ADVERTISEMENT

ಕೆಂಪಾಪುರ | ವಾಲಿದ ಕಟ್ಟಡ, ತಪ್ಪಿದ ಭಾರಿ ದುರಂತ

ನಾರಾಯಣಪ್ಪ ಕಾಲೊನಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 19:17 IST
Last Updated 5 ಫೆಬ್ರುವರಿ 2020, 19:17 IST
ನಾರಾಯಣಪ್ಪ ಕಾಲೊನಿಯಲ್ಲಿ ವಾಲಿದ ಕಟ್ಟಡ
ನಾರಾಯಣಪ್ಪ ಕಾಲೊನಿಯಲ್ಲಿ ವಾಲಿದ ಕಟ್ಟಡ   

ಬೆಂಗಳೂರು: ಕೆಂಪಾಪುರ ಬಡಾವಣೆಯ (ಬಿಬಿಎಂಪಿ ವಾರ್ಡ್ ಸಂಖ್ಯೆ 7ರಲ್ಲಿ) ನಾರಾಯಣಪ್ಪ ಕಾಲೊನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ವಾಲಿದ್ದು, ಈ ಕಟ್ಟಡದಲ್ಲಿದ್ದ 30 ಮಂದಿ ಸೇರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ವಾಲಿದ ಕಟ್ಟಡವನ್ನು ನೆಲಸಮ ಮಾಡಲು ತೀರ್ಮಾನಿಸಿದ್ದಾರೆ. ಘಟನೆಗೆ ಕಾರಣವಾದ ಸಮೀಪದ ನಿವೇಶನದ ಮಾಲೀಕ, ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಬಿಬಿಎಂಪಿ ಆಯುಕ್ತರು ಸೂಚಿಸಿದ್ದಾರೆ.

ಸುಮಾ ಪಬ್ಲಿಕ್ ಶಾಲೆ ಸಮೀಪದ ರಾಹುಲ್ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ತುಳಸಿ ಎಂಬವರು ‘ಹರ್ಷಿತ್’ ಹೆಸರಿನ ಪಿಜಿ ಕಟ್ಟಡ ನಡೆಸುತ್ತಿದ್ದರು. ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿದ್ದ ಪಿ.ಜಿಯಲ್ಲಿ 30 ಮಂದಿ ಇದ್ದರು. ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಈ ಕಟ್ಟಡ ವಾಲಿದೆ. ಒಳಗಿದ್ದವರಿಗೆ ಕಟ್ಟಡ ವಾಲುತ್ತಿರುವ ಅನುಭವ ಆಗುತ್ತಿರುವ ಸಂದರ್ಭದಲ್ಲಿ ಸದ್ದು ಕೂಡ ಕೇಳಿಸಿದೆ. ತಕ್ಷಣ ಒಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಅಕ್ಕಪಕ್ಕದ ನಿವಾಸಿಗಳೂ ಭೀತಿಯಿಂದ ಹೊರಗೆ ಓಡಿ ಬಂದು ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಮತ್ತು ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಐದು ವರ್ಷದ ಹಿಂದೆ ಕಟ್ಟಿದ್ದ ಈ ಕಟ್ಟಡದ ಸಮೀಪದಲ್ಲಿ ಹೊಸ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭವಾಗಿತ್ತು. ಅದಕ್ಕೆ ಪಾಯ ತೆಗೆದ ಪರಿಣಾಮ ಈ ಕಟ್ಟಡ ವಾಲಿದೆ. ನಿವೇಶನಕ್ಕೆ ಹೊಂದಿಕೊಂಡಿದ್ದ ಕಟ್ಟಡದ ಅಡಿಪಾಯಕ್ಕಿಂತ ಆಳವಾದ ಪಾಯ ತೋಡಿದ್ದರಿಂದ ನಿರ್ಮಾಣಗೊಂಡಿದ್ದ ಕಟ್ಟಡದ ಅಡಿಪಾಯ ಸಡಿಲವಾಗಿ‌ದೆ. ಪಕ್ಕದ ನಿವೇಶನ ಬಾಬು ಎಂಬುವರಿಗೆ ಸೇರಿದ್ದಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾಗದಂತೆ ವಾಲಿದ ಕಟ್ಟಡವನ್ನು ನೆಲಸಮ ಮಾಡಲು ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಗುರುವಾರ ಕಟ್ಟಡದ ನೆಲಸಮ ಆಗಲಿದೆ. ಸುಮಾರು ಐದು ಗಂಟೆ ಕಾಲ ನೆಲಸಮ ಕಾರ್ಯಾಚರಣೆ ನಡೆಸಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ವಿದ್ಯಾರ್ಥಿಗಳನ್ನು ಪಕ್ಕದ ದುರ್ಗಾ ಪಿ.ಜಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ‘ಹರ್ಷಿತ್’ ಪಿ.ಜಿ ನಡೆಸುತ್ತಿದ್ದ ತುಳಸಿ ಅವರೇ ದುರ್ಗಾ ಪಿ.ಜಿಯನ್ನೂ ನಡೆಸುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಉಳಿದಂತೆ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ಕಲ್ಯಾಣ ಮಂಟಪ ಮತ್ತು ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‍ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.