ADVERTISEMENT

ಮೊದಲ ಮಹಡಿ, ಎರಡನೇ ಮಹಡಿಗೆ ಪ್ರತ್ಯೇಕ ಟೆಂಡರ್‌!

ಯಡಿಯೂರು ವಾರ್ಡ್‌ನ ಸಮುದಾಯ ಭವನ ಕಾಮಗಾರಿ– ನಿರ್ದಿಷ್ಟ ಗುತ್ತಿಗೆದಾರನಿಗೆ ಸಹಕರಿಸಲು ತುಂಡು ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 20:31 IST
Last Updated 9 ಮಾರ್ಚ್ 2021, 20:31 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಎರಡು ಮಹಡಿಗಳನ್ನು ಒಳಗೊಂಡ ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ ಪ್ರತ್ಯೇಕ ಹಾಗೂ ಎರಡನೇ ಮಹಡಿಗೆ ಪ್ರತ್ಯೇಕವಾಗಿ ಟೆಂಡರ್‌ ಕರೆಯುವುದನ್ನು ಎಲ್ಲಾದರೂ ನೋಡಿದ್ದೀರಾ? ಬಿಬಿಎಂಪಿಯಲ್ಲಿ ಇದು ಕೂಡಾ ಸಾಧ್ಯ.

ಅಚ್ಚರಿಯೆಂದರೆ, ಸಮುದಾಯಭವನ ಕಾಮಗಾರಿ ಬೇರೆ ಬೇರೆ ಮಹಡಿಗಳಿಗೆ ಪ್ರತ್ಯೇಕವಾಗಿ ಟೆಂಡರ್‌ ಕರೆದರೂ ಕಾಮಗಾರಿಯ ಗುತ್ತಿಗೆಯನ್ನು ಮಾತ್ರ ಒಬ್ಬನೇ ಗುತ್ತಿಗೆದಾರನಿಗೆ ನೀಡಲಾಗಿದೆ.

ಯಡಿಯೂರು ವಾರ್ಡ್‌ನಲ್ಲಿ ಬಿಬಿಎಂಪಿಯು ಸಮುದಾಯ ಭವನ ನಿರ್ಮಿಸುತ್ತಿದೆ. ಎರಡು ಮಹಡಿಗಳನ್ನು ಹಾಗೂ ಎಲೆಕ್ಟ್ರಿಕಲ್‌ ಕೆಲಸಗಳನ್ನು ಒಳಗೊಂಡ ಈ ಕಾಮಗಾರಿಯ ಅಂದಾಜು ವೆಚ್ಚ ₹ 5.50 ಕೋಟಿ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪ್ರಕಾರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸಬೇಕಾದರೆ ಗುತ್ತಿಗೆದಾರ 2014–15ರಿಂದ 2018–19ರ ನಡುವಿನ ಎರಡು ಆರ್ಥಿಕ ವರ್ಷಗಳಲ್ಲಿ ಕನಿಷ್ಠ ₹ 11 ಕೋಟಿ ವೆಚ್ಚದ ಕಾಮಗಾರಿ ನಿರ್ವಹಿಸಿರಬೇಕು. ಈ ಕಾಮಗಾರಿಯ ತರಹದ್ದೇ ಆದ ₹ 2.75 ಕೋಟಿ ವೆಚ್ಚದ ಒಂದಾದರೂ ಕಾಮಗಾರಿ ಅದರಲ್ಲಿ ಸೇರಿರಬೇಕು.

