ADVERTISEMENT

‘ವೈಟ್‌ ಟಾಪಿಂಗ್‌’ ವೆಚ್ಚ ಕಡಿಮೆ ಆಗುವುದು ನಿಜವೇ?

ಬಿಬಿಎಂಪಿ ಅಂದಾಜುವೆಚ್ಚ ಪ್ರತಿ ಕಿ.ಮೀ.ಗೆ 5.14 ಕೋಟಿ * ಗುತ್ತಿಗೆದಾರರ ಅಂದಾಜು ವೆಚ್ಚ ₹7.30 ಕೋಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:53 IST
Last Updated 15 ಅಕ್ಟೋಬರ್ 2019, 19:53 IST
   

ಬೆಂಗಳೂರು: ‘ಬಿಬಿಎಂಪಿ ವತಿಯಿಂದ ನಡೆಸಿರುವ ವೈಟ್‌ ಟಾಪಿಂಗ್‌ ಕಾಮಗಾರಿಗಳಿಗೆ ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ನಾವು ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ನಡೆಸಿಕೊಡುತ್ತೇವೆ’ ಎಂದು ಮುಂದೆ ಬಂದಿರುವ ಗುತ್ತಿಗೆದಾರರಿಬ್ಬರು ನಡೆಸುವ ಕಾಮಗಾರಿ ವೆಚ್ಚ ಬಿಬಿಎಂಪಿಯ ಅಂದಾಜು ವೆಚ್ಚಕ್ಕಿಂತ ನಿಜಕ್ಕೂ ಕಡಿಮೆ ಇದೆಯೇ?

‘ಇಲ್ಲ’ ಎನ್ನುತ್ತವೆ ಬಿಬಿಎಂಪಿಯ ಮೂಲಗಳು. ‘ಪದ್ಮನಾಭನಗರ ಕ್ಷೇತ್ರದ ಪಟಾಲಮ್ಮ ದೇವಸ್ಥಾನ ರಸ್ತೆಯನ್ನು 36ನೇ ಅಡ್ಡ ರಸ್ತೆಯ 4ನೇ ಮುಖ್ಯರಸ್ತೆ ಜಂಕ್ಷನ್‌ನಿಂದ ಜಯನಗರ 9ನೇ ಮುಖ್ಯರಸ್ತೆಯ 23ನೇ ಅಡ್ಡರಸ್ತೆವರೆಗೆ (ನ್ಯಾಷನಲ್‌ ಕೋಆಪರೇಟಿವ್‌ ಬ್ಯಾಂಕ್‌) ವೈಟ್‌ಟಾಪಿಂಗ್‌ ನಡೆಸಲು ಪ್ರತಿ ಕಿ.ಮೀ. ರಸ್ತೆಯ ವೆಚ್ಚ ₹ 8.78 ಕೋಟಿ ಆಗಲಿದೆ. ಈ ಪ್ರಸ್ತಾವವನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ಸಲ್ಲಿಸಿದ್ದೇನೆ’ ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಹೇಳಿಕೊಂಡಿದ್ದಾರೆ. ಸಹಕಾರನಗರ ಬಿಗ್‌ಮಾರ್ಕೆಟ್‌ ರಸ್ತೆಗೆ ಬಿಬಿಎಂಪಿ ಅಂದಾಜುಪಟ್ಟಿ ತಯಾರಿಸಿದ್ದು, ಅದರ ಪ್ರಕಾರ 1 ಕಿ.ಮೀ. ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಗೆ ಕೇವಲ ₹ 5.14 ಕೋಟಿ ವೆಚ್ಚವಾಗುತ್ತದೆ.

