ADVERTISEMENT

ಬಿಬಿಎಂಪಿ ವಾರ್ಡ್‌ ವಿಂಗಡಣೆ: 233 ಆಕ್ಷೇಪಣೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 19:47 IST
Last Updated 4 ಜುಲೈ 2022, 19:47 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ ವಿಂಗಡಣೆಗೆ 233 ಆಕ್ಷೇಪಣೆಗಳು ಬಂದಿವೆ.

ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಿ ಸರ್ಕಾರ ಜೂನ್‌ 23ರಂದು ಅಧಿಸೂಚನೆ ಹೊರಡಿಸಿತ್ತು. ಈ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಜುಲೈ 4ರ ಬೆಳಿಗ್ಗೆವರೆಗೆ 233 ಆಕ್ಷೇಪಣೆಗಳು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಬಂದಿವೆ. ಜುಲೈ 7ರ ಸಂಜೆ 5ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

ನಗರಾಭಿವೃದ್ಧಿ ಇಲಾಖೆಗೆ ಬಂದಿರುವ ಈ ಆಕ್ಷೇಪಣೆಗಳನ್ನು ಒಟ್ಟುಗೂಡಿಸಿ ಅದರ ವರದಿ ಸಲ್ಲಿಸಲು ಮೂರು ದಿನ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ನಂತರವಷ್ಟೇ ಅದನ್ನು ಪರಿಗಣಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತದೆ. 2020ರ ಬಿಬಿಎಂಪಿ ಕಾಯ್ದೆಗೆ ಅನುಗುಣವಾಗಿ ವಾರ್ಡ್‌ ಪುನರ್‌ವಿಂಗಡಣೆ ಮಾಡಬೇಕು. ಮೀಸಲಾತಿ ಅಧಿಸೂಚನೆ ಹೊರಡಿಸಬೇಕು. ಇವೆಲ್ಲವನ್ನು ಎಂಟು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮೇ 20ರಂದು ಆದೇಶ ನೀಡಿತ್ತು. ವಾರ್ಡ್‌ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಜುಲೈ 20ರೊಳಗೆ ಹೊರಡಿಸಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.