ADVERTISEMENT

ಬಿಡಿಎ ಫ್ಲ್ಯಾಟ್‌ | ಅವ್ಯವಸ್ಥೆ ಆಗರ: ನಿವಾಸಿಗಳು ಹೈರಾಣ

ಬಿಡಿಎ ಫ್ಲ್ಯಾಟ್‌ ಖರೀದಿಸಿದ್ದರೂ ವಾಸಕ್ಕೆ ಯೋಗ್ಯ ಇಲ್ಲ

ಅದಿತ್ಯ ಕೆ.ಎ.
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
<div class="paragraphs"><p>ತ್ಯಾಜ್ಯದ ತಾಣವಾಗಿರುವ ಅಪಾರ್ಟ್‌ಮೆಂಟ್‌ ಆವರಣ.</p></div>

ತ್ಯಾಜ್ಯದ ತಾಣವಾಗಿರುವ ಅಪಾರ್ಟ್‌ಮೆಂಟ್‌ ಆವರಣ.

   

ಬೆಂಗಳೂರು: ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್‌ ವೈರ್‌ಗಳು, ಮಳೆ ಬಂದರೆ ತಲೆದೋರುವ ಪ್ರವಾಹ ಸ್ಥಿತಿ, ಭದ್ರತಾ ಸಿಬ್ಬಂದಿಯಿಲ್ಲದೆ ನಿವಾಸಿಗಳಿಗೆ ಭಯದ ವಾತಾವರಣ, ಶಾಶ್ವತ ವಿದ್ಯುತ್‌ ಸಂಪರ್ಕವಿಲ್ಲದೇ ಪರಿತಪಿಸುತ್ತಿರುವ ನಿವಾಸಿಗಳು, ಕುಡಿಯುವ ನೀರಿಗೂ ತತ್ವಾರ...

– ಇದು ಗುಂಜೂರುಪಾಳ್ಯ ರಸ್ತೆಯ ಬಳಗೆರೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ವಸತಿ ಸಮುಚ್ಚಯದ ನಿವಾಸಿಗಳು ಎದುರಿಸುತ್ತಿರುವ ನಿತ್ಯದ ಗೋಳು.

ADVERTISEMENT

‘ಅಪಾರ್ಟ್‌ಮೆಂಟ್‌ ಸ್ಥಿತಿ ಶೋಚನೀಯವಾಗಿದೆ. ಇಲ್ಲಿ ಫ್ಲ್ಯಾಟ್ ಖರೀದಿಸಲೇ ಬಾರದಿತ್ತು’ ಎಂದು ಹೇಳುವ ನಿವಾಸಿಗಳು, ಅವ್ಯವಸ್ಥೆಯ ಕುರಿತು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಸೌಲಭ್ಯಗಳು ಮರೀಚಿಕೆಯಾಗಿವೆ.

ಅಪಾರ್ಟ್‌ಮೆಂಟ್‌ ನಿರ್ಮಾಣ ಕಾರ್ಯ ಆರಂಭವಾಗಿ 10 ವರ್ಷ ಕಳೆದಿದ್ದರೂ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಕಷ್ಟಗಳ ನಡುವೆ ಕೆಲವರು ವಾಸಿಸುತ್ತಿದ್ದಾರೆ. ಉಳಿದವರು ಫ್ಲ್ಯಾಟ್‌ ಖರೀದಿಸಿದ್ದರೂ ಅಲ್ಲಿ ನೆಲೆಸಿಲ್ಲ.

ಸುಸಜ್ಜಿತ ಅಪಾರ್ಟ್‌ಮೆಂಟ್‌ ನಿರ್ಮಿಸಿ, ಕೊಡುವುದಾಗಿ ಬಿಡಿಎ ಭರವಸೆ ನೀಡಿತ್ತು. ಆದರೆ, ಇದುವರೆಗೂ ಕಾಮಗಾರಿಗಳು ಮುಕ್ತಾಯಗೊಂಡಿಲ್ಲ ಎಂದು ನಿವಾಸಿಗಳು ದೂರುತ್ತಾರೆ.  ‌

‘2017ರಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಮೇವರಿಕ್‌ ಹೋಲ್ಡಿಂಗ್ಸ್‌ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. ಒಂದು ವರ್ಷದ ಕಾಲಮಿತಿ ನೀಡಲಾಗಿತ್ತು. ಆದರೆ, ಇದುವರೆಗೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಮಧ್ಯಮ ವರ್ಗಕ್ಕೆ ವಸತಿ ಸೌಲಭ್ಯಕ್ಕೆ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿತ್ತು. ಅದು ಸಾಕಾರಗೊಂಡಿಲ್ಲ’ ಎಂದು ನಿವಾಸಿ ನಾರಾಯಣ ಶೆಟ್ಟಿ ಅಳಲು ತೋಡಿಕೊಳ್ಳುತ್ತಾರೆ.