ಪಟಾಲಮ್ಮ ರಸ್ತೆ (ಆರ್ಮುಗಂ ವೃತ್ತದಿಂದ ಸೌತ್ಎಂಡ್‌ ವೃತ್ತ, ಅಲ್ಲಿಂದ 9ನೇ ಮುಖ್ಯರಸ್ತೆ 22ನೇ ಅಡ್ಡ ರಸ್ತೆವರೆಗೆ), ನ್ಯಾಷನಲ್‌ ಕೋ–ಆಪರೇಟಿವ್‌ ಬ್ಯಾಂಕ್‌ನಿಂದ 36ನೇ ಅಡ್ಡರಸ್ತೆವರೆಗೆ ಜಯನಗರ 4ನೇ ಮುಖ್ಯರಸ್ತೆ ವೈಟ್‌ಟಾಪಿಂಗ್‌ ನಡೆಸಲು ಗುತ್ತಿಗೆದಾರರಾದ ಆರ್‌.ಸತೀಶ್‌ ಹಾಗೂ ಎಸ್‌. ಮಂಜುನಾಥ್‌ ಮುಂದೆ ಬಂದಿದ್ದಾರೆ. ಈ ಇಬ್ಬರು ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿರುವ ಅಂದಾಜು ವೆಚ್ಚವನ್ನು ಹಿರಿಯ ಅಧಿಕಾರಿಗಳು ತುಲನೆ ಮಾಡಿದ್ದಾರೆ. ಅದರ ಪ್ರಕಾರ, ಬಿಬಿಎಂಪಿ ಅಂದಾಜುಪಟ್ಟಿಯೂ ಉಳಿದ ಇಬ್ಬರು ಗುತ್ತಿಗೆದಾರರು ಸಿದ್ಧಪಡಿಸಿದ ಅಂದಾಜುವೆಚ್ಚಕ್ಕಿಂತ ಕಡಿಮೆ ಇದೆ.

ADVERTISEMENT

‘ಯಾವುದೇ ರಸ್ತೆಯನ್ನು ವೈಟ್‌ಟಾಪಿಂಗ್‌ ಕಾಮಗಾರಿಗೆ ಆಯ್ಕೆ ಮಾಡುವ ಹಾಗೂ ಅದರ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಮುನ್ನ ಸಂಚಾರ ದಟ್ಟಣೆಯ ಸಮೀಕ್ಷೆ ನಡೆಸಬೇಕಾಗುತ್ತದೆ. ಅಲ್ಲಿನ ಮಣ್ಣು ಎಷ್ಟು ಒತ್ತಡ ತಾಳಿಕೊಳ್ಳಬಲ್ಲದು ಎಂಬುದನ್ನು ತಿಳಿಯಲು (ಬಿಬಿಡಿ ಪರೀಕ್ಷೆ) ಪರೀಕ್ಷೆ ಮಾಡಬೇಕಾಗುತ್ತದೆ. ಅಲ್ಲಿ ಎಷ್ಟು ಮೂಲಸೌಕರ್ಯಗಳು ಹಾದುಹೋಗಿವೆ, ಅವುಗಳಲ್ಲಿ ಯಾವುದನ್ನೆಲ್ಲ ಸ್ಥಳಾಂತರ ಮಾಡಬೇಕಾಗುತ್ತದೆ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಇದ್ಯಾವುದನ್ನೂ ಮಾಡದೆಯೇ ಪಟಾಲಮ್ಮ ರಸ್ತೆಯನ್ನು ವೈಟ್‌ ಟಾಪಿಂಗ್‌ಗೆ ಆಯ್ಕೆ ಮಾಡಲು ಹೇಗೆ ಸಾಧ್ಯ? ಈ ಪರೀಕ್ಷೆಗಳ ಅಂಕಿ ಅಂಶ ಇಲ್ಲದೆಯೇ ಅಂದಾಜುಪಟ್ಟಿ ತಯಾರಿಸಿದರೆ ಅದು ವೈಜ್ಞಾನಿಕವೇ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

‘ಪಟಾಲಮ್ಮ ರಸ್ತೆಯ ವೈಟ್‌ಟಾಪಿಂಗ್‌ ಅಂದಾಜುಪಟ್ಟಿಯಲ್ಲಿ ಟ್ರಾಫಿಕ್‌ ಸಂಕೇತಗಳ ಮಾರ್ಕಿಂಗ್‌ ವೆಚ್ಚ ಸೇರಿಲ್ಲ. ನೀರಿನ ಕೊಳವೆ ಸ್ಥಳಾಂತರ, ಒಳಚರಂಡಿ ಸ್ಥಳಾಂತರ ಅಲ್ಲದೇ ಇನ್ನೂ ಅನೇಕ ಅಂಶಗಳು ಸೇರಿಲ್ಲ’ ಎಂದರು.

