ADVERTISEMENT

ಒಂದೇ ದಿನ ಯುವತಿ, ಆರು ಮಕ್ಕಳು ನಾಪತ್ತೆ: ಹುಡುಕದಂತೆ ಪತ್ರ ಬರೆದಿಟ್ಟಿರುವ ಬಾಲಕರು

ತಮ್ಮನ್ನು ಹುಡುಕದಂತೆ ಪತ್ರ ಬರೆದಿಟ್ಟಿರುವ ಬಾಲಕರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 16:02 IST
Last Updated 10 ಅಕ್ಟೋಬರ್ 2021, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಉತ್ತರ ವಿಭಾಗ ವ್ಯಾಪ್ತಿಯಲ್ಲಿ ಬಿಸಿಎ ವಿದ್ಯಾರ್ಥಿನಿ ಹಾಗೂ ಆರು ಮಕ್ಕಳು ಒಂದೇ ದಿನ ನಾಪತ್ತೆಯಾಗಿದ್ದು, ಈ ಬಗ್ಗೆ ಪೋಷಕರು ಠಾಣೆಗೆ ದೂರು ನೀಡಿದ್ದಾರೆ.

‘ನಗರದ ಸೋಲದೇವನಹಳ್ಳಿ ಹಾಗೂ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಏಳು ಮಂದಿ ನಾಪತ್ತೆಯಾದ ಬಗ್ಗೆ ಪೋಷಕರು ಪ್ರತ್ಯೇಕ ದೂರು ನೀಡಿದ್ದಾರೆ. ನಾಪತ್ತೆ ಹಾಗೂ ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿಸಿಎ 3ನೇ ವರ್ಷದ ವಿದ್ಯಾರ್ಥಿನಿ ಅಮೃತವರ್ಷಿಣಿ (21), 12 ವರ್ಷ ವಯಸ್ಸಿನ ರಾಯನ್ ಸಿದ್ದಾರ್ಥ್, ಚಿಂತನ, ಭೂಮಿ, 15 ವರ್ಷ ವಯಸ್ಸಿನ ಪರೀಕ್ಷಿತ್, ನಂದನ್ ಹಾಗೂ ಕಿರಣ್ ನಾಪತ್ತೆಯಾದವರು. ಬಹುತೇಕ ಮಕ್ಕಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳ ಫ್ಲ್ಯಾಟ್‌ಗಳಲ್ಲಿ ಪೋಷಕರ ಜೊತೆ ವಾಸವಿದ್ದರು’ ಎಂದೂ ತಿಳಿಸಿದರು.

ADVERTISEMENT

ಬ್ಯಾಗ್ ಸಮೇತ ಮನೆ ತೊರೆದ ಮಕ್ಕಳು; ‘ಬಟ್ಟೆಗಳು, ಚಪ್ಪಲಿ, ಬ್ರಷ್, ನೀರಿನ ಬಾಟಲಿ, ಹಣ, ಕ್ರೀಡಾ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಮಕ್ಕಳು ಮನೆ ತೊರೆದಿದ್ದಾರೆ. ಕೆಲ ಮಕ್ಕಳು ಒಟ್ಟಿಗೆ ಮಾತನಾಡಿಕೊಂಡು ಪೋಷಕರಿಗೆ ಏನನ್ನೂ ಹೇಳದೇ ಮನೆ ಬಿಟ್ಟು ಹೋಗಿದ್ದಾರೆ. ಕೆಲವರು ವಾಯುವಿಹಾರಕ್ಕೆಂದು ಹೋಗಿ ನಾಪತ್ತೆಯಾಗಿದ್ದಾರೆ’ ಎಂದೂ ಹೇಳಿದರು.

‘ಬೆಳಿಗ್ಗೆ ಆಟವಾಡಲು ಮಕ್ಕಳು ಹೊರಗಡೆ ಹೋಗಿರಬಹುದೆಂದು ಪೋಷಕರು ತಿಳಿದಿದ್ದರು. ಆದರೆ, ರಾತ್ರಿಯಾದರೂ ಮಕ್ಕಳು ಮನೆಗೆ ವಾಪಸು ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು, ಠಾಣೆಗೆ ಬಂದು ದೂರು ನೀಡಿದ್ದಾರೆ. ನಾಪತ್ತೆಯಾದ ಕೆಲ ಮಕ್ಕಳು, ಸಹಪಾಠಿಗಳೆಂದು ಗೊತ್ತಾಗಿದೆ. ಎಲ್ಲರೂ ಒಂದೇ ಕಡೆ ಹೋಗಿರುವ ಮಾಹಿತಿಯೂ ಇದೆ’ ಎಂದೂ ಮಾಹಿತಿ ನೀಡಿದರು.

ಪತ್ರ ಬರೆದಿಟ್ಟಿರುವ ಬಾಲಕರು: ನಾಪತ್ತೆಯಾಗಿರುವ ಮಕ್ಕಳ ಪೈಕಿ ಇಬ್ಬರು ಬಾಲಕರು, ತಮ್ಮ ಮನೆಗಳಲ್ಲಿ ಪತ್ರ ಬರೆದಿಟ್ಟಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

‘ನಮಗೆ ಓದಿಗಿಂತ ಕ್ರೀಡೆಯಲ್ಲಿ ಸಾಧನೆ ಮಾಡುವ ಆಸೆ ಇದೆ. ಕ್ರೀಡೆಯಿಂದಲೇ ಉತ್ತಮ ಹೆಸರು ಹಾಗೂ ಹಣ ಸಂಪಾದಿಸುವ ಇಚ್ಛೆ ಇದೆ. ನೀವು (ಪೋಷಕರು) ಹೇಳಿದಂತೆ ನಿತ್ಯವೂ ಓದಲು ಆಗುವುದಿಲ್ಲ. ಹೀಗಾಗಿ, ಮನೆ ಬಿಟ್ಟು ಹೋಗುತ್ತಿದ್ದೇವೆ. ನಮ್ಮನ್ನು ಹುಡುಕಾಡಬೇಡಿ’ ಎಂದು ಪತ್ರದಲ್ಲಿ ಮಕ್ಕಳು ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.