ADVERTISEMENT

ಬಿಬಿಎಂಪಿ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಈ ಕಾಮಗಾರಿಯ ಗುತ್ತಿಗೆಯನ್ನು ಯಾರಿಗೆ ನೀಡಬೇಕೆಂದು ಬಯಸಿದ್ದರೋ, ಆ ಗುತ್ತಿಗೆದಾರರ ಇಷ್ಟು ಮೊತ್ತದ ಕಾಮಗಾರಿ ನಿರ್ವಹಿಸುವ ಅರ್ಹತೆ ಹೊಂದಿರಲಿಲ್ಲ. ಹಾಗಾಗಿ ಕಾಮಗಾರಿಯನ್ನೇ ಅಧಿಕಾರಿಗಳು ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಮೊದಲ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ, ಎರಡನೇ ಮಹಡಿಯ ನಿರ್ಮಾಣಕ್ಕೆ ₹ 1.99 ಕೋಟಿ ಹಾಗೂ ಎಲೆಕ್ಟ್ರಿಕಲ್‌ ಕೆಲಸಗಳಿಗೆ ₹ 1.52 ಕೋಟಿ ವೆಚ್ಚಕ್ಕೆ ಪ್ರತ್ಯೇಕ ಟೆಂಡರ್‌ ಕರೆದಿದ್ದಾರೆ. ಈ ಕಾಮಗಾರಿ ನಿರ್ವಹಣೆಗೆ 9 ತಿಂಗಳು ಕಾಲಾವಕಾಶ ನೀಡಲಾಗಿದೆ.

ಕಾಮಗಾರಿಯನ್ನು ಸತೀಶ್‌ ಆರ್‌. ಎಂಬ ಗುತ್ತಿಗೆದಾರರಿಗೆ ನೀಡಲಾಗಿದೆ. ಅವರ ಟೆಂಡರ್‌ ಸಾಮರ್ಥ್ಯ ₹ 11 ಕೋಟಿ ಇಲ್ಲ. ಹಾಗಾಗಿ ಸತೀಶ್‌ ಅವರು ಈ ಕಾಮಗಾರಿಯ ಟೆಂಡರ್‌ ಪಡೆಯುವುದಕ್ಕೆ ಅನುಕೂಲ ಕಲ್ಪಿಸಲುವ ಸಲುವಾಗಿ ₹ 5.50 ಕೋಟಿ ವೆಚ್ಚದ ಕಾಮಗಾರಿಯನ್ನು ಮೂರು ಪ್ರತ್ಯೇಕ ಕಾಮಗಾರಿಗಳನ್ನಾಗಿ ವಿಭಜಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯಡಿಯೂರು ವಾರ್ಡ್‌ನ ಈ ಕಾಮಗಾರಿಯ ಉಸ್ತುವಾರಿ ಹೊತ್ತ ಕಾರ್ಯಪಾಲಕ ಎಂಜಿನಿಯರ್‌ (ಯೋಜನೆ) ಅವರಿಗೆ ಕರೆ ಮಾಡಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

‘ಪ್ರತಿ ಮಹಡಿಗೆ ಪ್ರತ್ಯೇಕ ಟೆಂಡರ್‌– ಅವಕಾಶ ಇಲ್ಲ’
‘ಸಮುದಾಯ ಭವನ ನಿರ್ಮಿಸುವಾಗ ಮೊದಲ ಮಹಡಿಗೆ, ಎರಡನೇ ಮಹಡಿಗೆ ಹಾಗೂ ಎಲೆಕ್ಟ್ರಿಕಲ್‌ ಕಾಮಗಾರಿಗಳಿಗೆ ಏಕಕಾಲಕ್ಕೆ ಪ್ರತ್ಯೇಕವಾಗಿ ಟೆಂಡರ್‌ ಕರೆಯುವುದಕ್ಕೆ ಅವಕಾಶ ಇಲ್ಲ. ಆ ರೀತಿ ಮಾಡಿದ್ದರೆ ಅದು ತಪ್ಪಾಗುತ್ತದೆ. ಯಡಿಯೂರು ವಾರ್ಡ್‌ನ ಸಮುದಾಯ ಭವನ ಕಾಮಗಾರಿಯಲ್ಲಿ ಈ ರೀತಿ ಆಗಿದ್ದರೆ ಪರಿಶೀಲಿಸಿ ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

