ಮೋಹನ ರಾಜು, ಶಾಸಕ ಎಸ್.ಆರ್. ವಿಶ್ವನಾಥ್, ಸಂಸದ ಪಿ.ಸಿ ಮೋಹನ್, ಕಂದಾಯ ಸಚಿವ ಆರ್. ಅಶೋಕ, ಮೇಯರ್ ಎಂ. ಗೌತಮ್ ಕುಮಾರ್, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ವಸತಿ ಸಚಿವ ವಿ. ಸೋಮಣ್ಣ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು:ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು. ಪ್ರಮುಖವಾಗಿ ಡಾ. ಮುತ್ತುರಾಜ್‌ ಕೆಳಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಜತೆಗೆ, ಸ್ಮಾರ್ಟ್‌ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಕೇಂದ್ರ ಭಾಗವನ್ನು ಅಭಿವೃದ್ಧಿಗೊಳಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ನಗರದ 36 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಸ್ಮಾರ್ಟ್‌ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು’ ಎಂದುಯಡಿಯೂರಪ್ಪ ಹೇಳಿದರು.

‘ಮೊದಲ ಹಂತದಲ್ಲಿ 20 ರಸ್ತೆಗಳು ಮತ್ತು ಎರಡನೇ ಹಂತದಲ್ಲಿ 16 ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಒಟ್ಟು ₹434 ಕೋಟಿ ವೆಚ್ಚದಲ್ಲಿ 29.67 ಕಿ.ಮೀ. ಉದ್ದದರಸ್ತೆಗಳನ್ನು ಸ್ಮಾರ್ಟ್‌ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ: ‘ನಾಲ್ಕು ಪಥಗಳ ಡಾ. ಮುತ್ತುರಾಜ್‌ ಕೆಳಸೇತುವೆ ದ್ವಿಮುಖ ಸಂಚಾರ ಒಳಗೊಂಡಿದೆ. ಈ ಭಾಗದ ಸಂಚಾರ ದಟ್ಟಣೆ ಸಮಸ್ಯೆ ಇದರಿಂದ ನೀಗಲಿದೆ’ ಎಂದು ಹೇಳಿದರು.

ಬೆಂಗಳೂರು ಮೈಸೂರು ರಸ್ತೆಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಹೊರವರ್ತುಲ ರಸ್ತೆಯಲ್ಲಿನ ಡಾ. ಮುತ್ತುರಾಜ್‌ ವೃತ್ತದಲ್ಲಿ ಈ ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ಮೈಸೂರು ರಸ್ತೆ ಕಡೆಯಿಂದ ಬನಶಂಕರಿ, ಕನಕಪುರ ರಸ್ತೆ, ಜೆ.ಪಿ. ನಗರ, ಜಯನಗರದ ಬನ್ನೇರುಘಟ್ಟ ರಸ್ತೆ, ಬಿ.ಟಿ.ಎಂ. ಲೇಔಟ್‌ ಹಾಗೂ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವೆ ಸಂಚರಿಸುವವರು ಈ ಕೆಳಸೇತುವೆಯನ್ನು ಬಳಸಬಹುದು.

ಸಿಗ್ನಲ್‌ ಮುಕ್ತ ಜಂಕ್ಷನ್‌:ವಾಟಾಳ್‌ ನಾಗರಾಜ್‌ ರಸ್ತೆ ಮತ್ತು ಮಾಗಡಿ ಡಿವೈಷನ್‌ ರಸ್ತೆಯಲ್ಲಿಮೇಲ್ಸೇತುವೆ ಮತ್ತು ಕೆಳಸೇತುವೆ ಒಳಗೊಂಡ ಗ್ರೇಟ್‌ ಸಪರೇಟರ್‌ ಕಾಮಗಾರಿಗೂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು. ₹30 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಡಾಂಬರು ಮಿಶ್ರಣ ಘಟಕ: ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಮತ್ತು ರಸ್ತೆ ದುರಸ್ತಿಯ ಉದ್ದೇಶದಿಂದ ಡಾಂಬರು ಮಿಶ್ರಣ ಘಟಕವನ್ನು ಸ್ಥಾಪಿಸಲಾಗಿದೆ. ಇದರ ಕಾರ್ಯಾರಂಭಕ್ಕೂ ಚಾಲನೆ ನೀಡಲಾಯಿತು.

ಬಿದರಹಳ್ಳಿ ಹೋಬಳಿ ಪ್ರದೇಶದಲ್ಲಿ ₹7.35 ಕೋಟಿ ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.

‘ಸ್ಮಾರ್ಟ್‌’ ರಸ್ತೆಯ ಪ್ರಮುಖ ಅಂಶಗಳು
* ಪಾದಚಾರಿ ಮಾರ್ಗದಲ್ಲಿ ಪ್ರತ್ಯೇಕ ಕೊಳವೆ
* ಏಕರೀತಿಯ ರಸ್ತೆ ಮಾರ್ಗದಿಂದ ತಡೆರಹಿತ ಸಂಚಾರ
* ಸುಧಾರಿತ ಸಂಚಾರ ನಿರ್ವಹಣಾ ಸಾಮರ್ಥ್ಯ
* ಹೊಸ ಪಾದಚಾರಿ ಸ್ನೇಹಿ ಮಾರ್ಗ
* ಬೊಲ್ಲಾರ್ಡ್ಸ್‌ಗಳ ಅಳವಡಿಕೆ
* ಲ್ಯಾಂಡ್‌ಸ್ಕೇಪಿಂಗ್‌ ಮತ್ತು ಬೀದಿ ದೀಪ
* ವಾಹನ ನಿಲುಗಡೆಗೆ ಸ್ಥಳ ನಿಗದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.