ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಗಸ್ಟ್ 30ರಂದು ಕಣಿಮಿಣಿಕೆ ವಸತಿ ಸಮುಚ್ಚಯದಲ್ಲಿ ಫ್ಲ್ಯಾಟ್ ಮೇಳವನ್ನು ಆಯೋಜಿಸಿದೆ. ಗ್ರಾಹಕರು ಪೂರ್ಣ ಹಣ ಪಾವತಿಸಿದರೆ ಐದು ದಿನಗಳಲ್ಲಿ ನೋಂದಣಿ ಮಾಡಲಾಗುವುದು ಎಂದು ಬಿಡಿಎ ಹೇಳಿದೆ.
ನಾನಾ ಬಡಾವಣೆಗಳಲ್ಲಿ ಬಿಡಿಎ ನಿರ್ಮಿಸಿರುವ ಫ್ಲ್ಯಾಟ್‌ಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುವುದು. 2,604 ಫ್ಲ್ಯಾಟ್‌ಗಳು ಮತ್ತು 241 ವಿಲ್ಲಾಗಳು ಮಾರಾಟಕ್ಕೆ ಲಭ್ಯವಿದ್ದು, ಸ್ಥಳದಲ್ಲಿಯೇ ಗೃಹ ಸಾಲ ಸೌಲಭ್ಯ ಕೂಡ ಇದೆ.
ಮೈಸೂರಿನ ರಸ್ತೆಯಲ್ಲಿರುವ ಕಣಿಮಿಣಿಕೆ ವಸತಿ ಸಮುಚ್ಚಯದಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಫ್ಲ್ಯಾಟ್ ಮೇಳ ನಡೆಯಲಿದೆ.
ಸಾಮಾನ್ಯವಾಗಿ ಬಿಡಿಎನಲ್ಲಿ ಫ್ಲ್ಯಾಟ್ ಅಥವಾ ವಿಲ್ಲಾ ಖರೀದಿಸಿದರೆ ನೋಂದಣಿಗೆ ಅಲೆದಾಡಬೇಕಾಗಿತ್ತು. ಆದರೆ, ಇದೀಗ ಐದೇ ದಿನಗಳಲ್ಲಿ ನೋಂದಣಿ ಆಗಲಿದೆ.
ಬಿಡಿಎ ನಿರ್ಮಿಸಿರುವ ನಾನಾ ವಸತಿ ಸಮುಚ್ಚಯಗಳಲ್ಲಿ 4,468 ಫ್ಲ್ಯಾಟ್‌ಗಳು ಮತ್ತು 322 ವಿಲ್ಲಾಗಳ ಪೈಕಿ 1,864 ಫ್ಲ್ಯಾಟ್ ಮತ್ತು 81 ವಿಲ್ಲಾಗಳು ಮಾರಾಟವಾಗಿವೆ. ಈ ಪೈಕಿ 2,604 ಫ್ಲ್ಯಾಟ್‌ಗಳು, 241 ವಿಲ್ಲಾಗಳು ಖಾಲಿಯಿವೆ.
‘ಕಣಿಮಿಣಿಕೆಯಲ್ಲಿ 50 ಎಕರೆ ಪ್ರದೇಶದಲ್ಲಿ ಫೇಸ್ 1ರಿಂದ 5ನೇ ಬ್ಲಾಕ್‌ವರೆಗೆ ಆಧುನಿಕ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಮೊದಲ ಬಾರಿಗೆ ಫ್ಲ್ಯಾಟ್‌ನ ಪೂರ್ಣ ಮೊತ್ತವನ್ನು ಪಾವತಿಸಿ, 16 'ಬಿ' ಫಾರಂ ಸಲ್ಲಿಸಿದಲ್ಲಿ ಐದು ದಿನಗಳಲ್ಲಿ ಫ್ಲ್ಯಾಟ್ ನೋಂದಣಿ ಮಾಡಿಕೊಡಲಾಗುವುದು’ ಎಂದು ಬಿಡಿಎ ಆರ್ಥಿಕ ಸದಸ್ಯ ಡಾ. ಎ. ಲೋಕೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.