ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಫ್ಲ್ಯಾಟ್‌ಗಳಲ್ಲಿನ ಕಾರು ಪಾರ್ಕಿಂಗ್ ಶುಲ್ಕವನ್ನು ಪರಿಷ್ಕರಿಸಿದ್ದು, ₹2 ಲಕ್ಷ ದಿಂದ ₹ 2.50 ಲಕ್ಷಗಳಿಗೆ ಏರಿಕೆ ಮಾಡಿದೆ.
ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ 13 ವಸತಿ ಯೋಜನೆಗಳಲ್ಲಿ ಲಭ್ಯವಿರುವ ಫ್ಲ್ಯಾಟ್/ವಿಲ್ಲಾಗಳಿಗೆ ಸಂಬಂಧಿಸಿದಂತೆ ಪಾರ್ಕಿಂಗ್ ಶುಲ್ಕವನ್ನು ₹50 ಸಾವಿರ ಏರಿಕೆ ಮಾಡಿದೆ. 2 ಬಿಎಚ್‌ಕೆ ಮೇಲ್ಪಟ್ಟ ಎಲ್ಲಾ ಫ್ಲ್ಯಾಟ್‌ಗಳಿಗೆ ಮೂಲ ದರದ ಜತೆಗೆ ಪ್ರತ್ಯೇಕವಾಗಿ ₹2.50 ಲಕ್ಷ ಕಾರು ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ. ಕೆಲವೆಡೆ 1 ಬಿಎಚ್‌ಕೆ ಫ್ಲ್ಯಾಟ್ ಖರೀದಿಸುವವರಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಕಣಿಮಿಣಿಕೆ 4ನೇ ಹಂತದಲ್ಲಿ 3 ಬಿಎಚ್‌ಕೆ ಮನೆಗಳಿಗೆ ₹40 ಲಕ್ಷ ದರವಿದ್ದು, ಜತೆಗೆ ₹2.50 ಲಕ್ಷ ಕಾರು ಪಾರ್ಕಿಂಗ್ ಮತ್ತು ₹1,29,250 ವಿದ್ಯುತ್ ಶುಲ್ಕ ನಿಗದಿಪಡಿಸಲಾಗಿದೆ. ಕಣಿಮಿಣಿಕೆ 2ನೇ ಹಂತದಲ್ಲಿ 2 ಬಿಎಚ್‌ಕೆ ಮನೆಗಳಿಗೆ ₹25 ಲಕ್ಷ ಬೆಲೆ ನಿಗದಿಪಡಿಸಿದ್ದು, ₹91,250 ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಣಿಮಿಣಿಕೆ 3ನೇ ಹಂತದಲ್ಲಿ 2 ಬಿಎಚ್‌ಕೆ ಫ್ಲ್ಯಾಟ್‌ಗೆ ₹ 30 ಲಕ್ಷವಿದ್ದು, ₹91,250 ವಿದ್ಯುತ್ ಶುಲ್ಕ ಪಾವತಿಸಬೇಕು.
ಕೊಮ್ಮಘಟ್ಟ 1 ಮತ್ತು 2ನೇ ಹಂತ, ಕೊಮ್ಮಘಟ್ಟ ಎನ್‌ಪಿಕೆಎಲ್ 1, 2 ಮತ್ತು 3ನೇ ಹಂತ, ಕೋನದಾಸಪುರ 2ನೇ ಹಂತ, ಗುಂಜೂರು 2ನೇ ಹಂತ, ತಿಪ್ಪಸಂದ್ರ, ದೊಡ್ಡಬನಹಳ್ಳಿ 1 ಮತ್ತು 2ನೇ ಹಂತ, ನಾಗರಬಾವಿ, ಮಾಲಗಾಳ 2ನೇ ಹಂತ ಮತ್ತು ಕೊತ್ತನೂರಿನ 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಮೂಲ ದರದ ಜತೆಗೆ ಕಾರು ಪಾರ್ಕಿಂಗ್ ಶುಲ್ಕ ಮತ್ತು ವಿದ್ಯುತ್ ಶುಲ್ಕಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.