ADVERTISEMENT

ಬಿಡಿಎ ಜಾಗದ ಮನೆ ಸಕ್ರಮ: ಶುಲ್ಕ ಇಳಿಕೆಗೆ ಒತ್ತಾಯ

ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ– ಬಿಡಿಎ ಅಧ್ಯಕ್ಷ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:59 IST
Last Updated 21 ಜನವರಿ 2021, 18:59 IST
ಬಿಡಿಎ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮಕ್ಕೆ ವಿಧಿಸುವ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ನೇತೃತ್ವದ ನಿಯೋಗವು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಬಿಡಿಎ ಉಪಾಯುಕ್ತ ಶಿವರಾಜ್, ಕಾರ್ಯದರ್ಶಿ ವಾಸಂತಿ ಅಮರ್, ಪಾಲಿಕೆ ಮಾಜಿ ಸದಸ್ಯರಾದ ಆನಂದ್‌, ಅಬ್ದುಲ್ ವಾಜಿದ್‌ ಮತ್ತಿತರರು ಇದ್ದಾರೆ
ಬಿಡಿಎ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮಕ್ಕೆ ವಿಧಿಸುವ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ನೇತೃತ್ವದ ನಿಯೋಗವು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಬಿಡಿಎ ಉಪಾಯುಕ್ತ ಶಿವರಾಜ್, ಕಾರ್ಯದರ್ಶಿ ವಾಸಂತಿ ಅಮರ್, ಪಾಲಿಕೆ ಮಾಜಿ ಸದಸ್ಯರಾದ ಆನಂದ್‌, ಅಬ್ದುಲ್ ವಾಜಿದ್‌ ಮತ್ತಿತರರು ಇದ್ದಾರೆ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮ ಮಾಡಲು ವಿಧಿಸುವ ಶುಲ್ಕವನ್ನು ಕಡಿಮೆ ಮಾಡುವಂತೆ ಕಂದಾಯ ನಿವೇಶನ ಮತ್ತು ಕಟ್ಟಡ ಮಾಲೀಕರ ಸಮಿತಿ ಸದಸ್ಯರು ಒತ್ತಾಯಿಸಿದರು.

ಸಮಿತಿ ಸದಸ್ಯರು ಹೆಬ್ಬಾಳ ಶಾಸಕ ಬೈರತಿ ಸುರೇಶ್ ನೇತೃತ್ವದಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.

‘ಕೆಲವು ಪ್ರಕರಣಗಳಲ್ಲಿ ಕಂದಾಯ ನಿವೇಶನಗಳ ಮರು ಮಂಜೂರಾತಿಗೆ ವಿಧಿಸುತ್ತಿರುವ ಶುಲ್ಕ ನಿವೇಶನದ ದರಕ್ಕಿಂತ ಎರಡು ಪಟ್ಟು ಹೆಚ್ಚು ಇದೆ. ಮನೆ ಕಟ್ಟಿಕೊಂಡಿರುವವರು ಇಷ್ಟೊಂದು ದುಬಾರಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಹಾಗಾಗಿ ಶುಲ್ಕವನ್ನು ಕಡಿಮೆ ಮಾಡಬೇಕು’ ಎಂದು ಶಾಸಕ ಸುರೇಶ್‌ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ‘ಬಿಡಿಎಗೆ ಸೇರಿದ ಜಾಗದಲ್ಲಿ 75 ಸಾವಿರಕ್ಕೂ ಅಧಿಕ ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಭೂದಾಖಲೆಗಳಿಲ್ಲದ ಕಾರಣ ಈ ಮನೆಗಳಲ್ಲಿ ವಾಸಿಸುವವರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಅವರಿಗೆ ಅನುಕೂಲ ಕಲ್ಪಿಸಲೆಂದೇ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಇಂತಹ ಮನೆಗಳನ್ನು ಸಕ್ರಮ ಮಾಡಲು ಬಿಡಿಎ ಕಾಯ್ದೆಗೆ ತಿದ್ದುಪಡಿ ಮಾಡಿ ಸೆಕ್ಷನ್‌ 38(ಡಿ) ಸೇರ್ಪಡೆ ಮಾಡಲಾಗಿದೆ‘ ಎಂದರು.

‘ಆಯಾ ಪ್ರದೇಶದ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಶುಲ್ಕವನ್ನು ವಿಧಿಸಿ ಮನೆಗಳನ್ನು ಸಕ್ರಮ ಮಾಡಿಕೊಟ್ಟು, ಸ್ವಾಧೀನ ಪತ್ರವನ್ನೂ ನೀಡಲಾಗುತ್ತದೆ. ಮನೆಗಳನ್ನು ಸಕ್ರಮ ಮಾಡಲು ನಿಗದಿಪಡಿಸಿರುವ ಶುಲ್ಕ ದುಬಾರಿ ಮತ್ತು ಅವೈಜ್ಞಾನಿಕ ಎಂಬ ದೂರುಗಳು ಬರುತ್ತಿವೆ. ಹಾಗಾಗಿ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮರುಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು

‘ಕೆಲವರು ಮನೆಗೆ ಬಿಬಿಎಂಪಿಯಿಂದ ಕಂದಾಯ ಖಾತೆ ಅಥವಾ ಬಿ– ಖಾತೆ ಮಾಡಿಸಿಕೊಂಡಿದ್ದಾರೆ. ಆದರೆ, ಇವುಗಳಿಗೆ ಮಾನ್ಯತೆ ಇಲ್ಲ.ಇಂತಹ ಮನೆಗಳನ್ನು ನೆಲಸಮ ಮಾಡಲೂ ಸಾಧ್ಯವಿಲ್ಲ. ಈ ಬಿಕ್ಕಟ್ಟಿಗೆ ಪರಿಹಾರ ಕಲ್ಪಿಸಲೆಂದೇ ಗರಿಷ್ಠ 50x80 ಅಡಿಗಳಷ್ಟು ವಿಸ್ತೀರ್ಣದವರೆಗಿನ ನಿವೇಶನಗಳ ಮನೆಯನ್ನು ಮಾತ್ರ ಸಕ್ರಮ ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಬಿಡಿಎ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಗುರುತಿಸುವ ಹೊಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿದ್ದೇವೆ. ಇಂತಹ ಮನೆಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮನೆಗಳ ಮಾಲೀಕರಿಗೆ ನೊಟೀಸ್ ನೀಡಿ ಸಕ್ರಮ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.