ADVERTISEMENT

ವಾರ್ಡ್‌ ಮರುವಿಂಗಡಣೆ:ಇಕ್ಕಟ್ಟಿನಲ್ಲಿ ಬಿಬಿಎಂಪಿ

ಬಿಬಿಎಂಪಿ ಸದಸ್ಯರ ಸಂಖ್ಯೆ 243ಕ್ಕೆ ಹೆಚ್ಚಳ * ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 20:52 IST
Last Updated 14 ಅಕ್ಟೋಬರ್ 2020, 20:52 IST

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್‌ನ ಒಟ್ಟು ಸದಸ್ಯರ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಸಿ ನಗರಾಭಿವೃದ್ಧಿ ಇಲಾಖೆ ರಾಜ್ಯಪತ್ರದಲ್ಲಿ ಬುಧವಾರ ಅಧಿಸೂಚನೆಯನ್ನು ಪ್ರಕಟಿಸಿದೆ. ವಾರ್ಡ್‌ಗಳ ಮರುವಿಂಗಡಣೆಗಾಗಿ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿದೆ. ವರದಿ ಸಲ್ಲಿಸಲು ಸಮಿತಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.

ವಾರ್ಡ್‌ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ 10 ದಿನಗಳ ಹಿಂದೆಯೇ ಕೈಗೊಂಡಿತ್ತು. ಆದರೆ, ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯಪತ್ರದಲ್ಲಿ ಈ ಬಗ್ಗೆ ಆದೇಶ ಪ್ರಕಟಿಸಿರಲಿಲ್ಲ. ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಒಪ್ಪಿಗೆ ಪಡೆದ ಬಳಿಕವೇ ಈ ನಿರ್ಧಾರವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ವಾರ್ಡ್‌ಗಳ ಮರುವಿಂಗಡಣೆಗಾಗಿ ರಚಿಸಿರುವ ಸಮಿತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು, ಬಿಬಿಎಂಪಿಯ ವಿಶೇಷ ಆಯುಕ್ತರು (ಕಂದಾಯ) ಸದಸ್ಯರಾಗಿದ್ದಾರೆ.

ADVERTISEMENT

ಇಕ್ಕಟ್ಟಿನಲ್ಲಿ ಬಿಬಿಎಂಪಿ:

ಬಿಬಿಎಂಪಿಯು 2011ರ ಜನಗಣತಿ ಆಧಾರದಲ್ಲಿ ಇತ್ತೀಚೆಗಷ್ಟೇ ವಾರ್ಡ್‌ ಮರುವಿಂಗಡಣೆ ನಡೆಸಿತ್ತು. ಈ ಕುರಿತು ರಾಜ್ಯಪತ್ರದಲ್ಲಿ 2020ರ ಜೂನ್‌ 23ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಮರುವಿಂಗಡಣೆಗೊಂಡ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪರಿಷ್ಕರಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆ ಸರ್ಕಾರ ಮತ್ತೊಮ್ಮೆ ವಾರ್ಡ್ ಮರುವಿಂಗಡಣೆ ಮಾಡಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸ್ಥಗಿತಗೊಳಿಸಬೇಕೋ, ಮುಂದುವರಿಸಬೇಕೋ ಎಂಬ ಗೊಂದಲ ಬಿಬಿಎಂಪಿ ಅಧಿಕಾರಿಗಳನ್ನು ಕಾಡುತ್ತಿದೆ.

ಬಿಬಿಎಂಪಿ ಚುನಾವಣೆ ಮುಂದೂಡಿಕೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಬಿಬಿಎಂಪಿಗೆ 243 ವಾರ್ಡ್‌ಗಳನ್ನು ರಚಿಸಿದ ಬಳಿಕ ಚುನಾವಣೆ ನಡೆಸಲಾಗುತ್ತದೋ ಅಥವಾ ಈಗಿರುವಂತೆ 198 ವಾರ್ಡ್‌ಗಳನ್ನೇ ಉಳಿಸಿಕೊಂಡು ಚುನಾವಣೆ ನಡೆಸಲಾಗುತ್ತದೋ ಎಂಬುದು ಹೈಕೋರ್ಟ್‌ ನೀಡುವ ಆದೇಶವನ್ನು ಆಧರಿಸಿದೆ.

ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಮರುವಿಂಗಡಣೆ ಮಾಡುವ ಬಗ್ಗೆ ಸರ್ಕಾರ ಇತ್ತೀಚೆಗೆ ನಡೆದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ ಗಮನಕ್ಕೆ ತಂದಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ಹೈಕೋರ್ಟ್‌ ಇನ್ನೂ ಆದೇಶ ನೀಡಿಲ್ಲ.

‘ಮತದಾರರ ಪಟ್ಟಿ ಪರಿಷ್ಕರಣೆ ಸ್ಥಗಿತಗೊಳಿಸುವಂತೆ ನಮಗೆ ರಾಜ್ಯ ಚುನಾವಣಾ ಆಯೋಗದಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.