‘ಗುತ್ತಿಗೆದಾರರ ಟೆಂಡರ್‌ ದಾಖಲೆಗಳು ಬಿಡ್‌ ತೆರೆಯುವವರೆಗೂ ಗೋಪ್ಯವಾಗಿರಬೇಕು. ಆದರೆ, ಈ ಎರಡು ವೈಟ್‌ಟಾಪಿಂಗ್‌ ವಿಚಾರದಲ್ಲಿ ಗುತ್ತಿಗೆದಾರರು ಎಷ್ಟು ಮೊತ್ತಕ್ಕೆ ಕಾಮಗಾರಿ ನಿರ್ವಹಿಸುತ್ತಾರೆ ಎಂಬುದು ಮೊದಲೇ ಬಹಿರಂಗವಾಗಿದೆ. ನಿಯಮಗಳ ಪ್ರಕಾರ ಅವರಿಗೆ ತಾಂತ್ರಿಕ ಅರ್ಹತೆ ಹಾಗೂ ಆರ್ಥಿಕ ಅರ್ಹತೆ ಇರಬೇಕು. ಅಂದರೆ, ₹100 ಕೋಟಿ ವೆಚ್ಚದ ಕಾಮಗಾರಿ ಗುತ್ತಿಗೆ ನೀಡಬೇಕಾದರೂ ಗುತ್ತಿಗೆದಾರರು ಅದರ ಹಿಂದಿನ ಐದು ವರ್ಷಗಳಲ್ಲಿ ಯಾವುದಾದರೂ ಎರಡು ವರ್ಷ ಅದಕ್ಕಿಂತ ದುಪ್ಪಟ್ಟು ವೆಚ್ಚದ ಕಾಮಗಾರಿ ನಡೆಸಿರಬೇಕು. ಕಾಮಗಾರಿಗೆ ಅಗತ್ಯ ಇರುವ ಯಂತ್ರೋಪಕರಣದ ಶೇ 50ರಷ್ಟನ್ನು ಸ್ವತಃ ಹೊಂದಿರಬೇಕು’.

‘ಗುತ್ತಿಗೆ ನೀಡುವುದಕ್ಕೆ ಮುನ್ನ ಒಟ್ಟು ಅಂದಾಜುವೆಚ್ಚದ ಶೇ 5ರಷ್ಟನ್ನು ಭದ್ರತಾ ಠೇವಣಿಯನ್ನು ಬ್ಯಾಂಕ್‌ ಗ್ಯಾರಂಟಿ ರೂಪದಲ್ಲಿ ಪಡೆಯಬೇಕು. ಕಾಮಗಾರಿ ಒಟ್ಟು ವೆಚ್ಚದ ಶೇ 1ರಷ್ಟು ಇಎಂಡಿ ಪಡೆಯಬೇಕು. ಈ ಹಣವನ್ನು ಗುತ್ತಿಗೆದಾರರಿಗೆ ಮರುಪಾವತಿ ಮಾಡುವುದು ಆ ಕಾಮಗಾರಿಯನ್ನು ಅವರು ನಿರ್ವಹಣೆ ಮಾಡಬೇಕಾದ ಅವಧಿ ಮುಗಿದ ಬಳಿಕ. ಈ ಎಲ್ಲ ಷರತ್ತುಗಳು ಈ ಎರಡು ವೈಟ್‌ಟಾಪಿಂಗ್‌ ಕಾಮಗಾರಿ ನಿರ್ವಹಿಸಲು ಮುಂದೆ ಬಂದಿರುವ ಗುತ್ತಿಗೆದಾರರಿಗೂ ಅನ್ವಯವಾಗುತ್ತವೆಯೇ’ ಎಂದು ಅವರು ಪ್ರಶ್ನಿಸಿದರು.

‘ಹೊರವರ್ತುಲ ರಸ್ತೆ ಕಾಮಗಾರಿ ಮಾಡಿ ತೋರಿಸಲಿ’

‘ಯಾವುದೊ ಅಡ್ಡ ರಸ್ತೆಯನ್ನು ಪ್ರತಿ ಕಿ.ಮೀ.ಗೆ ₹7 ಕೋಟಿ ವೆಚ್ಚದಲ್ಲಿ ಮಾಡಿ ತೋರಿಸುವುದಲ್ಲ. ಹೊರವರ್ತುಲ ರಸ್ತೆಯಲ್ಲಿ ಮೈಸೂರು ರಸ್ತೆಯಿಂದ ಕೆ.ಆರ್‌.ಪುರ ವರೆಗಿನ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಪ್ರತಿ ಕಿ.ಮಿ.ಗೆ 7 ಕೋಟಿ ವೆಚ್ಚದಲ್ಲಿ ಮಾಡಿ ತೋರಿಸಲಿ’ ಎಂದು ನಿಕಟಪೂರ್ವ ಮೇಯರ್‌ ಗಂಗಾಂಬಿಕೆ ಸವಾಲು ಹಾಕಿದರು.

