ADVERTISEMENT

ಶೀಘ್ರ ಕಾಮಗಾರಿ ಪೂರ್ಣ: ಕೆಂಪೇಗೌಡ ಬಡಾವಣೆಯ ನಿವಾಸಿಗಳ ಜತೆ ಬಿಡಿಎ ಸಭೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:31 IST
Last Updated 13 ಮೇ 2025, 16:31 IST
ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ 
ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ    

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ರೇರಾ ಸಲಹೆ ಮೇರೆಗೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆದಾರರ ಜತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಗಳವಾರ ಸಭೆ ನಡೆಸಿತು.

ರಸ್ತೆ, ವಿದ್ಯುತ್, ಒಳಚರಂಡಿ, ಕುಡಿಯುವ ನೀರು, ಎಸ್.ಟಿ.ಪಿ., ಉಪ ವಿದ್ಯುತ್ ಕೇಂದ್ರ, ಉದ್ಯಾನ ಇತರೆ ಮೂಲಭೂತ ಸೌಕರ್ಯಗಳನ್ನು ಬಡಾವಣೆಗೆ ಒದಗಿಸಲಾಗಿದೆ. ಶೇಕಡ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ನಿವಾಸಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಬಡಾವಣೆಯ ಕೆಲವು ಭಾಗಗಳಲ್ಲಿ 550 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರು. ಭೂಮಾಲೀಕರೊಡನೆ ಪ್ರಕರಣ ಇತ್ಯರ್ಥಗೊಳಿಸಲು ಮೂರು ತಿಂಗಳ ಕಾಲಾವಕಾಶವನ್ನು ಕೋರ್ಟ್ ನೀಡಿತು. ಭೂಮಾಲೀಕರ ಅಹವಾಲುಗಳನ್ನು ಪರಿಶೀಲಿಸಲಾಯಿತು. ಬಡಾವಣೆಯ ಯೋಜಿತ ಬೆಳವಣಿಗೆಗೆ ಜಮೀನು ಅವಶ್ಯಕತೆ ಇರುವುದರಿಂದ ಅವರ ಕೋರಿಕೆಯನ್ನು ತಿರಸ್ಕರಿಸಲಾಯಿತು. ಬಡಾವಣೆಯ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ADVERTISEMENT

ಹಂತ, ಹಂತವಾಗಿ ಭೂಸ್ವಾಧೀನ ಆಗುತ್ತಿರುವುದರಿಂದ ಮೂಲ ಸೌಕರ್ಯ ಕಾಮಗಾರಿಗಳ ವಿಳಂಬವಾಗುತ್ತಿದೆ. ನ್ಯಾಯಾಲಯದ ಪ್ರಕರಣದಿಂದಾಗಿ ಬಡಾವಣೆಯ ಕಾಮಗಾರಿ ವಿಳಂಬವಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಸಭೆಯಲ್ಲಿ ಆಯುಕ್ತ ಎನ್. ಜಯರಾಮ್, ಕಾರ್ಯಪಾಲಕ ಎಂಜಿನಿಯರ್ (ವಿದ್ಯುತ್‌) ವಸಂತ್ ಕುಮಾರ್, ಒಳಚರಂಡಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ನಾಡಪ್ರಭು ಕೆಂಪೇಗೌಡ ಬಡಾವಣೆ ಕಾರ್ಯಪಾಲಕ ಎಂಜಿನಿಯರ್ ಸಿ.ಎನ್.ಅಶೋಕ್, ಅಭಿಯಂತರ ಅಧಿಕಾರಿ ಬಿ.ಆರ್.ಉಮೇಶ್, ಅಭಿಯಂತರ ಸದಸ್ಯ ಎಚ್‌.ಆರ್.ಶಾಂತರಾಜಣ್ಣ ಭಾಗವಹಿಸಿದ್ದರು.

ಸಭೆ ಬಹಿಷ್ಕಾರ:

ಎನ್‌ಪಿಕೆಎಲ್ ‘ನಿವೇಶನದಾರರ ಕುಂದುಕೊರತೆಗಳನ್ನು ಸರಿಯಾಗಿ ಆಲಿಸದ ಕಾರಣ ಸಭೆಯಿಂದ ಹೊರಬರಬೇಕಾಯಿತು’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ (ಎನ್‌ಪಿಕೆಎಲ್‌) ತಿಳಿಸಿದೆ. ‘ಇಪ್ಪತ್ತು ನಿಮಿಷ ನಡೆದ ಸಭೆಯಲ್ಲಿ ವೇದಿಕೆ ಪ್ರತಿನಿಧಿಗಳಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅಧಿಕಾರಿಗಳು ಸರ್ವಾಧಿಕಾರ ಧೋರಣೆಯಿಂದ ವರ್ತಿಸಿದರು. ಮೂಲ ನಿವೇಶನದಾರರಿಗೆ ಮಾತ್ರ ಮಾತನಾಡಲು ಮತ್ತು ಅಹವಾಲು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಆಯುಕ್ತರು ಹೇಳಿದರು. ಈ ಕೂಡಲೇ ಉಪಮುಖ್ಯಮಂತ್ರಿ ಮತ್ತು ಬಿಡಿಎ ಅಧ್ಯಕ್ಷರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಎನ್‌ಕೆಪಿಎಲ್ ಗೌರವಾಧ್ಯಕ್ಷ ಶ್ರೀಧರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.