ADVERTISEMENT

ಬಿಡಿಎ: ಸದಸ್ಯರ ಕಚೇರಿಗೇ ಬೀಗ!

ಬಿಡಿಎ ಅಧಿಕಾರಿಗಳ ಶೀತಲ ಸಮರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 19:54 IST
Last Updated 30 ಡಿಸೆಂಬರ್ 2018, 19:54 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಅಧಿಕಾರಿಗಳ ನಡುವಿನ ಶೀತಲ ಸಮರ ತಾರಕಕ್ಕೇರಿದ್ದು, ಎಂಜಿನಿಯರಿಂಗ್‌ ಸದಸ್ಯರ ಕಚೇರಿಗೆ ಬೀಗ ಹಾಕುವುದರೊಂದಿಗೆ ಪರ್ಯಾವಸಾನಗೊಂಡಿದೆ.

ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್‌ ಪಾವತಿ ವಿಚಾರದಲ್ಲಿ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಹಾಗೂ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌ ನಡುವೆ ವೈಮನಸ್ಸು ಇತ್ತು.

ಆಯುಕ್ತರು ಶಿಫಾರಸು ಮಾಡಿದರೂ ಕೆಲವು ಗುತ್ತಿಗೆದಾರರಿಗೆ ಬಿಲ್‌ ಮೊತ್ತವನ್ನು ಬಿಡುಗಡೆ ಮಾಡಲು ಶಿವಕುಮಾರ್‌ ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆಯುಕ್ತರು ಎಂಜಿನಿಯರಿಂಗ್‌ ಸದಸ್ಯರ ಕಚೇರಿಗೆ ಬೀಗ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ADVERTISEMENT

ಅಧಿಕಾರಿಗಳು ಆಯುಕ್ತರ ಸೂಚನೆ ಮೇರೆಗೆ ಶುಕ್ರವಾರ ಸಂಜೆ ಎಂಜಿನಿಯರಿಂಗ್‌ ಸದಸ್ಯರ ಕಚೇರಿಗೆ ಬೀಗ ಹಾಕಿದರು.

ಬಳಿಕ ಎಂಜಿನಿಯರಿಂಗ್ ಸದಸ್ಯರು ಆಯುಕ್ತರನ್ನು ಭೇಟಿಯಾಗಿ, ‘ಸಚಿವರೊಬ್ಬರಿಂದ ಕರೆ ಬಂದಿದ್ದರಿಂದ ನಿಮ್ಮನ್ನು ಭೇಟಿ ಆಗಲು ಸಾಧ್ಯವಾಗಿಲ್ಲ’ ಎಂದು ಕಾರಣ ನೀಡಿದರು.

ಬಳಿಕವಷ್ಟೇ ಆಯುಕ್ತರು ಕಚೇರಿಗೆ ಹಾಕಿದ್ದ ಬೀಗವನ್ನು ಶನಿವಾರ ತೆಗೆಸಿದರು.

ಈ ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಅಂತಹ ಘಟನೆ ನಡೆದಿಲ್ಲವಲ್ಲ. ನನಗೇನೂ ಗೊತ್ತಿಲ್ಲ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಸಂವಹನ ಕೊರತೆಯಿಂದಾಗಿ ಸಮಸ್ಯೆ ಆಗಿದ್ದು ನಿಜ. ಆದರೆ ಇದು ಬಗೆಹರಿದಿದೆ’ ಎಂದು ತಿಳಿಸಿದರು.

ವೈಮನಸ್ಸು ಉಂಟಾಗಲು ಕಾರಣ..

‘ಎಂಜಿನಿಯರಿಂಗ್ ಸದಸ್ಯರು ಕಾಮಗಾರಿಗಳ ಬಿಲ್‌ ಪಾವತಿಗೆ ಜ್ಯೇಷ್ಠತೆ ಆಧಾರದಲ್ಲಿ ಶಿಫಾರಸು ಮಾಡುತ್ತಿಲ್ಲ. ಅವರಿಗೆ ಇಷ್ಟ ಬಂದವರಿಗೆ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಕೆಲವು ಗುತ್ತಿಗೆದಾರರು ಆಯುಕ್ತರ ಬಳಿ ಅಹವಾಲು ತೋಡಿಕೊಂಡಿದ್ದರು. ತಕ್ಷಣವೇ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಎಂಜಿನಿಯರಿಂಗ್‌ ಸದಸ್ಯರಿಗೆ ಸೂಚಿಸಿದ್ದರು.

ಆ ಬಳಿಕ ಕೆಲವು ಗುತ್ತಿಗೆದಾರರು ಎಂಜಿನಿಯರಿಂಗ್ ಸದಸ್ಯರನ್ನು ಭೇಟಿ ಆಗಿ ಬಿಲ್‌ ಪಾವತಿ ಮಾಡುವಂತೆ ಕೋರಿದ್ದರು.

ಇದರಿಂದ ಗುತ್ತಿಗೆದಾರರು ಹಾಗೂ ಎಂಜಿನಿಯರಿಂಗ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ತಮ್ಮ ಆದೇಶ ಪಾಲಿಸದ ಕುರಿತು ಕಚೇರಿಗೆ ಬಂದು ವಿವರಣೆ ನೀಡುವಂತೆ ಅವರಿಗೆ ಆಯುಕ್ತರು ಸೂಚಿಸಿದ್ದರು. ಎರಡು ಮೂರು ಬಾರಿ ಕರೆ ಕಳುಹಿಸಿದರೂ ಶಿವಕುಮಾರ್‌ ಆಯುಕ್ತರನ್ನು ಭೇಟಿ ಆಗಿರಲಿಲ್ಲ. ಇದು ಆಯುಕ್ತರ ಸಿಟ್ಟಿಗೆ ಕಾರಣವಾಗಿತ್ತು.

ಆಡಳಿತ ಮಂಡಳಿ ಸಭೆ ನಡಾವಳಿ ಬದಲು?

‘ಆಯುಕ್ತರು ಹಾಗೂ ಎಂಜಿನಿಯರಿಂಗ್‌ ಸದಸ್ಯರ ನಡುವೆ ಅಸಮಾಧಾನ ಭುಗಿಲೇಳುವುದಕ್ಕೆ ಬೇರೆ ಕಾರಣವೂ ಇದೆ. ಇತ್ತೀಚೆಗೆ ಬಿಡಿಎ ಆಡಳಿತ ಮಂಡಳಿ ಸಭೆ ನಡೆದ ಬಳಿಕ ನಡಾವಳಿಯಲ್ಲಿ ಕೆಲವೊಂದು ಅಂಶಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು. ಈ ವಿಚಾರದಲ್ಲಿ ಅವರಿಬ್ಬರ ನಡುವೆ ಒಮ್ಮತ ಇರಲಿಲ್ಲ. ಈ ಅಸಮಾಧಾನ ಇಷ್ಟೊಂದು ತಾರಕಕ್ಕೇರುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.