‘ಚರ್ಚ್‌ಸ್ಟ್ರೀಟ್‌ ರಸ್ತೆ, ನೃಪತುಂಗ ರಸ್ತೆ ಹಾಗೂ ಮೆಜೆಸ್ಟಿಕ್‌ ಆಸುಪಾಸಿನ ರಸ್ತೆಗಳು ಹಿಂದೆ ಹೇಗಿದ್ದವು. ಟೆಂಡರ್‌ ಶ್ಯೂರ್‌ ಅಡಿ ಅಭಿವೃದ್ಧಿಪಡಿಸಿದ ನಂತರ ಹೇಗಾಗಿವೆ ಎಂದು ಜನರಿಗೆ ಗೊತ್ತಿದೆ. ನಮ್ಮ ಅವಧಿಯ ಎಲ್ಲ ಕಾಮಗಾರಿಗಳೂ ಅಕ್ರಮ ಎಂದು ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದರು. ತಾಂತ್ರಿಕ ಮಂಜೂರಾತಿ ಸಮಿತಿಯ ಮಂಜೂರಾತಿ ಪಡೆಯದೆಯೇ ಅಂದಾಜುಪಟ್ಟಿ ರೂಪಿಸುವುದು, ಟೆಂಡರ್ ಕರೆಯದೆಯೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸುವುದು ಸಕ್ರಮವೇ’ ಎಂದು ಅವರು ಪ್ರಶ್ನಿಸಿದರು.

‘ನಿರ್ದಿಷ್ಟ ಕಾಮಗಾರಿಯ ಟೆಂಡರ್‌ ಕರೆಯದ ಹೊರತಾಗಿಯೂ ನಿರ್ದಿಷ್ಟ ಮೊತ್ತಕ್ಕೆ ಕಾಮಗಾರಿ ನಡೆಸಲು ಗುತ್ತಿಗೆದಾರರು ಒಪ್ಪಿದ್ದಾರೆ ಎಂದು ಐಎಎಸ್‌ ಅಧಿಕಾರಿಗಳೇ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುತ್ತಾರೆ. ಇದಕ್ಕೆಲ್ಲ ಕೆಟಿಪಿಪಿ ಕಾಯ್ದೆಯಲ್ಲಿ ಅವಕಾಶ ಇದೆಯೇ. ನಾಳೆ ಇನ್ಯಾವುದೋ ಕಾಮಗಾರಿಯನ್ನು ದಾರಿ ಬದಿ ಹೋಗುವವನೊಬ್ಬ ಬಂದು ಇನ್ನಷ್ಟು ಕಡಿಮೆ ಮೊತ್ತಕ್ಕೆ ನಿರ್ವಹಿಸುತ್ತೇನೆ ಎಂದರೆ ಕೊಡುತ್ತಾರೆಯೇ. ಗುತ್ತಿಗೆದಾರರಿಗೆ ತಾಂತ್ರಿಕ ಅರ್ಹತೆ ಹಾಗೂ ಆರ್ಥಿಕ ಸಾಮರ್ಥ್ಯ ಕುರಿತು ಕೆಟಿಪಿಪಿ ಕಾಯ್ದೆ ಪ್ರಕಾರ ಮಾನದಂಡಗಳನ್ನು ನಿಗದಿಪಡಿಸಿರುವುದಾದರೂ ಏತಕ್ಕೆ’ ಎಂದು ಕಟುವಾಗಿ ಪ್ರಶ್ನಿಸಿದರು.

ಎನ್‌.ಆರ್‌.ರಮೇಶ್‌ ಈಗಲೂ ಪಾಲಿಕೆ ಸದಸ್ಯರೇ?

ಎನ್‌.ಆರ್‌.ರಮೇಶ್‌ ಅವರು ಪಟಾಲಮ್ಮ ರಸ್ತೆ ಮತ್ತು ಇತರ ಕೆಲವು ಆಯ್ದ ರಸ್ತೆಗಳ ಕಾಮಗಾರಿ ಕುರಿತು ಸಲ್ಲಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಸಲಹೆಗಾರರು ನಗರಾಭಿವೃದ್ಧಿ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಪತ್ರದ ಪ್ರಕಾರ ರಮೇಶ್‌ ಈಗಲೂ ಪಾಲಿಕೆ ಸದಸ್ಯರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.