ಸದ್ಯ 200 ಫ್ಲ್ಯಾಟ್‌ಗಳಲ್ಲಿ ಮಾತ್ರ ಖರೀದಿದಾರರು ವಾಸವಿದ್ದಾರೆ. ವಾಸಕ್ಕೆ ಯೋಗ್ಯವಿಲ್ಲವೆಂದು 400 ಫ್ಲ್ಯಾಟ್‌ಗಳ ಮಾಲೀಕರು ಬೀಗ ಹಾಕಿ ಬಾಡಿಗೆ ಮನೆಗಳಲ್ಲಿಯೇ ಉಳಿದಿದ್ದಾರೆ. ಬಿಡಿಎ ಫ್ಲ್ಯಾಟ್‌ ಖರೀದಿಸಿದ್ದರೂ ವಾಸದ ಭಾಗ್ಯ ಸಿಕ್ಕಿಲ್ಲ.

ಏನೆಲ್ಲಾ ಅವ್ಯವಸ್ಥೆ?: ‌

ಬ್ಲಾಕ್‌–3ರಲ್ಲಿ ಲಿಫ್ಟ್‌ ಸೇವೆ ಇನ್ನೂ ಆರಂಭಗೊಂಡಿಲ್ಲ. ಕೆಲವು ಬ್ಲಾಕ್‌ಗಳಲ್ಲಿ ಲಿಫ್ಟ್ ಯಂತ್ರದ ಒಳಗೆ ಮಳೆ ನೀರು ಸೇರಿ ಕೆಟ್ಟು ಹೋಗಿದೆ. ಎರಡು ವರ್ಷವಾದರೂ ದುರಸ್ತಿ ಪಡಿಸಿಲ್ಲ. ವೃದ್ಧರು ಮೆಟ್ಟಿಲುಗಳನ್ನೇ ಆಶ್ರಯಿಸಿ ತಮ್ಮ ಫ್ಲ್ಯಾಟ್‌ಗಳಿಗೆ ತೆರಳುತ್ತಿದ್ದಾರೆ. ಅಪಾರ್ಟ್‌ಮೆಂಟ್‌ ಆವರಣಕ್ಕೆ ಜನರೇಟರ್‌ ತಂದಿಟ್ಟು ನಾಲ್ಕು ವರ್ಷಗಳು ಕಳೆದಿದೆ. ಬಳಕೆ ಮಾಡುತ್ತಿಲ್ಲ. ಅವುಗಳು ತುಕ್ಕು ಹಿಡಿಯುತ್ತಿವೆ. ಅಲ್ಲದೇ ಕಟ್ಟಡಕ್ಕೆ ಶಾಶ್ವತ ವಿದ್ಯುತ್‌ ಸಂಪರ್ಕವೇ ಇಲ್ಲ ಎಂದು ಅಪಾಯಕ್ಕೆ ಬಾಯ್ತೆರೆದಿರುವ ವಿದ್ಯುತ್‌ ತಂತಿಗಳನ್ನು ನಿವಾಸಿಗಳು ತೋರಿಸುತ್ತಾರೆ.

ಲಕ್ಷಾಂತರ ರೂಪಾಯಿ ನೀಡಿ ಒಂದು, ಎರಡು, ಮೂರು ಮಲಗುವ ಕೋಣೆಯುಳ್ಳ ಫ್ಲ್ಯಾಟ್‌ ಖರೀದಿಸಿದ್ದರೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಎರಡು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದರೂ ಸಂಪರ್ಕ ಕಲ್ಪಿಸಿಲ್ಲ.

ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್‌ ವೈರ್‌ಗಳು.
ಲಿಫ್ಟ್‌ ವ್ಯವಸ್ಥೆ ಕಾಣದ ಅಪಾರ್ಟ್‌ಮೆಂಟ್‌.
ಬಿಡಿಎ ಅಪಾರ್ಟ್‌ಮೆಂಟ್‌ ಆವರಣದ ಸ್ಥಿತಿ.

ವಸತಿ ಸಮುಚ್ಚಯದ ಆವರಣ ತ್ಯಾಜ್ಯದ ತಾಣವಾಗಿದೆ. ಭದ್ರತೆಯೂ ಇಲ್ಲ. ಇಲ್ಲಿ ಫ್ಲ್ಯಾಟ್‌ ಖರೀದಿಸಿ ಸಂಕಷ್ಟ ಎದುರಿಸುತ್ತಿದ್ದೇವೆ.

–ನಾರಾಯಣ ಶೆಟ್ಟಿ ನಿವಾಸಿ

ಏನೆಲ್ಲಾ ಸಮಸ್ಯೆಯಿದೆ...

* ವಾಹನ ನಿಲುಗಡೆಗೆ ಜಾಗ ಖರೀದಿಸಿದ್ದರೂ ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ

* ಏಳು ಅಂತಸ್ತಿನ ಕಟ್ಟಡದ ಯಾವ ಭಾಗದಲ್ಲೂ ಅಗ್ನಿ ಸುರಕ್ಷತಾ ಪರಿಕರ ಅಳವಡಿಸಿಲ್ಲ.

* ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಮಳೆಯ ನೀರು ಸರಾಗವಾಗಿ ಹರಿಯುತ್ತಿಲ್ಲ.

* ಕಲುಷಿತ ನೀರು ಶುದ್ಧೀಕರಣ ಘಟಕ ನಿರ್ಮಿಸಿ ನಾಲ್ಕು ವರ್ಷ ಕಳೆದಿದ್ದರೂ ಕಾರ್ಯಾರಂಭ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.