ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ (ಬಿಡಿಎ) ಬನಶಂಕರಿ 6ನೇ ಹಂತದ ಬಡಾವಣೆ ಅಭಿವೃದ್ಧಿಗಾಗಿ ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಿ 24 ವರ್ಷ ಕಳೆದರೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದ ಹಿನ್ನೆಲೆಯಲ್ಲಿ, ಕೆಲವು ಜಮೀನುಗಳಿಗೆ ಸಂಬಂಧಿಸಿದಂತೆ ಬಿಡಿಎ ಕೈಗೊಂಡಿದ್ದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಭೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ತಲಘಟ್ಟಪುರದ ಎಚ್.ನಾಗರಾಜಯ್ಯ ಸೇರಿದಂತೆ ಒಟ್ಟು ನಾಲ್ವರು ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಬಿಡಿಎ ಒಟ್ಟು 2,138 ಎಕರೆ ಭೂ ಸ್ವಾಧೀನಕ್ಕೆ ಉದ್ದೇಶಿಸಿತ್ತು. ಆದರೆ, 24 ವರ್ಷ ಕಳೆದರೂ ಜಮೀನನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಈತನಕ ಎಷ್ಟು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಪೂರಕ ದಾಖಲೆಗಳನ್ನೂ ಸಲ್ಲಿಸಿಲ್ಲ. ಹಾಗಾಗಿ, ಬಡಾವಣೆ ಅಭಿವೃದ್ಧಿ ಯೋಜನೆಯನ್ನು ಬಹುತೇಕ ಅನುಷ್ಠಾನಗೊಳಿಸಲಾಗಿದೆ ಎಂಬ ಸರ್ಕಾರ ಮತ್ತು ಬಿಡಿಎ ವಾದವನ್ನು ಒಪ್ಪಲಾಗದು’ ಎಂದು ನ್ಯಾಯಪೀಠ ಹೇಳಿದೆ.
‘ಕೆಲವು ಜಮೀನುಗಳಿಗೆ ಸಂಬಂಧಿಸಿದಂತೆ ಬಿಡಿಎ ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಈ ನಿಟ್ಟಿನಲ್ಲಿ ಕೆಲವು ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯನ್ನೂ ಕೈಬಿಡಲಾಗಿತ್ತು. ಆದರೂ, ಕೆಲವು ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿರುವುದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾದುದಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮನವಿ ಏನಿತ್ತು?: ‘ಸ್ವಾಧೀನ ಪ್ರಕ್ರಿಯೆ ಆರಂಭಿಸಿ 24 ವರ್ಷ ಕಳೆದರೂ ಭೂ ಸ್ವಾಧೀನಪಡಿಸಿಕೊಂಡಿಲ್ಲ. ಬಹುತೇಕ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟು ಕೆಲವು ಜಮೀನುಗಳಿಗೆ ಸಂಬಂಧಿಸಿದಂತೆ ಮಾತ್ರವೇ ಪ್ರಕ್ರಿಯೆ ಮುಂದುವರಿಸಿರುವುದು ಕಾನೂನು ಬಾಹಿರ ಮತ್ತು ತಾರತಮ್ಯದ ಕ್ರಮವಾಗಿದೆ. ಹಾಗಾಗಿ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಈ ಆದೇಶದಿಂದಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ಹೆಮ್ಮಿಗೆಪುರ, ಗಾಣಕಲ್ಲು ಮತ್ತಿತರೆ ಗ್ರಾಮಗಳ ಸುಮಾರು 350 ನಿವೇಶನಗಳ ಭೂ ಮಾಲೀಕರಿಗೆ ಪರಿಹಾರ ದೊರೆತಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.