ADVERTISEMENT

ಬಿಡಿಎ | ಅಕ್ರಮ ಕಟ್ಟಡ ಸಕ್ರಮ ಬೇಡ

ಒತ್ತುವರಿ ಸಕ್ರಮ ಮಾಡಿದರೆ ನಮಗೆ ಶಾಶ್ವತ ಅನ್ಯಾಯ – ಸಂತ್ರಸ್ತರ ಕಳವಳ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 21:23 IST
Last Updated 12 ಜೂನ್ 2020, 21:23 IST
   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಜಾಗಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಕಟ್ಟಡಗಳನ್ನು ಸಕ್ರಮ ಮಾಡಲು ಹೊರಟಿರುವುದು, ಬಿಡಿಎ ಬಡಾವಣೆಗಳಿಗಾಗಿ ಜಾಗ ಕಳೆದುಕೊಂಡ ಕೆಲವು ಪರಿಶಿಷ್ಟ ಜಾತಿಯ ಕುಟುಂಬಗಳಲ್ಲಿ ಕಳವಳವನ್ನುಂಟುಮಾಡಿದೆ.

ರಾಜರ ಕಾಲದಲ್ಲಿ ತೋಟಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕುಟುಂಬಗಳಿಗೆ ನೀರಗಂಟಿ ಜಾಗಗಳನ್ನು ಇನಾಮಾಗಿ ನೀಡಲಾಗಿತ್ತು. ಬಹುತೇಕ ಪರಿಶಿಷ್ಟ ಜಾತಿಯವರೇ ಈ ಕಾಯಕದಲ್ಲಿ ತೊಡಗಿದ್ದರು. ಇಂತಹ ಜಾಗಗಳ ಹಕ್ಕನ್ನು ಸರ್ಕಾರ ಅವುಗಳನ್ನು ಅನುಭೋಗಿಸುತ್ತಿದ್ದ ಕುಟುಂಬಗಳಿಗೆ ಬಿಟ್ಟುಕೊಟ್ಟಿದೆ.

ಬಿಡಿಎ ಭೂಸ್ವಾಧೀನ ಮಾಡಿಕೊಂಡ ಜಾಗಗಳಲ್ಲಿ ಕೆಲವೆಡೆ ತೋಟಿ–ನೀರಗಂಟಿ ಇನಾಂ ಜಾಗಗಳೂ ಸೇರಿವೆ. ಈ ಹಿಂದೆ ಬಿಡಿಎ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಬಲಾಢ್ಯರು ಹಾಗೂ ರಾಜಕೀಯ ಪುಢಾರಿಗಳು ಪರಿಶಿಷ್ಟ ಜಾತಿಯ ಅನಕ್ಷರಸ್ಥರನ್ನು ವಂಚಿಸಿ, ಅವರಿಗೆ ಸೇರಬೇಕಾದ ಪರಿಹಾರವನ್ನು ತಾವೇ ಪಡೆದಿದ್ದರು. ಬಿಡಿಎ ನೀಡಿದ್ದ ಬದಲಿ ನಿವೇಶನಗಳನ್ನೂ ತಮ್ಮ ಕುಟುಂಬದವರ ಹೆಸರಿಗೆ ಮಾಡಿಸಿಕೊಂಡಿದ್ದರು. ಇಂತಹ ಕುಟುಂಬಗಳ ಈಗಿನ ತಲೆಮಾರಿನ ಅನೇಕರು ತಮ್ಮ ಹಿರಿಯರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟ ನಡೆಸುತ್ತಿದ್ದಾರೆ.

