ಬೆಂಗಳೂರು: ವಿವಿಧ ಸಂಘ ಸಂಸ್ಥೆ ಹಾಗೂ ಟ್ರಸ್ಟ್‌ಗಳು ನಾಗರಿಕ ಸೌಲಭ್ಯ (ಸಿ.ಎ) ನಿವೇಶನಗಳ ಗುತ್ತಿಗೆ ನವೀಕರಣ ಶುಲ್ಕ ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದರು.
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ದೇವಾಲಯಗಳು, ಚರ್ಚ್, ಮಸೀದಿ ಹೀಗೆ ನಾಗರಿಕ ಸೌಲಭ್ಯದಡಿ ನಿವೇಶನ ಪಡೆದುಕೊಂಡಿವೆ. 1,600 ಸಂಘ ಸಂಸ್ಥೆಗಳಿಗೆ ಸಿ.ಎ ನಿವೇಶನ ಹಂಚಿಕೆಯಾಗಿದ್ದು, 30 ವರ್ಷಗಳಿಗೆ ಗುತ್ತಿಗೆ ಅವಧಿ ಇದೆ. ಕೆಲ ದೇವಸ್ಥಾನಗಳಿಗೆ ಆದಾಯ ಇರುವುದಿಲ್ಲ. ಹಾಗಾಗಿ ಗುತ್ತಿಗೆ ನವೀಕರಣ ಮಾಡಿಸಿಕೊಂಡಿರುವುದಿಲ್ಲ. 120 ದಿನದೊಳಗೆ ನಿವೇಶನ ನವೀಕರಣ ಶುಲ್ಕ ಪಾವತಿಸಿದರೆ, ಬಡ್ಡಿ ಮನ್ನಾ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದ್ಯದ ಮಾಹಿತಿ ಪ್ರಕಾರ 250ಕ್ಕೂ ಹೆಚ್ಚು ಸಿ.ಎ ನಿವೇಶನಗಳ ಗುತ್ತಿಗೆ ನವೀಕರಣ ಆಗಬೇಕಿದೆ. ಆಯಾ ಪ್ರದೇಶದ ಮಾರ್ಗಸೂಚಿ ಪ್ರಕಾರ ಶುಲ್ಕ ನಿಗದಿ ಮಾಡಲಾಗಿದೆ. ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಾಡಪ್ರಭು ಕೆಂಪೇಗೌಡ ಬಡಾವಣೆಯ 9 ಬ್ಲಾಕ್‌ಗಳ ಪೈಕಿ 5 ಬ್ಲಾಕ್‌ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಬ್ಲಾಕ್‌ಗಳಲ್ಲಿ ಶೇಕಡ 20 ರಿಂದ 30ರಷ್ಟು ಕಾಮಗಾರಿ ಬಾಕಿ ಇದೆ. ಎಲ್ಲ ರೀತಿಯ ಸೌಲಭ್ಯ ಒದಗಿಸಿರುವ ಕಡೆಯೂ ಮನೆಗಳನ್ನು ನಿರ್ಮಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಹಾಯವಾಣಿ ಆರಂಭ: ಸಾರ್ವಜನಿಕರ ಅನುಕೂಲಕ್ಕಾಗಿ ನಾಗರಿಕ ಸಹಾಯ ಕೇಂದ್ರ (ಸಿಎಸಿ) ಕಾರ್ಯಾರಂಭ ಮಾಡಿದ್ದು, ಕುಂದು ಕೊರತೆಗಳು ಅಥವಾ ಮನವಿಗಳ ಕುರಿತು 94831–66622 ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು.
ಕೇಂದ್ರವು ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸಲಿದ್ದು, ಕರೆಗಳನ್ನು ಸ್ವೀಕರಿಸಿ ಕೇಂದ್ರದ ಇ ಗರ್ವನೆನ್ಸ್ ಇಲಾಖೆ ಅಭಿವೃದ್ಧಿ ಪಡಿಸಿರುವ ಐಪಿಜಿಆರ್‌ಎಸ್ ಲಾಗಿನ್ ಅನ್ನು ಬಳಸಿ ತಂತ್ರಾಂಶದಲ್ಲಿ ಅಳವಡಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಿತ್ಯ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಎಂದು ಪ್ರಾಧಿಕಾರದ ಆಯುಕ್ತ ಮಣಿವಣ್ಣನ್ ತಿಳಿಸಿದರು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್ ವೆಬ್ ಆ್ಯಪ್) ಅಥವಾ ನಾಗರಿಕ ಸಹಾಯ ಕೇಂದ್ರಕ್ಕೆ ಕರೆ ಮಾಡುವ ಮೂಲಕ ಅಥವಾ ನೇರವಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಸಾರ್ವಜನಿಕರಿಂದ ಸ್ವೀಕೃತವಾದ ದೂರುಗಳನ್ನು ಪರಿಶೀಲಿಸಿ 30 ದಿನದೊಳಗೆ ಪರಿಹಾರ (ಎಲ್1, ಎಲ್2, ಎಲ್3 ಪ್ರತಿ ಹಂತಗಳಿಗೆ ಗರಿಷ್ಠ ಹತ್ತು ದಿನಗಳು) ಒದಗಿಸಲಾಗುವುದು. ಪ್ರಾಧಿಕಾರದ ನಿಯಮಗಳ ಅನುಸಾರ ಕ್ರಮವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡಿ ಮುಕ್ತಾಯ ಮಾಡಲಾಗುತ್ತದೆ ಎಂದು ವಿವರಿಸಿದರು.
ಪ್ರಾಧಿಕಾರ ಕೈಗೊಂಡ ಕ್ರಮ ತೃಪ್ತಿಕರವಾಗದೇ ಇದ್ದಲ್ಲಿ ಪ್ರತಿ ಗುರುವಾರ ಮಧ್ಯಾಹ್ನ ವಲಯವಾರು ಸಾರ್ವಜನಿಕರ ಸಮಕ್ಷಮದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ತಿಂಗಳ ಮೊದಲ ಗುರುವಾರ ಉತ್ತರ ವಿಭಾಗದ ಸಭೆ ನಡೆದರೆ, ಎರಡನೇ, ಮೂರನೇ ಮತ್ತು ನಾಲ್ಕನೇ ಗುರುವಾರದಂದು ಕ್ರಮವಾಗಿ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಿಭಾಗದ ಸಭೆ ನಡೆಸಲಾಗುವುದು. ನ್ಯಾಯಾಲಯದಲ್ಲಿರುವ ವ್ಯಾಜ್ಯಗಳ ಬಗ್ಗೆ ಸಭೆ ನಡೆಸುವುದಿಲ್ಲ. ಆದರೆ, ಅವರಿಗೆ ಸೂಕ್ತ ಸಲಹೆ ನೀಡಲಾಗುವುದು ಎಂದು ತಿಳಿಸಿದರು.
Quote - ಹೆಬ್ಬಾಳ ಮೇಲ್ಸೇತುವೆ ಬಳಿ ನಡೆಯುತ್ತಿರುವ ಹೊಸ ಲೂಪ್ (ಪಥ) ನಿರ್ಮಾಣ ಕಾಮಗಾರಿ ಆಗಸ್ಟ್ ಎರಡನೇ ವಾರ ಪೂರ್ಣಗೊಳ್ಳಲಿದೆ. ಇದರಿಂದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆ ಆಗಲಿದೆ. ಎನ್.ಎ.ಹ್ಯಾರಿಸ್ ಬಿಡಿಎ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.