ADVERTISEMENT

ತನಿಖೆಗೆ ಮಾಹಿತಿ ನೀಡುವ ಮುನ್ನ ಅನುಮತಿ ಪಡೆಯಬೇಕು: ಬಿಡಿಎ ಆಯುಕ್ತರ ಅಪ್ಪಣೆ

ಬಿಡಿಎ: ಹೊಸ ನಿಯಮಕ್ಕೆ ತನಿಖಾ ಸಂಸ್ಥೆಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 13:48 IST
Last Updated 30 ಜುಲೈ 2020, 13:48 IST
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ   

ಬೆಂಗಳೂರು: ಸಾರ್ವಜನಿಕರಿಂದ ಬಂದ ದೂರುಗಳ ವಿಚಾರಣೆಗೆ ಸಂಬಂಧಿಸಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಮುಂತಾದ ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಲು ಅಥವಾ ಮಾಹಿತಿ ಒದಗಿಸಲು ಇನ್ನು ಮುಂದೆ ಬಿಡಿಎ ಅಧಿಕಾರಿಗಳು ಆಯುಕ್ತರ ಅಪ್ಪಣೆ ಪಡೆಯಬೇಕು.

ಬಿಡಿಎ ಆಯುಕ್ತ ಎಚ್‌.ಆರ್‌.ಮಹಾದೇವ್‌, ‘ನನ್ನ ಪೂರ್ವಾನುಮತಿ ಇಲ್ಲದೆ ಪ್ರಾಧಿಕಾರದ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿ ಪ್ರಾಧಿಕಾರದ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳ ಹೊರತುಪಡಿಸಿ ಬಿಎಂಟಿಎಫ್‌, ಎಸಿಬಿ ಅಥವಾ ಯಾವುದೇ ತನಿಖಾ ಸಂಸ್ಥೆಗಳ ಮುಂದೆ ವಿಚಾರಣೆಗೆ ಹಾಜರಾಗುವಂತಿಲ್ಲ. ಪ್ರಾಧಿಕಾರದ ದಾಖಲೆಗಳನ್ನು ಮತ್ತು ಮಾಹಿತಿಯನ್ನು ನೀಡುವಂತಿಲ್ಲ’ ಎಂದು ಸೂಚನೆ ನೀಡಿದ್ದಾರೆ.

ಆಯುಕ್ತರ ಈ ನಡೆಗೆ ತನಿಖಾ ಸಂಸ್ಥೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ಪ್ರಕರಣಗಳ ವಿಚಾರಣೆ ವಿಳಂಬವಾಗಲಿದೆ. ಸುಗಮ ತನಿಖೆಗೆ ಅಡ್ಡಿ ಆಗಲಿದೆ ಎಂದು ಬಿಎಂಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಯಪಟ್ಟರು.

ADVERTISEMENT

‘ಬಿಡಿಎ ಈ ನಿರ್ಧಾರದಿಂದ ಕೆಲವು ದಾಖಲೆಗಳನ್ನು ನಾಶಪಡಿಸಲು ಅವಕಾಶ ನೀಡಿದಂತಾಗುತ್ತದೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ನೆಪ ಹೇಳುವುದಕ್ಕೆ ಇದು ದಾರಿ ಮಾಡಿಕೊಡಲಿದೆ’ ಎಂದು ಬಿಎಂಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಯಾವುದಾದರೂ ಪ್ರಕರಣದ ತನಿಖೆಗೆ ಮಾಹಿತಿ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಿದಾಗ ತಕ್ಷಣವೇ ಅವರು ಸಂಬಂಧಪಟ್ಟ ದಾಖಲೆಗಳೊಂದಿಗೆ ತನಿಖೆಗೆ ಹಾಜರಾಗಲೇಬೇಕು. ಇಲ್ಲದಿದ್ದರೆ ನಾವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ, ‘ಪ್ರಾಧಿಕಾರದ ಮುಖ್ಯಸ್ಥರಾದ ಆಯುಕ್ತರ ಗಮನಕ್ಕೆ ತಾರದೆಯೇ ಅನ್ಯ ಕಚೇರಿಗೆ ಅಥವಾ ತನಿಖಾ ಸಂಸ್ಥೆಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡುವುದು ನಿಯಮಾನುಸಾರ ಸೂಕ್ತವಲ್ಲ’ ಎಂದು ತಿಳಿಸಿದ್ದಾರೆ.

‘ಬಿ.ಎಂ.ಟಿ.ಎಫ್ ಮತ್ತಿತರ ತನಿಖಾ ಸಂಸ್ಥೆಗಳು, ಬಿಡಿಎ ಜಾಗೃತ ದಳ ತನಿಖೆ ನಡೆಯುತ್ತಿರುವ ಪ್ರಕರಣಗಳ ವಿಚಾರಣೆ ಸಂಬಂಧ ಪ್ರಾಧಿಕಾರದ ವಿವಿಧ ಕಚೇರಿಗಳಿಗೆ ನೇರವಾಗಿ ಪತ್ರ ಬರೆಯುತ್ತಿವೆ. ದಾಖಲಾತಿಗಳೊಂದಿಗೆ ಹಾಜರಾಗುವಂತೆ ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸುತ್ತಿವೆ. ಕಡತಗಳನ್ನು ಹಾಗೂ ದಾಖಲಾತಿಗಳನ್ನು ಪಡೆದುಕೊಳ್ಳುತ್ತಿವೆ. ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯುಕ್ತರ ಗಮನಕ್ಕೆ ತಾರದೆಯೇ, ವಿಷಯಗಳನ್ನು ಚರ್ಚಿಸದೆಯೇ ನೇರವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಕಡತಗಳನ್ನು ಸಲ್ಲಿಸುತ್ತಿದ್ದಾರೆ. ತನಿಖಾ ಸಂಸ್ಥೆಗಳಿಂದ ಬಂದ ಪತ್ರಗಳ ಬಗ್ಗೆ ಗಮನ ಹರಿಸದೆ ತನಿಖೆಗೆ ಸಹಕಾರ ನೀಡದಿರುವ ಪ್ರಕರಣಗಳೂ ಇವೆ. ಈ ವಿಚಾರದಲ್ಲಿ ಶಿಸ್ತು ರೂಪಿಸಲು ಆಯುಕ್ತರು ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

‘ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಲಭ್ಯವಿರುತ್ತಿರಲಿಲ್ಲ. ಈ ಬಗ್ಗೆ ದೂರುಗಳೂ ಬಂದಿದ್ದವು. ಕಾರಣ ಕೇಳಿದರೆ ವಿಚಾರಣೆಗೆ ಹಾಜರಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದರು’ ಎಂದೂ ಅವರು ತಿಳಿಸಿದ್ದಾರೆ. ‘

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.