ADVERTISEMENT

‘ನಮ್ಮದು ತೋಟಿಗಳ ವಂಶ. ನಮ್ಮ ಮುತ್ತಾತನಿಗೆ ತೋಟಿ, ನೀರಗಂಟಿ ಇನಾಮ್‌ ಜಮೀನು ನೀಡಲಾಗಿತ್ತು. ಅವರಿಂದ ನಮ್ಮ ತಂದೆಗೆ ಜಮೀನು ಬಂದಿತ್ತು. ಬಿಡಿಎ 1987ರಲ್ಲಿ ಎಚ್‌ಎಸ್‌ಆರ್‌ ಬಡಾವಣೆ ನಿರ್ಮಿಸುವಾಗ ನಮ್ಮ ಕುಟುಂಬದ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ವಿಚಾರವೇ ಅನಕ್ಷರಸ್ಥರಾದ ತಂದೆಗೆ ಗೊತ್ತಿಲ್ಲ. ನಮ್ಮ ಮನೆಗೆ ಬಿಡಿಎನಿಂದ ಯಾವ ನೋಟಿಸೂ ಬಂದಿಲ್ಲ. ಆಗಿನ ಕಾಲದ ಪ್ರಭಾವಿ ರಾಜಕಾರಣಿಯೊಬ್ಬರ ಬಂಟರಾಗಿದ್ದ ಸ್ಥಳೀಯ ಪುಢಾರಿಯೊಬ್ಬರು ನಮ್ಮ ಕುಟುಂಬದ ಜಮೀನಿಗೆ ಸಿಗಬೇಕಾದ ಪರಿಹಾರವನ್ನು ತಮ್ಮ ಮಕ್ಕಳಿಗೆ ಸಿಗುವಂತೆ ಮಾಡಿದ್ದಾರೆ. ಇದು ನಮ್ಮ ಒಂದು ಕುಟುಂಬಕ್ಕಾದ ವಂಚನೆಯ ಕತೆಯಲ್ಲ. ಪರಿಶಿಷ್ಟ ಜಾತಿಯವರ ಅನೇಕ ಕುಟುಂಬಗಳು ಈ ರೀತಿ ಅನ್ಯಾಯಕ್ಕೊಳಗಾಗಿವೆ. ನಮಗೆ ಬುದ್ಧಿ ಬಂದ ಬಳಿಕ ಈ ವಿಚಾರದ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಎಚ್‌ಎಸ್ಆರ್‌ ಬಡಾವಣೆಯ ಚಂದ್ರಕುಮಾರ್‌.

‘ರಾಜಕೀಯ ಪುಢಾರಿಗಳು ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲಿ ನಿವೇಶನಗಳನ್ನು ನಿರ್ಮಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ರಸ್ತೆಗೆ, ಮೈದಾನಕ್ಕೆ ಕಾಯ್ದಿರಿಸಿದ್ದ ಜಾಗವನ್ನೂ ಬಿಟ್ಟಿಲ್ಲ. ಬಿಡಿಎ ಅಧಿಕಾರಿಗಳಿಗೆ ಈ ವಿಚಾರ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಅಲ್ಲೆಲ್ಲ ಈಗ ಅಕ್ರಮವಾಗಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ’ ಎಂದು ದೂರುತ್ತಾರೆ ಅವರು.

‘ಬಿಡಿಎ ಅಕ್ರಮ– ಸಕ್ರಮ ಯೋಜನೆ ಜಾರಿಯಾದರೆ ಅನ್ಯಾಯ ಸರಿಪಡಿಸುವ ಅವಕಾಶವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳಲಿದ್ದೇವೆ. ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಜಾಗದ ಹಕ್ಕು ಸಿಗಲಿದೆ. ನಾವು ದಶಕಗಳಿಂದ ನಡೆಸುತ್ತಾ ಬಂದಿರುವ ಹೋರಾಟ ಮಣ್ಣು ಪಾಲಾಗುತ್ತದೆ. ಅನ್ಯಾಯಕ್ಕೊಳಗಾಗಿರುವ ತೋಟಿ– ನೀರಗಂಟಿ ಇನಾಮ್‌ ಜಮೀನಿನ ಹಕ್ಕುದಾರರ ಪಾಲಿಗೆ ನ್ಯಾಯ ಮರೀಚಿಕೆಯಾಗುತ್ತದೆ’ ಎಂದು ಅವರು ಆತಂಕ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.