4ಜಿ ಅಡಿ ವಿನಾಯಿತಿ ಕೋರಿದ್ದ ಗುತ್ತಿಗೆದಾರ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದ.ರಾ ಬೇಂದ್ರೆ ವೃತ್ತದಿಂದ ಆರ್ಮುಗಂ ವೃತ್ತದವರೆಗಿನ 1.2 ಕಿ.ಮೀ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಟೆಂಡರ್‌ ಕರೆಯದೆಯೇ ಗುತ್ತಿಗೆದಾರ ಸತೀಶ್‌ ಆರ್‌. ಅವರ ಮೂಲಕ ನಡೆಸುವುದಕ್ಕೆ 2019ರಲ್ಲಿ ಬಿಬಿಎಂಪಿ ಸಿದ್ಧತೆ ನಡೆಸಿತ್ತು. ಸತೀಶ್ ಅವರು ಈ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ 4 ಜಿ ಕಲಂ ಅಡಿ ವಿನಾಯಿತಿ ನೀಡುವಂತೆ ಕೋರಿ ಬಿಬಿಎಂಪಿಯ ಆಗಿನ ಆಯುಕ್ತರಿಗೆ 2019ರ ಸೆ. 21ರಂದು ಪತ್ರವನ್ನೂ ಬರೆದಿದ್ದರು.

ಈ ಕುರಿತು ನಗರಾಭಿವೃದ್ಧಿ ಇಲಾಖೆಯಲ್ಲಿ ಆಗ ಹೆಚ್ಚುವರಿ ಮುಖ್ಯಕಾರ್ಯದರ್ಶಿರಾಗಿದ್ದ ಇ.ವಿ.ರಮಣ ರೆಡ್ಡಿ ಅವರಿಗೆ 2019ರ ಸೆ. 24ರಂದು ಪತ್ರ ಬರೆದಿದ್ದ ಬಿಬಿಎಂಪಿಯ ಆಗಿನ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರು, ‘ಈ ಕಾಮಗಾರಿ ಬಗ್ಗೆ ಆಗಿನ ಮುಖ್ಯಕಾರ್ಯದರ್ಶಿ ಅವರು ‍‍‍‍‍‍‍‍‍‍‍‍ಎನ್‌.ಆರ್‌.ರಮೇಶ್ ಜೊತೆ ದೂರವಾಣಿಯಲ್ಲಿ ಮಾತನಾಡಿ ಈ ಎರಡೂ ಕಾಮಗಾರಿಗಳ ಅಂದಾಜು ಮೊತ್ತವನ್ನು ಶೇ 3ರಷ್ಟು ಕಡಿಮೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಅಂದಾಜುಪಟ್ಟಿಯಲ್ಲಿ ಶೇ 3ರಷ್ಟು ಕಡಿಮೆ ಮಾಡಿ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಾದ ಆರ್‌.ಸತೀಶ್‌ ಹಾಗೂ ಎಸ್‌.ಮಂಜುನಾಥ್‌ ಒಪ್ಪಿದ್ದಾರೆ’ ಎಂದು ಉಲ್ಲೇಖಿಸಿದ್ದರು. ಈ ಪತ್ರವನ್ನು ಆಧರಿಸಿ ‘ಪ್ರಜಾವಾಣಿ’ 2019ರ ಸೆ.15ರ ಸಂಚಿಕೆಯಲ್ಲಿ ‘ಬಿಜೆಪಿ ವಕ್ತಾರನ ಜೊತೆ ಮುಖ್ಯ ಕಾರ್ಯದರ್ಶಿ ಚೌಕಾಸಿ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಟೆಂಡರ್‌ ಕರೆಯದೆಯೇ ಕಾಮಗಾರಿ ನಡೆಸುವ ಪ್ರಸ್ತಾಪವನ್ನು ಬಳಿಕ ಬಿಬಿಎಂಪಿ ಕೈಬಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.